ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯದಲ್ಲಿ ನೆರವೇರಿದ ಪೂಜಾಕಾರ್ಯ

ರಾಯರ 351ನೇ ಆರಾಧನಾ ಮಹೋತ್ಸವ: ಪೂರ್ವಾರಾಧನೆ ಇಂದು
Last Updated 11 ಆಗಸ್ಟ್ 2022, 16:06 IST
ಅಕ್ಷರ ಗಾತ್ರ

ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರ ಸ್ವಾಮಿಯವರ 351ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವ ಕಾರ್ಯಕ್ರಮಗಳು ಸಂಭ್ರಮದಿಂದ ನೆರವೇರುತ್ತಿದ್ದು, ಎರಡನೇ ದಿನವಾದ ಗುರುವಾರ ಶ್ರೀಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ವಿಶೇಷ ಪೂಜಾಕಾರ್ಯಗಳನ್ನು ನೆರವೇರಿಸಿದರು.

ಬೆಳಗಿನ ಜಾವ ರಾಯರ ಮೂಲ ವೃಂದಾವನದ ನಿರ್ಮಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ ಹಾಗೂ ಪಂಚಾಮೃತಾಭಿಷೇಕ ನಡೆಯಿತು. ಶ್ರೀಮೂಲ ರಘುಪತಿ ವೇದವ್ಯಾಸದೇವರ ಪೂಜೆ ಹಾಗೂ ಮೂಲಬೃಂದಾವನಕ್ಕೆ ವಿಶೇಷ ಹೂವಿನ ಅಲಂಕಾರ ನೆರವೇರಿಸಲಾಯಿತು. ಆನಂತರ ಹಸ್ತೋದಕ ಹಾಗೂ ಮಹಾಮಂಗಳಾರತಿ ನಡೆಯಿತು. ಶಕೋತ್ಸವ, ರಜತ ಮಂಟಪೋತ್ಸವಗಳು ನಡೆದವು.

ಚೆನ್ನೈನ ಡಾ.ಸುಮಾನಾಚಾರ್‌ ವಿಶೇಷ ಉಪನ್ಯಾಸ ನೀಡಿದರು.

ಬೆಳಿಗ್ಗೆ 10 ಗಂಟೆಗೆ ಪ್ರವಚನ ಮಂಟಪದಲ್ಲಿ ಚೆನ್ನೈನ ಸುಮನ್‌ ಆಚಾರ್‌ ಅವರಿಂದ ವಿಶೇಷ ಉಪನ್ಯಾಸ. ಸಂಜೆ 5.30 ರಿಂದ ಮಠದ ಹೊರಗಿನ ಯೋಗಿಂದ್ರ ಮಂಟಪದಲ್ಲಿ ಬೆಂಗಳೂರಿನ ವಿದ್ವಾನ್‌ ಸಿ.ಹನುಮೇಶಾಚಾರ್‌ ಅವರಿಂದ ವೀಣಾವಾದನ, ರಾತ್ರಿ 7 ರಿಂದ ತಿರುಪತಿಯ ವಿದ್ವಾನ್‌ ಸರಸ್ವತಿ ಪ್ರಸಾದ್‌ ಅವರಿಂದ ಅನ್ನಮಾಚಾರ್ಯ ಸಂಕೀರ್ತನ. ರಾತ್ರಿ 8.30 ರಿಂದ ವಿಜಯವಾಡದ ಭಾರತಿ ನೃತ್ಯ ಕೇಂದ್ರದವರಿಂದ ಕುಚಿಪುಡಿ ನೃತ್ಯ ನಡೆಯಿತು.

ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಶ್ರೀಮಠವು ಮಂತ್ರಾಲಯಕ್ಕೆ ಬರುವ ಭಕ್ತರಿಗೆ ಶುದ್ಧಕುಡಿಯುವ ನೀರು, ವಸತಿ ಸೇರಿದಂತೆ ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಶ್ರೀಮಠವು ಮಾಡಿದೆ. ಶ್ರೀಮಠದಿಂದ ಮಂತ್ರಾಲಯದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅನೇಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಶ್ರೀಕ್ಷೇತಕ್ಕೆ ಬರುವ ಭಕ್ತರಿಗೆ ಸ್ನಾನಕ್ಕೆ ಸಮಸ್ಯೆಯಾಗದಂತೆ ಅಗತ್ಯ ವ್ಯವಸ್ಥೆಯನ್ನು ಶ್ರೀಮಠ ಮಾಡಿದೆ. ಅಲ್ಲದೇ ನದಿ ತೀರದಲ್ಲಿ ಭಕ್ತರು ತೆರಳದಂತೆ ಸೂಕ್ತ ಭದ್ರತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಕ್ತರಿಗೆ ಅಗತ್ಯ ಮಾಹಿತಿಗಾಗಿ ಸಹಾಯ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.

ಮಂತ್ರಾಲಯದಲ್ಲಿ ಇಂದು

ರಾಯರ ಆರಾಧನಾ ಮಹೋತ್ಸವದಲ್ಲಿ ಆಗಸ್ಟ್‌ 12 ಪ್ರಮುಖ ದಿನವಾಗಿದ್ದು, ಶ್ರೀರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ನಡೆಯುವುದು. ಮೂಲ ವೃಂದಾವನಕ್ಕೆ ಪಂಚಾಮೃತ ಅಭಿಷೇಕ, ಪ್ರಾಕಾರದಲ್ಲಿ ರಥೋತ್ಸವ ಜರುಗಲಿದೆ. ಬೆಳಿಗ್ಗೆ 10 ಗಂಟೆಗೆ ಪ್ರವಚನ ಮಂಟಪದಲ್ಲಿ ಬೆಂಗಳೂರಿನ ವೆಂಕಟೇಶ ಆಚಾರ್‌ ಅವರಿಂದ ವಿಶೇಷ ಉಪನ್ಯಾಸ.

ಮಠದ ಹೊರಭಾಗ ಯೋಗಿಂದ್ರ ಮಂಟಪದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಚೆನ್ನೈನ ವಿದ್ವಾನ್‌ ಆರ್‌.ಗಣೇಶ್‌ ಅವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ಸಂಜೆ 5.30 ರಿಂದ. ರಾತ್ರಿ 7 ಗಂಟೆಗೆ ’ಶ್ರೀರಾಘವೇಂದ್ರ ಅನುಗ್ರಹ ಪ್ರಶಸ್ತಿ’ ಪ್ರದಾನ ಸಮಾರಂಭ. ರಾತ್ರಿ 8.30 ರಿಂದ ಮಂಗಳೂರಿನ ಸನಾತನ ಯಕ್ಷಲವ್ಯ ತಂಡದಿಂದ ಶ್ರೀ ಶ್ರೀನಿವಾಸ ಕಲ್ಯಾಣ ಯಕ್ಷಗಾನ ನಡೆಯುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT