ಮಂಗಳವಾರ, ಜೂನ್ 28, 2022
25 °C
ವಿಧಾನಪರಿಷತ್‌ನಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ಹೇಳಿಕೆ

ಗಣಿಗಾರಿಕೆ: ₹ 5,300 ಕೋಟಿ ರಾಜಧನ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗಣಿಗಾರಿಕೆಯಿಂದ ಕಳೆದ ವರ್ಷ ₹ 4 ಸಾವಿರ ಕೋಟಿ ರಾಜಧನ ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಸೋರಿಕೆ ತಡೆಗಟ್ಟಿದ ಪರಿಣಾಮ ನಿಗದಿಪಡಿಸಿದ್ದ ಗುರಿಗಿಂತಲೂ ಹೆಚ್ಚು, ಅಂದರೆ ₹ 5,300 ಕೋಟಿ ರಾಜಧನ ಸಂಗ್ರಹವಾಗಿದೆ’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್ ತಿಳಿಸಿದರು.

ವಿಧಾನಪರಿಷತ್‌ನಲ್ಲಿ ಜೆಡಿಎಸ್‌ನ ಸಿ.ಎನ್. ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಅಗತ್ಯ ಇರುವ ಕಡೆ ಕಾನೂನು ಪ್ರಕಾರ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಕಾನೂನುಬಾಹಿರ ಚಟುವಟಿಕೆಗೆ ಎಲ್ಲಿಯೂ ಅವಕಾಶ ನೀಡಿಲ್ಲ’ ಎಂದರು.

‘ಖನಿಜ ಸಾಗಣೆ ವಾಹನಗಳ ಮೇಲೆ ನಿಗಾ ವಹಿಸಲು ಇಂಟಿಗ್ರೆಟೆಡ್ ಲೀಸ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಐಎಲ್‌ಎಂಎಸ್) ತಂತ್ರಾಂಶ ರೂಪಿಸಲಾಗಿದೆ. ಖನಿಜ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸಿ ಕೇಂದ್ರೀಕೃತ ನಿಗಾ ವಹಿಸಲು ತಂತ್ರಾಂಶ ರೂಪಿಸಲಾಗುತ್ತಿದೆ. ಗಣಿಗಾರಿಕೆಯ ಸರಕು ಸಾಗಣೆ ವಾಹನಗಳು ನಿಗದಿಗಿಂತ ಹೆಚ್ಚಿನ ಭಾರ ಸಾಗಿಸಿದ 27,763 ವಾಹನಗಳ ವಿರುದ್ಧ ಸಾರಿಗೆ ಇಲಾಖೆ ಪ್ರಕರಣ ದಾಖಲಿಸಿದ್ದು, ₹ 17.17 ಕೋಟಿ ದಂಡ ವಸೂಲು ಮಾಡಲಾಗಿದೆ’ ಎಂದರು.

‘ಸಾರಿಗೆ ಇಲಾಖೆಯಿಂದ ಒನ್ ನೇಷನ್, ಒನ್ ಜಿಪಿಎಸ್ ವ್ಯವಸ್ಥೆ ಜಾರಿ ಮಾಡಲಾಗುತ್ತಿದೆ. ಗಣಿ ಇಲಾಖೆಯಿಂದಲೂ ಒನ್ ಸ್ಟೇಟ್, ಒನ್ ಜಿಪಿಎಸ್ ಜಾರಿಗೆ ತರಲಾಗುತ್ತಿದೆ’ ಎಂದೂ ವಿವರಿಸಿದರು.

ಬಿಜೆಪಿಯ ಸುನೀಲ್ ವಲ್ಯಾಪುರೆ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಜಿಲ್ಲಾ ಗಣಿಗಾರಿಕೆ ನಿಧಿ (ಡಿಎಂಎಫ್) ಅಡಿ ಸಂಗ್ರಹಿಸಿದ ಮೊತ್ತವನ್ನು ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಡಿಎಂಎಫ್ ನಿಧಿ ಬಳಕೆಯ ಟ್ರಸ್ಟ್‌ಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಒಂಬತ್ತು ಮಂದಿ ಸದಸ್ಯರಿರುತ್ತಾರೆ’ ಎಂದರು.

ಸುನೀಲ್ ವಲ್ಯಾಪುರೆ, ವಿರೋಧ ‌ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕಾಂಗ್ರೆಸ್ಸಿನ ಪ್ರಕಾಶ್ ರಾಥೋಡ್, ಕೆ. ಗೋವಿಂದರಾಜು ಸೇರಿದಂತೆ ಹಲವರು, ‘ಡಿಎಂಎಫ್ ಹಂಚಿಕೆಯಲ್ಲಿ ತಾರತಮ್ಯವಾಗುತ್ತಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಗಣಿಗಾರಿಕೆ ಪ್ರದೇಶದ ಅನುದಾನ ಬೇರೆ ಪ್ರದೇಶಗಳ ಅಭಿವೃದ್ಧಿಗೆ ಬಳಕೆ ಮಾಡಲು ಅವಕಾಶ ಇಲ್ಲ. ಬಯಲು ಪ್ರದೇಶದ ಪ್ರದೇಶಾಭಿವೃದ್ಧಿ ನಿಧಿಗೆ ನೀಡಲಾದ ಅನುದಾನಕ್ಕೆ ಸದಸ್ಯರು ಇನ್ನೂ ಲೆಕ್ಕ ಕೊಟ್ಟಿಲ್ಲ’ ಎಂದು ಆಕ್ಷೇಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು