ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಐತಿಹಾಸಿಕ ದಿನ

ಸ್ಯಾನ್‌ಫ್ರಾನ್ಸಿಸ್ಕೊದಿಂದ ಬೆಂಗಳೂರಿಗೆ ಯಶಸ್ವಿ ಪಯಣ * ಮಹಿಳಾ ಸಿಬ್ಬಂದಿಗೆ ಅಭಿನಂದನೆಗಳ ಸುರಿಮಳೆ
Last Updated 11 ಜನವರಿ 2021, 19:43 IST
ಅಕ್ಷರ ಗಾತ್ರ

ಬೆಂಗಳೂರು: ವಿಶ್ವದ ಎರಡು ಪ್ರಮುಖ ಸಿಲಿಕಾನ್‌ ವ್ಯಾಲಿ ಎನಿಸಿರುವ ಸ್ಯಾನ್‌ ಫ್ರಾನ್ಸಿಸ್ಕೊ ಮತ್ತು ಬೆಂಗಳೂರು ನಡುವೆ ತಡೆರಹಿತವಾಗಿ ಸಂಚರಿಸುವ ಏರ್‌ ಇಂಡಿಯಾ ವಿಮಾನ ಸೋಮವಾರ ನಸುಕಿನ 3.07ಕ್ಕೆ ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಬಂದಿಳಿಯಿತು. ಸಂಪೂರ್ಣ ಮಹಿಳಾ ಸಿಬ್ಬಂದಿಯೇ ಇದ್ದ ವಿಮಾನವನ್ನು ಏರ್‌ ಇಂಡಿಯಾ ಮತ್ತು ಬಿಐಎಎಲ್‌ನ ಸಿಬ್ಬಂದಿಯು ಸಂಭ್ರಮದಿಂದ ಸ್ವಾಗತಿಸಿದರು.

ಉತ್ತರ ಧ್ರುವದಿಂದ ಹೊರಟ ವಿಮಾನ 17 ತಾಸುಗಳ ಪ್ರಯಾಣದ ನಂತರ ನಗರಕ್ಕೆ ಅಡಿ ಇಟ್ಟಿತು.

238 ಆಸನವುಳ್ಳ ಏರ್‌ ಇಂಡಿಯಾದ ‘ಎಐ–176’ ವಿಮಾನವನ್ನು ಮಹಿಳಾ ಸಿಬ್ಬಂದಿ ಯಶಸ್ವಿಯಾಗಿ ‘ಲ್ಯಾಂಡ್’ ಮಾಡಿದರು. ಸಾಮಾನ್ಯವಾಗಿ ಪೆಸಿಫಿಕ್ ಅಥವಾ ಟೋಕಿಯೊ ಮಾರ್ಗವಾಗಿ ಅಮೆರಿಕದಿಂದ ವಿಮಾನಗಳು ಬರುತ್ತಿದ್ದವು. ಆದರೆ, ಹೆಚ್ಚು ದೂರವನ್ನು ಕಡಿಮೆ ಸಮಯದಲ್ಲಿ ಕ್ರಮಿಸುವ ಮೂಲಕ ಈ ವಿಮಾನದ ಎಲ್ಲ ಮಹಿಳಾ ಸಿಬ್ಬಂದಿ ಹೊಸ ಹಿರಿಮೆಗೆ ಪಾತ್ರರಾದರು. ಅಮೆರಿಕದ ಜೊತೆಗೆ ಸಂಪರ್ಕ ಪಡೆದುಕೊಂಡ ದಕ್ಷಿಣ ಭಾರತದ ಮೊದಲ ನಗರ ಎಂಬ ಹಿರಿಮೆಗೂ ಬೆಂಗಳೂರು ಪಾತ್ರವಾಯಿತು.

ಕೆಐಎನ ಕಾರ್ಯನಿರ್ವಾಹಕ ಅಧಿಕಾರಿ ಹರಿ ಮರಾರ್ ಮಾತನಾಡಿ, ‘ಕೆಐಎ ಪಾಲಿಗೆ ಇದು ಐತಿಹಾಸಿಕ ದಿನ. ಬೆಂಗಳೂರಿಗರ ಬಹು ದೀರ್ಘಕಾಲದ ಬೇಡಿಕೆ ಈಡೇರಿದಂತಾಗಿದೆ.
ಜನ ಮತ್ತು ಉದ್ಯಮಗಳ ನಡುವೆ ತ್ವರಿತ ಸಂಪರ್ಕ ಸಾಧ್ಯವಾಗುವುದರಿಂದ ನಗರವು ಹೊಸ ಸಾಧ್ಯತೆಗಳ ಕಡೆಗೆ ತೆರೆದುಕೊಳ್ಳಲಿದೆ’ ಎಂದರು.

‘ಮುಂದಿನ ದಿನಗಳಲ್ಲಿ ಬೆಂಗಳೂರಿನಿಂದ ವಿಶ್ವದ ಇತರೆ ಪ್ರಮುಖ ನಗರಗಳಿಗೂ ನೇರ ವಿಮಾನ ಸಂಚಾರ ಆರಂಭಿಸಲು ಈ ದಿನ ಹೊಸ ಪ್ರೇರಣೆ ನೀಡಿದೆ’ ಎಂದೂ ಹೇಳಿದರು.

ಕ್ಯಾಪ್ಟನ್‌ಗಳಾದ ಜೋಯಾ ಅಗರ್‌ವಾಲ್, ಪಾಪಗರಿ ತನ್ಮಯಿ, ಆಕಾಂಕ್ಷ ಸೋನಾವರೆ ಮತ್ತು ಶಿವಾನಿ ಮನ್ಹಾಸ್ ಅವರನ್ನು ಬಿಐಎಎಲ್‌ ಸಿಬ್ಬಂದಿ ಹೃತ್ಪೂರ್ವಕವಾಗಿ ಸ್ವಾಗತಿಸಿದರು.

ಮೊದಲ ಪೈಲಟ್‌ ಕನ್ನಡಿಗ ಮಧು

ಬೆಂಗಳೂರಿಗೆ ಬಂದಿಳಿದ ವಿಮಾನ ‘ಎಐ-175’ ಸೋಮವಾರ ಮಧ್ಯಾಹ್ನ 2.30ಕ್ಕೆ ಸ್ಯಾನ್‌ಫ್ರ್ಯಾನ್ಸಿಸ್ಕೋ ಕಡೆಗೆ ಪ್ರಯಾಣ ಬೆಳೆಸಿತು. ಈ ವಿಮಾನದ ಪೈಲಟ್‌ ಕನ್ನಡಿಗ ಮಧು ಚನ್ನಬಸಪ್ಪ ವೆಂಕಟದಾಸ್.

ಯಲಹಂಕ ನಿವಾಸಿ ಮಧು, ಪೈಲಟ್ ಸೇರಿದಂತೆ ಇಡೀ ವಿಮಾನದಲ್ಲಿರುವ 16 ಜನ ಸಿಬ್ಬಂದಿಯಲ್ಲಿ ಏಕೈಕ ಕನ್ನಡಿಗ. 48 ವರ್ಷದ ಅವರು, 1996ರಲ್ಲಿ ಏರ್ ಇಂಡಿಯಾ ಸೇರ್ಪಡೆಗೊಂಡಿದ್ದರು.

ವಿಮಾನ ಏರುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಈ ಮೊದಲು ದೆಹಲಿ ಅಥವಾ ಮುಂಬೈಯಿಂದ ಅಮೆರಿಕ ಮತ್ತಿತರ ದೇಶಗಳಿಗೆ ಹಲವು ಬಾರಿ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ, ನನ್ನ ತಾಯ್ನಾಡಿನಿಂದ ಬೇರೆ ದೇಶಕ್ಕೆ ವಿಮಾನವನ್ನು ಟೇಕ್ ಆಫ್ ಮಾಡುತ್ತಿರುವುದು ಇದೇ ಮೊದಲು. ನಾನು ಕನ್ನಡದಲ್ಲೇ ಪ್ರಯಾಣಿಕರಿಗೆ ಸೂಚನೆಗಳನ್ನು ನೀಡುತ್ತೇನೆ. ನಂತರ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ನೀಡುತ್ತೇನೆ’ ಎಂದೂ ಹೇಳಿದರು.

ಸಿಲಿಕಾನ್ ಸಿಟಿಗಳ ನಡುವಣ ಪಯಣ

* ಮಾರ್ಗ: ಸ್ಯಾನ್‌ಫ್ರ್ಯಾನ್ಸಿಸ್ಕೋ-ಬೆಂಗಳೂರು (ಎಐ 176)
ಪ್ರಯಾಣಿಸಿದವರ ಸಂಖ್ಯೆ 228

* ಮಾರ್ಗ: ಬೆಂಗಳೂರು- ಸ್ಯಾನ್‌ಫ್ರ್ಯಾಾನ್ಸಿಸ್ಕೋ (ಎಐ 175)
ಪ್ರಯಾಣಿಸಿದವರ ಸಂಖ್ಯೆ- 225

* ಮಾರ್ಗದ ಉದ್ದ- 13,993 ಕಿ.ಮೀ.
* ಪ್ರಯಾಣ ಸಮಯ- 17 ತಾಸು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT