ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಜ್ಜಯಿನಿ ಪೀಠ ವಿವಾದಕ್ಕೆ ಕಾಶಿ ಶ್ರೀಗಳೇ ಹೊಣೆ

ಕೇದಾರ ಶ್ರೀ– ರಂಭಾಪುರಿ ಶ್ರೀ ಜಂಟಿ ಹೇಳಿಕೆ
Last Updated 13 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ದಾವಣಗೆರೆ: ‘ಉಜ್ಜಯಿನಿ ಪೀಠದ ವಿಚಾರವಾಗಿ ಕಾಶಿ ಪೀಠದ ಹಸ್ತಕ್ಷೇಪದಿಂದ ವಿವಾದ ಉಂಟಾಗಿದೆ. ನಾಲ್ಕು ಗೋಡೆಗಳ ನಡುವೆ ಆಂತರಿಕ ಚರ್ಚೆಯ ಮೂಲಕ ಪರಿಹರಿಸಿಕೊಳ್ಳಬೇಕಾಗಿದ್ದ ಗೊಂದಲವನ್ನು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾಧ್ಯಮಗಳ ಮುಂದೆ ತರುವ ಮೂಲಕ ತಪ್ಪು ಹೆಜ್ಜೆ ಇಟ್ಟಿದ್ದಾರೆ’ ಎಂದು ಪಂಚಾಚಾರ್ಯ ಮಾನವ ಧರ್ಮ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಕೇದಾರ ಪೀಠದ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆರೋಪಿಸಿದರು.

‘ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಸ್ಥಿರ ಜಗದ್ಗುರು ಆಗಿ ತ್ರಿಲೋಚನ ಶಿವಾಚಾರ್ಯರನ್ನು ನಾವು ನೇಮಕ ಮಾಡಿಲ್ಲ. ಪಂಚಮುದ್ರ ಸಹಿತ ಮೂಲ ಉಜ್ಜಯಿನಿಯಲ್ಲಿ ಪಟ್ಟಾಭಿಷೇಕ ಮಾಡಿ, ತಮ್ಮೊಂದಿಗೆ ನಾಡಿನ ನಾನಾ ಭಾಗಗಳಲ್ಲಿ ಅಡ್ಡಪಲ್ಲಕ್ಕಿ ಮತ್ತು ಧರ್ಮ
ಸಭೆಗಳಲ್ಲಿ ಸಮಾನ ಆಸನದಲ್ಲಿ ಗೌರವಿಸಿದ್ದರು. ಹಿರಿಯರ ಈ ಕಾರ್ಯಕ್ಕೆ ನಾವೀರ್ವರು ಮುಕ್ತಿ ಮಂದಿರದಲ್ಲಿ ನಡೆದ ಶಕ್ತಿ ಸಂವರ್ಧನಾ ಸಂಕಲ್ಪ ಸಮಾರಂಭದಲ್ಲಿ ಮಾನ್ಯತೆ ನೀಡಿದ್ದೇವೆ. ನಾವು ಯಾರನ್ನೂ ಅಸಿಂಧುಗೊಳಿಸುವ ಕೆಲಸ ಮಾಡಿಲ್ಲ. ಆದರೂ ಕಾಶಿ ಸ್ವಾಮೀಜಿ ಮತ್ತು ಅವರ ಅನುಯಾಯಿಗಳು ಗೊಂದಲ ಸೃಷ್ಟಿ ಮಾಡಿದ್ದಾರೆ’ ಎಂದು ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪಟ್ಟಾಭಿಷೇಕದ ನಂತರ ಆಗಿರುವ ಅನ್ಯಾಯವನ್ನು ಪರಿಶೀಲಿಸಿ ಉಜ್ಜಯಿನಿ ಪೀಠದ ಪರಂಪರೆಯನ್ನು ಮುಂದುವರಿಸಬೇಕು ಎಂದು 2015ರಲ್ಲಿ ತ್ರಿಲೋಚನಾ ಸ್ವಾಮೀಜಿ ಮನವಿ ಪತ್ರ ಸಲ್ಲಿಸಿದ್ದರು. ಅದರಂತೆ ರಂಭಾಪುರಿ ಶ್ರೀ, ಕೇದಾರ ಶ್ರೀ ಮತ್ತು ಕಾಶಿ ಶ್ರೀ ಸೇರಿ ಸುದೀರ್ಘ ಚರ್ಚೆ ನಡೆಸಲಾಗಿತ್ತು. ಪೀಠದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಹೊನ್ನಾಳಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿಯ ಶ್ರದ್ಧಾಂಜಲಿ ಸಭೆಯಲ್ಲಿ ಕಾಶೀ ಶ್ರೀಗಳ ಪ್ರೇರಣೆಯಂತೆ ಉಜ್ಜಯಿನಿ ಸಿದ್ಧಲಿಂಗ ಸ್ವಾಮೀಜಿ ಅತಿರೇಕದ ಮಾತನಾಡಿ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟುಗೊಳಿಸಿದ್ದಾರೆ ಎಂದು ಹೇಳಿದರು.

ಪೀಠದ ನಿಯಮಗಳನ್ನು ಪಾಲಿಸಲು ತಯಾರಾಗಿ ಮಾತುಕತೆಗೆ ಬಂದರೆ ಈ ವಿವಾದವನ್ನು ಒಂದು ಗಂಟೆಯಲ್ಲಿ ಸರಿಮಾಡಬಹುದು. 1918ರ ನಿರ್ಣಯದ ನಂತರ ನಡೆದ ಸಂದರ್ಭಗಳನ್ನು ನೆನಪು ಮಾಡಿಕೊಡುತ್ತೇವೆ. ಜಗದ್ಗುರು ಪಂಚಾಚಾರ್ಯ ಒಕ್ಕೂಟ ವ್ಯವಸ್ಥೆಯ ನಿಯಮ, ನಿಬಂಧನೆಗಳನ್ನು ಮೀರದೇ ಸರಿಪಡಿಸಿಕೊಳ್ಳಬಹುದು. ತಪ್ಪು ಮಾಡಿದವರೇ ಅದನ್ನು ಮುಂದುವರಿಸದೇ ಮುಂದೆ ಬಂದರೆ ಸಂಧಾನ ಮಾತುಕತೆ ಮೂಲಕ ಸಮಸ್ಯೆಗೆ ತೆರೆ ಎಳೆಯಬಹುದು. ರಂಭಾಪುರಿ, ಕೇದಾರ, ಕಾಶಿ, ಶ್ರೀಶೈಲ, ಉಜ್ಜಯಿನಿ ಪೀಠಗಳಿಗೆ ವಿವಾದದಿಂದ ಏನೂ ಆಗುವುದಿಲ್ಲ. ಶಾಶ್ವತವಾಗಿ ಪೀಠಗಳು ಉಳಿಯುತ್ತವೆ. ವ್ಯಕ್ತಿಗಳಷ್ಟೇ ಬದಲಾಗುತ್ತಾರೆ ಎಂದು ಹೇಳಿದರು.

***
ಹಣ ತಗೊಂಡಿದ್ದೇವೆ ಎಂಬ ಆರೋಪ ನಮ್ಮ ಮೇಲೆ ಕೆಲವರು ಮಾಡಿದ್ದಾರೆ. ಅದು ನಿಜ ಎಂದು ಸಾಬೀತುಪಡಿಸಿದರೆ ನಾನು ಮತ್ತು ರಂಭಾಪುರಿಶ್ರೀಗಳು ಬಲದ ಕೈ ಕಡಿದು ಕೊಡುತ್ತೇವೆ. ಇಲ್ಲದೇ ಇದ್ದರೆ ಅವರ ನಾಲಗೆ ಕತ್ತರಿಸಿ ಕೊಡಬೇಕು.
-ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ, ಕೇದಾರ ಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT