ಶನಿವಾರ, ಜನವರಿ 23, 2021
28 °C
ಅಂತರರಾಷ್ಟ್ರೀಯ ಡ್ರಗ್ಸ್ ಜಾಲ * ಸ್ನೇಹಿತನ ವಿಚಾರಿಸಲು ಹೋದ ಸಿಸಿಬಿ ತಂಡಕ್ಕೆ ಸಿಕ್ಕಿಬಿದ್ದ ಆರೋಪಿ

ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ: ಚೆನ್ನೈನನಲ್ಲಿದ್ದ ಆದಿತ್ಯ ಆಳ್ವ ಬಂಧನ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

Aditya Alva. Credit: Facebook

ಬೆಂಗಳೂರು: ಅಂತರರಾಷ್ಟ್ರೀಯ ಡ್ರಗ್ಸ್ ಜಾಲದ ಬಗ್ಗೆ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿ ಆದಿತ್ಯ ಆಳ್ವ ಸೋಮವಾರ ಚೆನ್ನೈನಲ್ಲಿ ಕೊನೆಗೂ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

‘ಮಾಜಿ ಸಚಿವರ ಪುತ್ರನಾದ ಆದಿತ್ಯ, ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಹಲವರ ವಿರುದ್ಧ ಕಳೆದ ಸೆಪ್ಟೆಂಬರ್‌ನಲ್ಲೇ ಪ್ರಕರಣ ದಾಖಲಾಗಿತ್ತು. ಅಂದಿನಿಂದಲೇ ತಲೆಮರೆಸಿಕೊಂಡಿದ್ದ. ಚೆನ್ನೈನ ‘ಹೌಸ್ ಆಫ್ ರೆಸ್ಟ್’ ಹೋಮ್ ಸ್ಟೇನಲ್ಲಿದ್ದ ಆತನನ್ನು ಬಂಧಿಸಲಾಗಿದೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಮಂಗಳವಾರ ಹೇಳಿದರು.

‘ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಲ್ಲಿ ಕೆಲ ದಿನ ಸುತ್ತಾಡಿದ್ದ ಆರೋಪಿ, ಮೂರು ತಿಂಗಳ ಹಿಂದೆ ಹೋಮ್‌ ಸ್ಟೇಗೆ ಹೋಗಿ ಅಲ್ಲಿಯೇ ಉಳಿದುಕೊಂಡಿದ್ದ. ಸಿಸಿಬಿ ಇನ್‌ಸ್ಪೆಕ್ಟರ್ ಪುನೀತ್‌ ನೇತೃತ್ವದ ತಂಡ, ಕಾರ್ಯಾಚರಣೆ ನಡೆಸಿ ಆತನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ’ ಎಂದೂ ತಿಳಿಸಿದರು.

ಪಾರ್ಟಿ ನಡೆಸಿ, ಡ್ರಗ್ಸ್ ಪೂರೈಕೆ: ‘ಹೋಮ್‌ ಸ್ಟೇನಲ್ಲೂ ಸ್ನೇಹಿತರ ಗುಂಪು ಕಟ್ಟಿಕೊಂಡಿದ್ದ ಆದಿತ್ಯ, ಅಲ್ಲಿಯೂ ರಾತ್ರಿ ಪಾರ್ಟಿ ಆಯೋಜಿಸುತ್ತಿದ್ದ. ಅದೇ ಪಾರ್ಟಿಯಲ್ಲಿ ಡ್ರಗ್ಸ್ ಪೂರೈಸುತ್ತಿದ್ದ ಮಾಹಿತಿ ಸಿಕ್ಕಿದೆ’ ಎಂದೂ ಸಂದೀಪ್ ಪಾಟೀಲ ಹೇಳಿದರು.

‘ಆರೋಪಿಯನ್ನು ನಗರಕ್ಕೆ ಕರೆತರಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ವಿಚಾರಣೆ
ಗಾಗಿ ಕಸ್ಟಡಿಗೆ ನೀಡುವಂತೆ ಕೋರಲಾಗುವುದು. ಕಸ್ಟಡಿಗೆ ಸಿಕ್ಕ ಬಳಿಕವೇ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದೂ ತಿಳಿಸಿದರು.

ಸ್ನೇಹಿತನ ಮೊಬೈಲ್ ನೀಡಿದ್ದ ಸುಳಿವು: ‘ಪ್ರಕರಣ ದಾಖಲಾದಾಗಿನಿಂದಲೂ ಆದಿತ್ಯ, ತನ್ನ ಮೊಬೈಲ್ ಬಳಸುವುದನ್ನೇ ಬಿಟ್ಟಿದ್ದ. ಆಗಾಗ ಸ್ನೇಹಿತರ ಮೊಬೈಲ್ ಬಳಕೆ ಮಾಡುತ್ತಿದ್ದ. ಹೀಗಾಗಿ, ಸ್ನೇಹಿತರ ಮೇಲೆ ಸಿಸಿಬಿ ಪೊಲೀಸರು ನಿಗಾ ಇರಿಸಿದ್ದರು. ಎರಡು ತಿಂಗಳಿನಿಂದ ಆರೋಪಿ, ಯಾವುದೇ ಕರೆಯನ್ನೂ ಮಾಡಿರಲಿಲ್ಲ’ ಎಂದೂ ಸಿಸಿಬಿ ಮೂಲಗಳು ಹೇಳಿವೆ.

‘ಅಪರಿಚಿತ ಮೊಬೈಲ್ ನಂಬರ್‌ನಿಂದ ಬೆಂಗಳೂರಿನಲ್ಲಿರುವ ಸ್ನೇಹಿತನೊಬ್ಬನಿಗೆ ಕರೆ ಮಾಡಿದ್ದ ಆದಿತ್ಯ, ಚೆನ್ನೈನಲ್ಲಿರುವ ಹೋಮ್ ಸ್ಟೇಗೆ ಬರುವಂತೆ ಸೂಚಿಸಿದ್ದ. ಸ್ನೇಹಿತ, ಚೆನ್ನೈಗೂ ಹೋಗಿದ್ದ. ಆದರೆ, ಕರೆ ಮಾಡಿದ್ದು ಆದಿತ್ಯ ಎಂಬುದು ಪೊಲೀಸರಿಗೆ ಗೊತ್ತಿರಲಿಲ್ಲ. ಅಪರಿಚಿತ ಸಂಖ್ಯೆಯಾಗಿದ್ದರಿಂದ ಅನುಮಾನಗೊಂಡು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲೆಂದು ಪೊಲೀಸರು ಚೆನ್ನೈಗೆ ಹೋಗಿದ್ದರು. ಅದೇ ಹೋಮ್ ಸ್ಟೇನಲ್ಲಿ ಸ್ನೇಹಿತನ ಜೊತೆ ಆರೋಪಿ ಆದಿತ್ಯ
ಸಹ ಸಿಕ್ಕಿಬಿದ್ದ’ ಎಂದೂ ಮೂಲಗಳು ತಿಳಿಸಿವೆ.

‘17 ಮಂದಿ ಬಂಧನ’:

‘ಅಂತರರಾಷ್ಟ್ರೀಯ ಡ್ರಗ್ಸ್ ಜಾಲ ಪ್ರಕರಣದಲ್ಲಿ ಇದುವರೆಗೂ 17 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಾದಾಗಿನಿಂದ ತಲೆಮರೆಸಿಕೊಂಡಿದ್ದ 6 ಆರೋಪಿಗಳ ಪೈಕಿ ಆದಿತ್ಯ ಸೇರಿ ಮೂವರು ಸಿಕ್ಕಿಬಿದ್ದಿದ್ದಾರೆ. ಉಳಿದ ಮೂವರಿಗಾಗಿ ಹುಡುಕಾಟ ನಡೆದಿದೆ’ ಎಂದು ಸಂದೀಪ್ ಪಾಟೀಲ ಹೇಳಿದರು.

‘ಹೋಮ್‌ ಸ್ಟೇನಲ್ಲಿ ನಡೆದ ಪಾರ್ಟಿಗಳಿಗೆ ಡ್ರಗ್ಸ್ ಪೂರೈಸಿರುವ ಮಾಹಿತಿ ಆಧರಿಸಿಯೂ ತನಿಖೆ ನಡೆಯುತ್ತಿದೆ. ಡ್ರಗ್ಸ್ ಪೂರೈಸಿದ್ದು ಯಾರು? ಯಾರೆಲ್ಲ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದರು? ಎಂಬ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು