ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ: ಒಕ್ಕಲಿಗರ ಸರದಿ

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಸಭೆ
Last Updated 17 ಫೆಬ್ರುವರಿ 2021, 21:26 IST
ಅಕ್ಷರ ಗಾತ್ರ

ಬೆಂಗಳೂರು: ಮೀಸಲಾತಿ ಪಟ್ಟಿಯಲ್ಲಿ ಪರಿಷ್ಕರಣೆ, ಬದಲಾವಣೆ, ಪ್ರಮಾಣ ಹೆಚ್ಚಳ ಮಾಡುವಂತೆ ಆಗ್ರಹಿಸಿ ವಿವಿಧ ಸಮುದಾಯಗಳ ಹೋರಾಟ ಬಿರುಸುಗೊಂಡಿರುವ ಬೆನ್ನಲ್ಲೇ ಒಕ್ಕಲಿಗ ಸಮುದಾಯ ಕೂಡ ಮೀಸಲಾತಿ ಮುಂದಿಟ್ಟು ಹೋರಾಟದತ್ತ ಹೆಜ್ಜೆ ಇಟ್ಟಿದೆ.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸ್ಪಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ನೇತೃತ್ವದಲ್ಲಿ ಆದಿಚುಂಚನಗಿರಿ ವಿಜಯನಗರ ಶಾಖಾ ಮಠದಲ್ಲಿ ಬುಧವಾರ ನಡೆದ ಸಭೆಯಲ್ಲಿ ಈ ಸಂಬಂಧ ವಿಸ್ತೃತ ಚರ್ಚೆ ನಡೆದಿದೆ.

ಮೀಸಲಾತಿ ಹೆಚ್ಚಳ ವಿಷಯದಲ್ಲಿ ಸಾಧಕ, ಬಾಧಕಗಳನ್ನು ಪರಿಶೀಲಿಸಿ ಎಚ್ಚರಿಕೆಯಿಂದ ಹೆಜ್ಜೆ ಇಡಲು ಸಭೆ ತೀರ್ಮಾನಿಸಿತು. ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲು ಮತ್ತು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸಮಿತಿಗಳನ್ನು ರಚಿಸುವ ನಿರ್ಣಯವನ್ನೂ ಕೈಗೊಳ್ಳಲಾಗಿದೆ.

‘ಒಕ್ಕಲಿಗ ಸಮುದಾಯದ ಎಲ್ಲಾ 115 ಉಪಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿಲ್ಲ. ಇದರಿಂದ ಅನೇಕ ಉಪ ಜಾತಿಗಳು ಸವಲತ್ತುಗಳಿಂದ ವಂಚಿತವಾಗಿವೆ. ಆದ್ದರಿಂದ ಈ ಎಲ್ಲಾ ಉಪ ಜಾತಿಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರ್ಪಡೆ ಮಾಡಬೇಕು. ಇದಕ್ಕಾಗಿಯೂ ಹೋರಾಟ ಮಾಡುವ ಅವಶ್ಯಕತೆಯಿದೆ’ ಎಂದು ನಿರ್ಮಲಾನಂದನಾಥ ಸ್ವಾಮೀಜಿ ಪ್ರತಿಪಾದಿಸಿದರು.

‘ನಗರ ಪ್ರದೇಶದ ಒಕ್ಕಲಿಗ ಸಮುದಾಯ ಸಂಕಷ್ಟದಲ್ಲಿದ್ದು, ಅವರಿಗೆ ಮೀಸಲಾತಿ ಸೌಲಭ್ಯ ಸಿಗಬೇಕು. ಹಾಗಾಗಿ ಗ್ರಾಮೀಣ ಒಕ್ಕಲಿಗ ಮತ್ತು ನಗರ ಪ್ರದೇಶದ ಒಕ್ಕಲಿಗ ಎಂಬ ತಾರತಮ್ಯ ಇಲ್ಲದೆ ಎಲ್ಲರಂತೆ ಒಕ್ಕಲಿಗರಿಗೆ ಮೀಸಲಾತಿ ಸೌಲಭ್ಯ ದೊರಕಬೇಕು’ ಎಂದು ಹೇಳಿದರು.

ನಂಜಾವಧೂತ ಸ್ವಾಮೀಜಿ ಮಾತನಾಡಿ, ‘ಒಕ್ಕಲಿಗ ಸಮುದಾಯವನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿವೆ. ಒಕ್ಕಲಿಗ ಜಾತಿಯಿಂದ ಉಪ ಜಾತಿಗಳು ಹೊರನಡೆದರೆ ಅಲ್ಪಸಂಖ್ಯಾತರಾಗುವ ಭೀತಿ ಇದೆ. ಇಂತಹ ತಪ್ಪುಗಳನ್ನು ಸರಿಪಡಿಸಲು ಸಮುದಾಯದ ಮುಖಂಡರು ಮುಂದಾಗಬೇಕು’ ಎಂದು ಹೇಳಿದರು.

ಸಭೆಯಲ್ಲಿ ಪತ್ರಕರ್ತ ಟಿ. ವೆಂಕಟೇಶ್‌, ಲೇಖಕರಾದ ನಾಗತಿಹಳ್ಳಿ ಚಂದ್ರಶೇಖರ್‌, ಎಲ್.ಎನ್. ಮುಕುಂದರಾಜ್‌, ತಲಕಾಡು ಚಿಕ್ಕರಂಗೇಗೌಡ, ಲೆಕ್ಕ ಪರಿಶೋಧಕ ನಾಗರಾಜ್ ಯಲಕವಾಡಿ ಪಾಲ್ಗೊಂಡಿದ್ದರು.

ಹೋರಾಟದ ಹೊನಲು: ವಾಲ್ಮೀಕಿ ಸಮುದಾಯದ ಮೀಸಲಾತಿ ಪ್ರಮಾಣ ಹೆಚ್ಚಿಸಲು ಒಂದು ಸುತ್ತಿನ ಹೋರಾಟ ನಡೆದಿದ್ದು ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸವನ್ನು ಸಮುದಾಯದ ಮಠಾಧೀಶರು, ಸಚಿವರು, ಶಾಸಕರು ನಡೆಸಿದ್ದಾರೆ.

ಪರಿಶಿಷ್ಟ ಪಂಗಡಗಳ ಪಟ್ಟಿ ಸೇರಿಸಬೇಕೆಂಬ ಬೇಡಿಕೆ ಮುಂದಿಟ್ಟು ಕುರುಬ ಸಮುದಾಯದವರು ಸ್ವಾಮೀಜಿ ಹಾಗೂ ಸಚಿವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿ ಬೃಹತ್‌ ಸಮಾವೇಶವನ್ನೂ ನಡೆಸಿದ್ದಾರೆ.

ಲಿಂಗಾಯತ ಪಂಚಮಸಾಲಿ ಸಮುದಾಯದವರನ್ನು ಹಿಂದುಳಿದ ವರ್ಗಗಳ 2 ಎ ಪಟ್ಟಿಗೆ ಸೇರಿಸಬೇಕೆಂದು ಸಮುದಾಯದ ಸ್ವಾಮೀಜಿಗಳು, ಶಾಸಕರ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದ್ದು, ಇದೇ 21ರಂದು ಬೃಹತ್ ಸಮಾವೇಶ ನಿಗದಿಯಾಗಿದೆ.

ಲಿಂಗಾಯತ–ವೀರಶೈವ ಸಮುದಾಯದ ಎಲ್ಲ ಉಪ ಪಂಗಡಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕೆಂದು ಮಠಾಧೀಶರ ಒಕ್ಕೂಟ ಸಮಾವೇಶ ನಡೆಸಿದ್ದು, ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದೆ.

ಪರಿಶಿಷ್ಟ ಜಾತಿಯಲ್ಲಿರುವ ಆದಿ ಜಾಂಬವ ಸಮುದಾಯಕ್ಕೆ ಒಳಮೀಸಲಾತಿ ನೀಡಬೇಕೆಂಬ ಬೇಡಿಕೆ ಮುಂದಿಟ್ಟು ಸಮುದಾಯದ ಸ್ವಾಮೀಜಿ ಪಾದಯಾತ್ರೆ ನಡೆಸುತ್ತಿದ್ದಾರೆ.

ಒಂದು ಪಟ್ಟಿಯಿಂದ ಮತ್ತೊಂದು ಪಟ್ಟಿಗೆ ಸ್ಥಳಾಂತರಗೊಳ್ಳುವ ಬೇಡಿಕೆಯಿಂದ ಈಗಾಗಲೇ ಈ ಪಟ್ಟಿಯಲ್ಲಿರುವ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂಬ ವಿರೋಧದ ಧ್ವನಿಯೂ ವ್ಯಕ್ತವಾಗಿದೆ. ಕುರುಬ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ, ಪಂಚಮಸಾಲಿಯವರನ್ನು 2 ಎ ಪಟ್ಟಿಗೆ ಸೇರಿಸುವ ಬಗ್ಗೆ ಈಗಾಗಲೇ ಪರಿಶಿಷ್ಟ ಪಂಗಡ ಹಾಗೂ 2 ಎ ಪಟ್ಟಿಯಲ್ಲಿರುವ ಸಮುದಾಯದವರು ವಿರೋಧ ವ್ಯಕ್ತಪಡಿಸಿ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ.

ಈ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಒಕ್ಕಲಿಗ ಸಮುದಾಯ ಕೂಡ ಮೀಸಲಾತಿ ಹೋರಾಟದ ಹಾದಿ ಹಿಡಿದಿದೆ.

ಎರಡು ಸಮಿತಿ ರಚನೆ
ಒಕ್ಕಲಿಗರ ಮೀಸಲಾತಿ ಹೆಚ್ಚಳ ಹಾಗೂ ವಿವಿಧ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು, ಹೋರಾಟ ರೂಪಿಸಲು ಎರಡು ಸಮಿತಿಗಳನ್ನು ರಚಿಸಲಾಗಿದೆ.

ನಿವೃತ್ತ ಐಎಎಸ್‌ ಅಧಿಕಾರಿಗಳಾದ ವೈ.ಕೆ. ಪುಟ್ಟಸ್ವಾಮಿಗೌಡ, ಟಿ. ತಿಮ್ಮೇಗೌಡ, ನಿವೃತ್ತ ಐಪಿಎಸ್ ಅಧಿಕಾರಿ ಕೆ.ವಿ.ಆರ್. ಟಾಗೋರ್‌ ಹಾಗೂ ಡಾ.ಎಚ್.ಎನ್. ಕೃಷ್ಣ, ಸಿ.ಚಿಕ್ಕಣ್ಣ ಅವರನ್ನು ಈ ಎರಡೂ ಸಮಿತಿಗಳ ಸದಸ್ಯರಾಗಿ ನೇಮಿಸಲಾಗಿದೆ. ‌

ಹೋರಾಟದ ರೂಪುರೇಷೆ ಮತ್ತು ಪ್ರಾಧಿಕಾರದ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಶಂಕರಲಿಂಗೇಗೌಡ, ಎಚ್.ಎನ್. ಕೃಷ್ಣ, ಹಿ.ಚಿ.ಬೋರಲಿಂಗಯ್ಯ ಮತ್ತು ಪುಟ್ಟೇಗೌಡ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ.

ಹೋರಾಟ ನಿರತ ಸಮುದಾಯಗಳು
*
ಕುರುಬ
*ಲಿಂಗಾಯತ ಪಂಚಮಸಾಲಿ
*ವಾಲ್ಮೀಕಿ ನಾಯಕ
*ಆದಿ ಜಾಂಬವ
*ನೇಕಾರ
*ಉಪ್ಪಾರ

***

ಒಕ್ಕಲಿಗರಿಗೆ ನೀಡುತ್ತಿರುವ ಮೀಸಲಾತಿ ಹೆಚ್ಚಳ ಮತ್ತು ಪ್ರಾಧಿಕಾರ ರಚನೆ ಆಗುವವರೆಗೆ ನಾವು ಹೋರಾಟ ನಡೆಸಲೇಬೇಕಾಗಿದೆ.
-ನಂಜಾವಧೂತ ಸ್ವಾಮೀಜಿ, ಸ್ಪಟಿಕಪುರಿ ಮಠ, ಪಟ್ಟನಾಯಕನಹಳ್ಳಿ

**

ಒಕ್ಕಲಿಗ ಸಮುದಾಯದ ಹಿತ ರಕ್ಷಣೆಗೆ ಮೀಸಲಾತಿಯ ಹೆಚ್ಚಳ ಅನಿವಾರ್ಯ. ಒಕ್ಕಲಿಗರ ಅಭಿವೃದ್ದಿ ಪ್ರಾಧಿಕಾರ ರಚನೆಯೂ ತ್ವರಿತವಾಗಿ ಆಗಬೇಕು.
-ನಿರ್ಮಲಾನಂದನಾಥ ಸ್ವಾಮೀಜಿ, ಪೀಠಾಧ್ಯಕ್ಷರು, ಆದಿಚುಂಚನಗಿರಿ ಮಹಾ ಸಂಸ್ಥಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT