ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಂವಾದ: ಸರ್ಕಾರಿ ನೇಮಕಾತಿಗಳಲ್ಲಿನ ಅಕ್ರಮಕ್ಕೆ ಯಾರು ಹೊಣೆ?

Last Updated 2 ಮೇ 2022, 16:42 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ), ಸರ್ಕಾರಿ ಪದವಿ ಕಾಲೇಜುಗಳ ಸಹಾಯ ಪ್ರಾಧ್ಯಾಪಕರ ಹುದ್ದೆ, ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್‌ ಸೇರಿದಂತೆ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಖಾಲಿ ಹುದ್ದೆಗಳ ಭರ್ತಿಗೆ ನಡೆಸಿರುವ ನೇಮಕಾತಿಗಳಲ್ಲಿ ಅಕ್ರಮಗಳು ನಡೆದಿರುವುದು ಸರಣಿಯೋಪಾದಿಯಲ್ಲಿ ಹೊರ ಬರುತ್ತಿವೆ.

ಈ ಹಿನ್ನೆಲೆಯೊಳಗೆ, ನೇಮಕಾತಿಗಳಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಯಾರು ಹೊಣೆ? ಎಂಬುದರ ಕುರಿತು ‘ಪ್ರಜಾವಾಣಿ’ ಸೋಮವಾರ ನಡೆಸಿದ ಸಂವಾದದಲ್ಲಿ ಪಾಲ್ಗೊಂಡಿದ್ದ ವಿವಿಧ ಪಕ್ಷಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳ ಮುಖಂಡರ ಅಭಿಪ್ರಾಯಗಳ ಸಂಕ್ಷಿಪ್ತ ರೂಪ ಇಲ್ಲಿದೆ...

‘ಬಿಜೆಪಿ ಸರ್ಕಾರವೇ ಹೊಣೆ’

ಪಿಎಸ್‌ಐ ನೇಮಕಾತಿ ಅಕ್ರಮ ಗೃಹ ಸಚಿವರ ಶಾಮೀಲು ಇಲ್ಲದೆ ಹೇಗೆ ನಡೆಯಲು ಸಾಧ್ಯ? ದಿವ್ಯಾ ಹಾಗರಗಿ ಮನೆಗೆ ಗೃಹ ಸಚಿವರೇ ಹೋಗಿದ್ದರು. ದೊಡ್ಡ ಮಟ್ಟದ ಪ್ರಭಾವಿಗಳು ಶಾಮೀಲಾಗದೇ ಇಷ್ಟು ದೊಡ್ಡಮಟ್ಟದ ಹಗರಣ ನಡೆಯಲು ಸಾಧ್ಯವೆ ಇಲ್ಲ. ನೇಮಕಾತಿ ಮತ್ತು ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಹುದ್ದೆಯಲ್ಲಿದ್ದ ಅಮೃತ್‌ ಪಾಲ್‌ ಪಿಎಸ್‌ಐ ನೇಮಕಾತಿಯಲ್ಲಿನ ಅಕ್ರಮಗಳಿಗೆ ಹೊಣೆಗಾರ. ಅವರನ್ನು ಅಮಾನತು ಮಾಡುವುದು ಬಿಟ್ಟು ಬೇರೆ ಹುದ್ದೆ ನೀಡಿದ್ದಾರೆ. ಆರೋಪಿಗಳನ್ನು ರಕ್ಷಿಸುತ್ತಿರುವುದಕ್ಕೆ ಇದು ಸಾಕ್ಷಿ.

ಸಚಿವರೊಬ್ಬರ ಸಹೋದರನೂ ಭಾಗಿಯಾಗಿರುವ ಆರೋಪವಿದೆ. ಯಾವುದೇ ಪಕ್ಷದವರು ಅಕ್ರಮದಲ್ಲಿ ಭಾಗಿಯಾಗಿದ್ದರೂ ಕ್ರಮ ಜರುಗಿಸಿ. ಆರೋಪಗಳನ್ನು ಎದುರಿಸುತ್ತಿರುವವರು ತಮ್ಮವರಲ್ಲ ಎಂದು ಬಿಜೆಪಿಯವರು ಹೇಳುವುದು ಹೊಸದೇನೂ ಅಲ್ಲ.

ಗುಜರಾತ್‌, ಉತ್ತರ ಪ್ರದೇಶಗಳಲ್ಲೂ ಇದೇ ರೀತಿ ನಡೆದಿದೆ. ಬಿಜೆಪಿ ಸರ್ಕಾರ ಇರುವ ಕಡೆಗಳಲ್ಲಿ ನೇಮಕಾತಿ ಅಕ್ರಮ ಸಾಮಾನ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳು ಮಾತ್ರವಲ್ಲ ಇತರ ನೇಮಕಾತಿಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆಯೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು.

– ಬಿ.ವಿ. ಶ್ರೀನಿವಾಸ್, ಯುವ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ

‘ಸಮಗ್ರ ತನಿಖೆ ನಡೆಯಲಿ’

ನೇಮಕಾತಿ ಹಗರಣಗಳು ಯಾವುದೋ ಒಂದೇ ರಾಜಕೀಯ ಪಕ್ಷದವರಿಂದ ನಡೆದಿಲ್ಲ. ಈಗ ರಾಜ್ಯದಲ್ಲಿ ಬಹಿರಂಗವಾಗಿರುವ ನೇಮಕಾತಿ ಅಕ್ರಮಗಳಲ್ಲಿ ಎಲ್ಲ ಪಕ್ಷದವರೂ ಶಾಮೀಲಾಗಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರ ಬಂಧನವಾಗಿದೆ.

ರಾಜ್ಯದಲ್ಲಿ ಹಲವು ದಶಕಗಳಿಂದಲೂ ನೇಮಕಾತಿ ಅಕ್ರಮಗಳು ನಡೆಯುತ್ತಲೇ ಇವೆ. 2022ರಲ್ಲಿ ಹೊಸದಾಗಿಯೇನೂ ನಡೆದಿಲ್ಲ. ಕಾಂಗ್ರೆಸ್‌ ಪಕ್ಷ ಈ ವಿಚಾರದಲ್ಲಿ ಅನಗತ್ಯವಾದ ವಿವಾದ ಸೃಷ್ಟಿಸಲು ಯತ್ನಿಸುತ್ತಿದೆ. ಜವಾಹರ ಲಾಲ್‌ ನೆಹರೂ ಕಾಲದಿಂದಲೂ ಕಾಂಗ್ರೆಸ್‌ಗೂ ನಂಟು ಇದೆ. ಇದನ್ನು ಆ ಪಕ್ಷ ಅರ್ಥ ಮಾಡಿಕೊಳ್ಳಬೇಕು.

ನೇಮಕಾತಿ ಅಕ್ರಮಗಳು ಯಾವುದೇ ಪಕ್ಷದ ಆಡಳಿತದ ಅವಧಿಯಲ್ಲಿ ನಡೆದರೂ ಎಬಿವಿಪಿ ಪ್ರಬಲವಾಗಿ ವಿರೋಧಿಸುತ್ತದೆ. ಈ ವಿಚಾರದಲ್ಲಿ ರಾಜಕೀಯ ಪಕ್ಷಗಳು ವಿಶ್ವಾಸ ಕಳೆದುಕೊಂಡಿವೆ. ಕೆಲವರ ಸ್ವಾರ್ಥಕ್ಕಾಗಿ ಲಕ್ಷಾಂತರ ಮಂದಿ ಯುವಜನರ ಭವಿಷ್ಯವನ್ನೇ ಬಲಿ ತೆಗೆದುಕೊಳ್ಳಲಾಗುತ್ತಿದೆ.

ರಾಜ್ಯದಲ್ಲಿ ನಡೆದಿರುವ ಎಲ್ಲ ನೇಮಕಾತಿ ಅಕ್ರಮಗಳ ಬಗ್ಗೆಯೂ ಸಮಗ್ರವಾಗಿ ತನಿಖೆ ನಡೆಸಬೇಕು. ವಿಶ್ವವಿದ್ಯಾಲಯಗಳಲ್ಲಿನ ನೇಮಕಾತಿ ಅಕ್ರಮಗಳೂ ತನಿಖೆಯ ವ್ಯಾಪ್ತಿಗೆ ಬರಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಎಬಿವಿಪಿ ಆಗ್ರಹಿಸುತ್ತದೆ.

– ಹರ್ಷ ನಾರಾಯಣ, ಎಬಿವಿಪಿ ನಿಕಟಪೂರ್ವ ರಾಷ್ಟ್ರೀಯ ಕಾರ್ಯದರ್ಶಿ

‘ದೊಡ್ಡವರ ಬಂಧನ ಆಗಲೇಬೇಕು’

ರಾಜ್ಯ ಮತ್ತು ದೇಶದಲ್ಲಿ ಉದ್ಯೋಗಳ ಕೊರತೆ ಇರುವುದೇ ನೇಮಕಾತಿಗಳಲ್ಲಿ ಹಗರಣ ನಡೆಯಲು ಮೂಲ ಕಾರಣ. ಆರ್ಥಿಕವಾಗಿ ಬಲ ಇರುವವರು ದೊಡ್ಡ ಪ್ರಮಾಣದ ಹಣ ಕೊಟ್ಟು ಉದ್ಯೋಗಗಳನ್ನು ಖರೀದಿಸುತ್ತಿದ್ದಾರೆ. ಅಗತ್ಯಕ್ಕೆ ತಕ್ಕಷ್ಟು ಉದ್ಯೋಗ ಸೃಜನೆಗೆ ಆದ್ಯತೆ ನೀಡದೇ ಇರುವುದು ಸಮಸ್ಯೆ ಬೆಳೆಯಲು ಕಾರಣ.

ಪಿಎಸ್‌ಐ ನೇಮಕಾತಿ ಸೇರಿದಂತೆ ವಿವಿಧ ನೇಮಕಾತಿ ಪ್ರಕ್ರಿಯೆಗಳಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಹಲವರನ್ನು ಬಂಧಿಸಲಾಗಿದೆ. ಉದ್ಯೋಗ ಪಡೆಯಲು ಲಂಚ ಕೊಟ್ಟ ಅಭ್ಯರ್ಥಿಗಳು ಸೇರಿದಂತೆ ಸಣ್ಣವರನ್ನು ಬಂಧಿಸಲಾಗಿದೆ. ನೇಮಕಾತಿ ಪ್ರಾಧಿಕಾರಗಳ ಮುಖ್ಯಸ್ಥರು ಸೇರಿದಂತೆ ದೊಡ್ಡವರ ಬಂಧನ ಆಗಬೇಕು. ತೆರೆಯ ಹಿಂದೆ ಕುಳಿತು ಅಕ್ರಮ ನೇಮಕಾತಿಯ ಜಾಲವನ್ನು ನಿಯಂತ್ರಿಸಿದವರನ್ನು ಪತ್ತೆಮಾಡಿ, ಬಂಧಿಸಬೇಕು.

ಬಿಜೆಪಿ ಈಗ ಆರೋಪಿಗಳಿಂದ ಅಂತರ ಕಾಯ್ದುಕೊಂಡರೆ ಹಳೆಯ ನಂಟನ್ನು ಮುಚ್ಚಿಹಾಕಲು ಸಾಧ್ಯವಿಲ್ಲ. ದಿವ್ಯಾ ಹಾಗರಗಿ ಬಿಜೆಪಿ ನಾಯಕಿ ಎಂಬುದು ಎಲ್ಲರಿಗೂ ಗೊತ್ತಿದೆ. ಹಗರಣವನ್ನು ಮುಚ್ಚಿಹಾಕಲು ಪರೀಕ್ಷೆಯನ್ನೇ ರದ್ದು ಮಾಡುವುದು ಸರಿಯಲ್ಲ. ಇದರಿಂದ ನ್ಯಾಯಯುತವಾಗಿ ಪರೀಕ್ಷೆಯಲ್ಲಿ ಪಾಸಾಗಿ, ಉದ್ಯೋಗಕ್ಕೆ ಆಯ್ಕೆಯಾಗಿದ್ದವರಿಗೆ ಅನ್ಯಾಯ ಆಗುತ್ತದೆ.

– ಸ್ನೇಹಾ ಕಟ್ಟಿಮನಿ, ಎಐಡಿಎಸ್‌ಒ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT