ಬುಧವಾರ, ಡಿಸೆಂಬರ್ 8, 2021
26 °C
ಆಟೋ ಚಾಲಕರು, ಕಾರ್ಮಿಕರು, ಐಟಿ ಉದ್ಯೋಗಿಗಳ ಆಸಕ್ತಿ

‘ಕನ್ನಡಕ್ಕಾಗಿ ನಾನು ವಿಶೇಷ ಅಭಿಯಾನ': ದೂರ ಉಳಿದ ‘ಸ್ಯಾಂಡಲ್‌ವುಡ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕನ್ನಡಕ್ಕಾಗಿ ನಾನು’ ವಿಶೇಷ ಅಭಿಯಾನಕ್ಕೆ ಆಟೋ ಚಾಲಕರ ಸಂಘ, ಗಾರ್ಮೆಂಟ್ಸ್‌ ಕಾರ್ಮಿಕರು, ಐಟಿ–ಬಿಟಿ ಉದ್ಯೋಗಿಗಳು, ಕಾಲೇಜು ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆದರೆ, ಕನ್ನಡ ಚಲನಚಿತ್ರ ನಟ– ನಟಿಯರು ಮತ್ತು ಚಿತ್ರೋದ್ಯಮದ ಮಂದಿ ಈ ಅಭಿಯಾನದಿಂದ ದೂರ ಉಳಿದಿರುವುದು ಚರ್ಚೆಗೆ ಕಾರಣವಾಗಿದೆ. 

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ರಾಜ್ಯ ಸರ್ಕಾರ ನಟ– ನಟಿಯರಿಗೆ ಮನವಿ ಮಾಡಿತ್ತು. ಆದರೆ, ಚಿತ್ರೋದ್ಯಮದಿಂದ ಯಾರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಗಳು ತಿಳಿಸಿವೆ.

ಈ ಅಭಿಯಾನಕ್ಕೆ ಆಟೋ ಚಾಲಕರ ಸಂಘ, ಗಾರ್ಮೆಂಟ್ಸ್‌ ಕಾರ್ಮಿಕರು, ಐಟಿ– ಬಿಟಿ ಉದ್ಯೋಗಿಗಳು ಕೈಜೋಡಿಸಿದ್ದು, ಕನ್ನಡದ ಕಲರವವನ್ನು ಹಬ್ಬಿಸುವಲ್ಲಿ ತಮ್ಮದೇ ಆದ ರೀತಿಯಲ್ಲಿ ಬೆಂಗಳೂರು ನಗರದಲ್ಲಿ ಪ್ರಯತ್ನ ಆರಂಭಿಸಿದ್ದಾರೆ. ಐಎಎಸ್‌ ಅಧಿಕಾರಿಗಳೂ ಕೈಜೋಡಿಸಿದ್ದಾರೆ. ಇದರಿಂದಾಗಿ ಜನರ ಮಧ್ಯೆ ‘ಮಾತಾಡ್‌ ಮಾತಾಡ್‌ ಕನ್ನಡ’ ಈಗ ಹೆಚ್ಚು ಚರ್ಚೆಗೆ ಕಾರಣವಾಗಿದೆ. ಇದೀಗ ಜಿಲ್ಲೆಗಳು ಮತ್ತು ತಾಲ್ಲೂಕುಗಳಲ್ಲೂ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅದರಲ್ಲೂ ಕನ್ನಡ ಗಾಯನ ಯಶಸ್ವಿಗೊಳಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಮೂಲಕ ಎಲ್ಲ ಜಿಲ್ಲಾಧಿಕಾರಿಗಳಿಗೂ ಪತ್ರ ಬರೆಯಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಪ್ರಶಸ್ತಿ ಪ್ರದಾನ, ಮಾಸಾಶನ ವಿತರಣೆ ಮತ್ತು ವಿವಿಧ ಸಂಘಟನೆಗಳಿಗೆ ಅನುದಾನ ಒದಗಿಸುವುದಕ್ಕೆ ಸೀಮಿತವಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಲವು ವರ್ಷಗಳ ಬಳಿಕ ಮೊದಲ ಬಾರಿಗೆ ರಾಜ್ಯವ್ಯಾಪಿ ಹಾಗೂ ವಾರವಿಡೀ ಕನ್ನಡದ ಸಂಸ್ಕೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಲಾಖೆ ಸಚಿವ ಸುನಿಲ್‌ ಕುಮಾರ್‌ ಒತ್ತಾಸೆಯಿಂದ ಅಧಿಕಾರಿಗಳು ಈಗ ರಾತ್ರಿ 10.30 ರವರೆಗೆ ಕಾರ್ಯನಿರ್ವಹಿಸಬೇಕಾಗಿದೆ. ಅಲ್ಲದೆ, ಪ್ರತಿ ದಿನ ಸಂಜೆ 7 ರ ವೇಳೆಗೆ ಆ ದಿನದ ವರದಿಯನ್ನೂ ಒಪ್ಪಿಸಬೇಕಾಗಿದೆ ಎಂದು ಇಲಾಖೆಯ ಮೂಲಗಳು ಹೇಳಿವೆ.

‘ಇಲಾಖೆಯಲ್ಲಿ ಹಣವಿಲ್ಲ, ಸಿಬ್ಬಂದಿ ಇಲ್ಲ ಎಂಬ ಮಾತು ಆರಂಭದಲ್ಲಿ ಕೇಳಿ ಬಂದಿತ್ತು. ಈ ಸಮಸ್ಯೆಯನ್ನು ನೀಗಿಸಲು ಸಚಿವರು ಉನ್ನತ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಬಿಬಿಎಂಪಿ ಜತೆ ಮಾತುಕತೆ ನಡೆಸಿ ಅವರ ಸಿಬ್ಬಂದಿ ಮತ್ತು ಸಂಪನ್ಮೂಲ ಬಳಸಿಕೊಳ್ಳಲಾಗುತ್ತಿದೆ. ಸಾಮಾಜಿಕ ಹೊಣೆಗಾರಿಕೆ ನಿಧಿಯೂ ಸಿಕ್ಕಿದೆ. ಹೀಗಾಗಿ ಹಣದ ಕೊರತೆ ನೀಗಿದೆ’ ಎಂದು ಮೂಲಗಳು ತಿಳಿಸಿವೆ.

‘ಐಟಿ ಮತ್ತು ಬಿಟಿ ಕಂಪನಿಗಳಲ್ಲಿ ಕನ್ನಡದ ವಾತಾವರಣವನ್ನು ವೃದ್ಧಿಗೊಳಿಸುವ ಉದ್ದೇಶದಿಂದ ಸಚಿವ ಸುನಿಲ್ ಕುಮಾರ್‌ ಅವರು ಉಪಚುನಾವಣೆ ಬಳಿಕ ಒಂದು ಅಥವಾ ಎರಡು ಐಟಿ ಕಂಪನಿಗಳಿಗೆ ಭೇಟಿ ನೀಡಲು ಉದ್ದೇಶಿಸಿದ್ದಾರೆ. ಅಲ್ಲಿ ಕನ್ನಡೇತರರಿಗೆ ಕನ್ನಡ ಕಲಿಯುವ ಕೈಪಿಡಿ ವಿತರಿಸಲಿದ್ದಾರೆ’ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು