ಭಾನುವಾರ, ಫೆಬ್ರವರಿ 28, 2021
21 °C
ಸಚಿವ ಎಂಟಿಬಿ ನಾಗರಾಜ್‌ ಸವಾಲು

ಸಿ.ಡಿ ಇದ್ದರೆ ಬಿಡುಗಡೆ ಮಾಡಲಿ: ಸಚಿವ ಎಂಟಿಬಿ ನಾಗರಾಜ್‌ ಸವಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಂಬಂಧಿಸಿದ ಸಿ.ಡಿ. ಇದ್ದರೆ ಬಿಡುಗಡೆ ಮಾಡಲಿ. ರಾಜ್ಯದ ಜನರಿಗೆ ಗೊತ್ತಾಗಲಿ ಎಂದು ನೂತನ ಸಚಿವ ಎಂಟಿಬಿ ನಾಗರಾಜ್‌ ಸವಾಲು ಹಾಕಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿ.ಡಿ ಇರುವುದಾಗಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ‌ ಹಾಗೂ ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದಾರೆ. ಇದು ಅಂತೆ–ಕಂತೆಯಾಗಿದ್ದು, ಊಹಾಪೋಹಗಳು ಹರಿದಾಡುತ್ತಿವೆ’ ಎಂದರು.

‘ಸಿ.ಡಿ ಇಟ್ಟುಕೊಂಡು ಯಾರು ಹೆದರಿಸಿದ್ದಾರೋ ಗೊತ್ತಿಲ್ಲ. ಸಿ.ಡಿ. ಕೋಟಾದಡಿ ಸಚಿವರಾದವರ ಬಗ್ಗೆ ಮಾಹಿತಿ ಇಲ್ಲ. ಪ್ರತಿ ದಿನವೂ ಹೆದರಿಸಿಕೊಂಡು ರಾಜಕಾರಣ ಮಾಡಲು ಸಾಧ್ಯವಿಲ್ಲ. ಇದರಿಂದ ಯಾವುದೇ ಪ್ರಯೋಜನವೂ ಇಲ್ಲ. ಮೂರು ದಿನಗಳ ಒಳಗೆ ನೂತನ ಸಚಿವರಿಗೆ ಖಾತೆ ಹಂಚಿಕೆ ಆಗಲಿದೆ’ ಎಂದು ಪ್ರತಿಕ್ರಿಯೆ ನೀಡಿದರು.

‘ಸಿ.ಪಿ.ಯೋಗೇಶ್ವರ ಅವರು ಅತೃಪ್ತರನ್ನು ಒಗ್ಗೂಡಿಸಲು ಸಾಲ ಮಾಡಿದ್ದರು ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ಅವರು ಯಾವ ಮನೆ, ಮಠವನ್ನೂ ಅಡ ಇಟ್ಟಿಲ್ಲ. ನನ್ನ ಬಳಿಯೂ ಸಾಲ ಪಡೆದಿಲ್ಲ. ರಮೇಶ ಜಾರಕಿಹೊಳಿ ಸತ್ಯವನ್ನು ಮಾತ್ರ ಹೇಳಬೇಕು. ವರಿಷ್ಠರ ತೀರ್ಮಾನದಂತೆ ಯೋಗೇಶ್ವರ್ ಸಚಿವರಾಗಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಸ್ಪಷ್ಟನೆ ನೀಡಿದರು.

‘ರಾಜಕಾರಣದಲ್ಲಿ ಸಮಾಧಾನದಿಂದ ಇರುವವರು, ಅಸಮಾಧಾನ ಹೊಂದಿದವರು ಇದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ಎಲ್ಲ 17 ಜನರೂ ಒಗ್ಗಟ್ಟಿನಿಂದ ಇದ್ದೇವೆ. ಮುನಿರತ್ನ, ವಿಶ್ವನಾಥ್, ಪ್ರತಾಪ್ ಗೌಡ ಪಾಟೀಲ್ ಅವರಿಗೂ ಮುಂದಿನ ದಿನಗಳಲ್ಲಿ ಸಚಿವ ಸ್ಥಾನ ಸಿಗಲಿದೆ. ಕಾರಣಾಂತರದಿಂದ ಮುನಿರತ್ನ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ’ ಎಂದರು.

ರೇವಣ್ಣ ಸಮ್ಮುಖದಲ್ಲೇ ಜಗಳ

ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕಾಗಿನೆಲೆಯಿಂದ ಬೆಂಗಳೂರಿಗೆ ನಡೆಸುತ್ತಿರುವ ಪಾದಯಾತ್ರೆಗೆ ತೆರಳುವುದಕ್ಕೂ ಮುನ್ನ ಸಮುದಾಯದ ಮುಖಂಡರಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಸಮುದಾಯದ ಮುಖಂಡ ಎಚ್‌.ಎಂ.ರೇವಣ್ಣ ಅವರ ಸಮ್ಮುಖದಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆಯಿತು.

ಎಂಟಿಬಿ ನಾಗರಾಜ್‌ ಅವರು ಚಿತ್ರದುರ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿ ಮಾಡುವ ವಿಚಾರವನ್ನು ಸಮುದಾಯದ ಮುಖಂಡರಿಗೆ ತಿಳಿಸಿಲ್ಲ ಎಂದು ಗುಂಪೊಂದು ಅಸಮಾಧಾನ ಹೊರಹಾಕಿತು. ಈ ವೇಳೆ ಮತ್ತೊಂದು ಗುಂಪು ಇದಕ್ಕೆ ಸ್ಪಷ್ಟನೆ ನೀಡಲು ಮುಂದಾಯಿತು. ಆಗ ಎರಡೂ ಗುಂಪುಗಳ ನಡುವೆ ಜಗಳ ನಡೆದು ಕೈ–ಕೈ ಮಿಲಾಯಿಸುವ ಹಂತಕ್ಕೆ ಬೆಳೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು