ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಅಭಿವೃದ್ಧಿಗೆ ಹಿನ್ನಡೆ

rs 1.20 ಕೋಟಿ ಮೊತ್ತದಲ್ಲಿ rs 70 ಲಕ್ಷ ಬಿಡುಗಡೆ; ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಲು ಆಗ್ರಹ
Last Updated 18 ಮಾರ್ಚ್ 2021, 4:43 IST
ಅಕ್ಷರ ಗಾತ್ರ

ಪೋಲಕಪಳ್ಳಿ (ಚಿಂಚೋಳಿ): ಚಿಂಚೋಳಿ ತಾಂಡೂರು ಅಂತರ ರಾಜ್ಯ ಮಾರ್ಗದ ರಸ್ತೆ ಬದಿ ಇಲ್ಲಿನ ಪೋಲಕಪಳ್ಳಿ ಬಳಿ ನಿರ್ಮಾಣ ಹಂತದಲ್ಲಿ ಇರುವ ಸಾರುಮರದ ತಿಮ್ಮಕ್ಕನ ವೃಕ್ಷೋದ್ಯಾನ ಕಾಮಗಾರಿ ಸ್ಥಗಿತಗೊಂಡಿದೆ. ಅನುದಾನ ಕೊರತೆಯೇ ಇದಕ್ಕೆ ಕಾರಣ.

₹ 1.20 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡ ಈ ಉದ್ಯಾನ ಪೂರ್ಣಗೊಳ್ಳಲು ಇನ್ನಷ್ಟು ಅನುದಾನದ ಅಗತ್ಯವಿದೆ. ಪ್ರವಾಹ ಮತ್ತು ಕೋವಿಡ್-19 ಮೊದಲಾದ ಕಾರಣಗಳಿಂದ ಅನುದಾನ ನಿರೀಕ್ಷಿಸಿಸಿದ ಪ್ರಮಾಣದಲ್ಲಿ ಬಿಡುಗಡೆ ಆಗಿಲ್ಲ.

ಆಕರ್ಷಕ ಮಹಾದ್ವಾರ, ಪಾದಚಾರಿ ಮಾರ್ಗ, ಪರಗೋಲಾ-2, ನೀರಿನ ಟ್ಯಾಂಕ್, 250 ಸಸಿಗಳು, ಮಕ್ಕಳ ಮನರಂಜನೆಯ ಆಟಿಕೆಗಳು ಸ್ಥಾಪಿಸಲಾಗಿದೆ. ವಿದ್ಯುತ್ ಸಂಪರ್ಕವೂ ಇದೆ.ಎರಡು ಪೈಕಿ ಒಂದು ಪರಗೋಲಾ ಕಾಮಗಾರಿ ಪ್ರಗತಿಯಲ್ಲಿದೆ. ತೆರೆದ ಜಿಮ್ ವ್ಯವಸ್ಥೆ ಇದೆ.

ಆರಂಭಿಕ ಹಂತದಲ್ಲಿ 5 ಕೊಳವೆ ಬಾವಿ ಕೊರೆದರೂ ನೀರು ಲಭಿಸಿರಲಿಲ್ಲ. ಪುನಃ ಎರಡು ಕೊಳವೆಬಾವಿಗಳನ್ನು ಕೊರೆದಾಗ, ನೀರು ಲಭಿಸಿತು. ಈಗಾಗಲೇ ನೀರಿನ ಶುದ್ಧೀಕರಣ ಘಟಕ ಮಂಜೂರಾಗಿದ್ದು ಕಾಮಗಾರಿ ಕೈಗೊಳ್ಳಬೇಕಿದೆ. ಜಲಪಾತ, ಪ್ರದರ್ಶಕ ಸಸಿಗಳು, ಶೌಚಾಲಯ, ಸ್ನಾನಗೃಹ, ವಿದ್ಯುತ್, ಮಣ್ಣಿನ ಪಾದಚಾರಿ ಮಾರ್ಗಕ್ಕೆ ಬದಲಾಗಿ ಪೇವರ್ ಅಳವಡಿಸಿ ಸುಸಜ್ಜಿತ ಪಾದಚಾರಿ ಮಾರ್ಗ ಕಾಮಗಾರಿ ಮತ್ತು ಕಾರಂಜಿ ನಿರ್ಮಾಣದ ಕಾಮಗಾರಿ ಬಾಕಿಯಿದೆ.

‘ಚಿಂಚೋಳಿಯಲ್ಲಿ ಉದ್ಯಾನ ಇಲ್ಲ. ಇಲ್ಲಿನ ಚಂದಾಪುರದಲ್ಲಿರುವ ವೀರೇಂದ್ರ ಪಾಟೀಲ ಉದ್ಯಾನ ಹೆಸರಿಗಷ್ಟೆ ಇದೆ. ಇದರಿಂದ ಚಿಂಚೋಳಿ-ಚಂದಾಪುರ ಅವಳಿ ಪಟ್ಟಣದ ನಾಗರಿಕರಿಗೆ ವಾಯು ವಿಹಾರಕ್ಕೆ ಅನುಕೂಲವಾಗಲಿದೆ. ಅರಣ್ಯಕ್ಕೆ ಹೋಗಲು ಗೃಹಿಣಿಯರಿಗೆ ಓಡಾಡಲು ಆಗುವುದಿಲ್ಲ. ಹೀಗಾಗಿ ಪೋಲಕಪಳ್ಳಿ ಬಳಿ ವೃಕ್ಷ ಉದ್ಯಾನಕ್ಕೆ ಹೋಗಲು ಜನರಿಗೆ ಅನುಕೂಲವಾಗುತ್ತದೆ’ ಎಂದು ಸ್ಥಳೀಯರು ಹೇಳುತ್ತಾರೆ.

***

ಸಾಲುಮರದ ತಿಮ್ಮಕ್ಕನ ಹೆಸರಲ್ಲಿ ವೃಕ್ಷೆ ಉದ್ಯಾನ ಮಾಡುತ್ತಿರುವುದು ಸಂತಸದ ಸಂಗತಿ. ಅಗತ್ಯ ಅನುದಾನ ನೀಡಿಕಾಮಗಾರಿ ಪೂರ್ಣಗೊಳಿಸಬೇಕು
–ಶರಣುಪಾಟೀಲ ಮೋತಕಪಳ್ಳಿ,ವಕೀಲ, ಚಿಂಚೋಳಿ

***
ಪೋಲಕಪಳ್ಳಿಯ ವೃಕ್ಷೋದ್ಯಾನ ಕಾಮಗಾರಿ ಸ್ಥಗಿತಗೊಳಿಸಿಲ್ಲ. ನಿಧಾನವಾಗಿ ನಡೆಯುತ್ತಿದೆ. ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದೇವೆ.
–ಮಹಮದ್ ಮುನೀರ್ ಅಹಮದ್, ವಲಯ ಅರಣ್ಯಾಧಿಕಾರಿ, ಚಿಂಚೋಳಿ

***

ಟ್ರೀ ಪಾರ್ಕ್ ಕಾಮಗಾರಿ ಸ್ಥಗಿತ ಗೊಂಡಿರುವ ಸುದ್ದಿ ಗಮನಕ್ಕೆ ಬಂದಿಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಅನುದಾನ ಬಿಡುಗಡೆಗೆ ಕ್ರಮಕೈಗೊಳ್ಳುತ್ತೇನೆ.
– ಅವಿನಾಶ ಜಾಧವ, ಶಾಸಕ, ಚಿಂಚೋಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT