ಶನಿವಾರ, ನವೆಂಬರ್ 28, 2020
26 °C
ಕೋವಿಡ್‌ ಕಾರಣ 200 ಮಂದಿಗೆ ಮಾತ್ರ ಅವಕಾಶ * ಸ್ಥಳದಲ್ಲಿಯೇ ಕೋವಿಡ್ ಪರೀಕ್ಷೆಯ ವ್ಯವಸ್ಥೆ

65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಕಾರಣ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 200 ಮಂದಿಗೆ ಮಾತ್ರ ಅವಕಾಶ ನೀಡಿದ್ದು, ಶನಿವಾರ (ನ.7) ಬೆಳಿಗ್ಗೆ 11.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ 65 ಮಂದಿ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ.

ಕೋವಿಡ್‌ ಪ್ರಕರಣಗಳು ಹೆಚ್ಚಿದ ಬೆನ್ನಲ್ಲಿಯೇ ರಾಜ್ಯದಲ್ಲಿ ರಂಗ ಮಂದಿರಗಳನ್ನು ಮುಚ್ಚಲಾಗಿತ್ತು. ಸರ್ಕಾರವು ಕಳೆದ ತಿಂಗಳು ರಂಗ ಮಂದಿರಗಳ ಪುನರಾರಂಭಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿತ್ತು. ಹೀಗಾಗಿ 7 ತಿಂಗಳ ಬಳಿಕ ರವೀಂದ್ರ ಕಲಾಕ್ಷೇತ್ರದಲ್ಲಿ ಮೊದಲ ಕಾರ್ಯಮ ನಡೆಯುತ್ತಿದ್ದು, ವೇದಿಕೆಯನ್ನು ವಿವಿಧ ಬಗೆಯ  ಹೂವುಗಳಿಂದ ಶೃಂಗಾರ ಮಾಡಲಾಗಿದೆ. ಆಸನಗಳ ನಡುವೆ ಪರಸ್ಪರ ಅಂತರ ಕಾಯ್ದುಕೊಳ್ಳುವ ಸಂಬಂಧ ಗುರುತು ಮಾಡಲಾಗಿದೆ.

‘ಪ್ರಶಸ್ತಿ ಪುಸರಸ್ಕೃತರ ಕುಟುಂಬದ ಸದಸ್ಯರೊಬ್ಬರಿಗೆ ಅವಕಾಶ ನೀಡಲಾಗುತ್ತದೆ. ಅಧಿಕಾರಿಗಳು ಹಾಗೂ ಅಕಾಡೆಮಿಗಳ ಅಧ್ಯಕ್ಷರು ಇರಲಿದ್ದಾರೆ. 200 ಮಂದಿಗೆ ಮಾತ್ರ ಕಲಾಕ್ಷೇತ್ರದಲ್ಲಿ ಅವಕಾಶ ನೀಡಲಾಗುವುದು. ಎಲ್ಲರೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು, ಅದರ ವರದಿ ತಂದಿರಬೇಕು. ಪರೀಕ್ಷಾ ವರದಿಯ ಅವಧಿ ಒಂದು ವಾರವನ್ನು ಮೀರಿರಬಾರದು. ಪರೀಕ್ಷಾ ವರದಿ ತರದವರಿಗೆ ಬೆಳಿಗ್ಗೆ 9 ಗಂಟೆಯಿಂದ ರ್‍ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಕೋವಿಡ್‌ ಮಾರ್ಗಸೂಚಿಯನ್ನು ಪ್ರತಿಯೊಬ್ಬರು ಪಾಲಿಸುವಂತೆ ನೋಡಿಕೊಳ್ಳಲಾಗುವುದು’ ಎಂದು ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ತಿಳಿಸಿದರು. 

ಸೋಂಕಿತರಿಗೆ ಪ್ರತ್ಯೇಕ ಕೊಠಡಿ: ‘ಕೋವಿಡ್ ಪರೀಕ್ಷೆಯ ವೇಳೆ ಪ್ರಶಸ್ತಿ ಪುರಸ್ಕೃತರು ಸೋಂಕಿತರಾಗಿರುವುದು ದೃಢಪಟ್ಟಲ್ಲಿ ವಿಶ್ರಾಂತಿ ಪಡೆಯಲು ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಕುಟುಂಬದ ಸದಸ್ಯರ ಜತೆಗೆ ಚರ್ಚಿಸಿ, ಎಲ್ಲಿ ಚಿಕಿತ್ಸೆ ನೀಡಬೇಕೆನ್ನುವ ಬಗ್ಗೆ ನಿರ್ಧರಿಸಲಾಗುತ್ತದೆ. ಅವರು ಗುಣಮುಖರಾದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಮನೆಗೆ ತೆರಳಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ’ ಎಂದರು.

ಸಮಾರಂಭದಲ್ಲಿ ಗಣ್ಯರು ಭಾಗಿ

ಬೆಳಿಗ್ಗೆ 10.30ರಿಂದ 11.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಾಧಕರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಸೇರಿದಂತೆ ವಿವಿಧ ಸಚಿವರು, ಶಾಸಕರು ಉಪಸ್ಥಿತರಿರಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಪ್ರಶಸ್ತಿ ಪುರಸ್ಕೃತರಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿಯು ಭೋಜನಕೂಟ ಏರ್ಪಡಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಚಂದನ ವಾಹಿನಿಯು ನೇರಪ್ರಸಾರ ಮಾಡಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು