ಮಂಗಳವಾರ, ಜನವರಿ 26, 2021
24 °C
ನಾಳೆ ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯರಿಗೆ ಕಾರ್ಯಾಗಾರ

ಸಪ್ತಪದಿ ಯೋಜನೆಗೆ ಮರು ಚಾಲನೆ: ಕೋಟ ಶ್ರೀನಿವಾಸ ಪೂಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Kota Srinivas Poojary

ಬೆಂಗಳೂರು: ಕೋವಿಡ್‌ನಿಂದಾಗಿ ಸ್ಥಗಿತಗೊಳಿಸಿದ್ದ ‘ಸಪ್ತಪದಿ’ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಮರುಚಾಲನೆ ನೀಡಲು ಮುಜರಾಯಿ ಇಲಾಖೆ ತೀರ್ಮಾನಿಸಿದ್ದು, ಇದೇ 15 ಮತ್ತು 20 ರಂದು ರಾಜ್ಯದಾದ್ಯಂತ ಸಪ್ತಪದಿ ಕಾರ್ಯಕ್ರಮ ನಡೆಯಲಿದೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಫೆಬ್ರುವರಿ 17 ಮತ್ತು 27 ರಂದು ರಾಜ್ಯಮಟ್ಟದಲ್ಲಿ ನಡೆಯಲಿದೆ. ಅಲ್ಲದೆ, ಇನ್ನು ಮುಂದೆ ಪ್ರತಿ ತಿಂಗಳೂ ಸಪ್ತಪದಿ ಕಾರ್ಯಕ್ರಮ ಜಿಲ್ಲಾ ಮಟ್ಟದಲ್ಲಿ ನಡೆಯಲಿದೆ. ಆಗಮ ಪಂಡಿತರು ದಿನಾಂಕ ನಿಗದಿ ಮಾಡುತ್ತಾರೆ ಎಂದು ಹೇಳಿದರು.

ವಧುವಿಗೆ ₹40 ಸಾವಿರ ಮೌಲ್ಯದ ಮಾಂಗಲ್ಯವನ್ನು ನೀಡಲಾಗುವುದು. ಕಾವೇರಿ ಎಂಪೋರಿಯಂ ಮೂಲಕ ಮಾಂಗಲ್ಯ ಖರೀದಿಸಲು ತೀರ್ಮಾನಿಸಲಾಗಿದೆ.

 ಇ–ಆಡಳಿತ ಜಾರಿ:
ಇನ್ನು ಮುಂದೆ ಮುಜರಾಯಿ ಆಡಳಿತ ಇ–ಆಡಳಿತವಾಗಿ ಮಾರ್ಪಡಲಿದೆ. ಕಡತ ವಿಲೇವಾರಿ ಮತ್ತು ಕಾಗದ ಪತ್ರಗಳ ವ್ಯವಹಾರ ಡಿಜಿಟಲ್‌ ರೂಪದಲ್ಲಿ ನಡೆಯಲಿದೆ. ಇದರಿಂದ ಆಡಳಿತದಲ್ಲಿ ಪಾರದರ್ಶಕತೆಯ ಜತೆಗೆ ಆಡಳಿತಕ್ಕೆ ಚುರುಕೂ ಸಿಗುತ್ತದೆ ಎಂದು ಸಚಿವರು ಹೇಳಿದರು.

ಇದರಿಂದಾಗಿ ಯಾವುದೇ ಕಡತಗಳು ಬಾಕಿ ಉಳಿಯುವ ಪ್ರಶ್ನೆಯೇ ಇಲ್ಲ. ರಾಜ್ಯದ ಯಾವುದೇ ಮೂಲೆಯಿಂದ ಒಂದು ಬಟನ್‌ ಕ್ಲಿಕ್ ಮಾಡಿದರೆ ಸಾಕು ಕಡತಗಳು ರವಾನೆ ಆಗುತ್ತವೆ. ತಕ್ಷಣವೇ ಅವುಗಳನ್ನು ಪರಿಶೀಲಿಸಬಹುದು. ಕಡತಗಳ ಕಾಣೆ ಆಗುವುದನ್ನು ತಪ್ಪಿಸಲು ಇದರಿಂದ ಸಾಧ್ಯ ಎಂದು ಅವರು ಹೇಳಿದರು.

ನಾಳೆ ಒಂದು ದಿನದ ಕಾರ್ಯಾಗಾರ: ಜಿಲ್ಲಾ ಮಟ್ಟದ ಧಾರ್ಮಿಕ ಪರಿಷತ್‌ ಸದಸ್ಯರಿಗೆ ಗುರುವಾರ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಧರ್ಮಸ್ಥದ  ಡಿ.ವಿರೇಂದ್ರ ಹೆಗ್ಗಡೆ, ಆರ್ಟ್‌ ಆಫ್‌ ಲಿವಿಂಗ್‌ನ ರವಿಶಂಕರ ಗುರೂಜಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಈ ಕಾರ್ಯಾಗಾರದಲ್ಲಿ ಮುಖ್ಯವಾಗಿ, ದೇವಸ್ಥಾನಗಳಲ್ಲಿ ಪೂಜಾ ಪದ್ಧತಿ, ಆಡಳಿತ, ಸ್ವಚ್ಛತೆ ಕಾಪಾಡುವ ಕುರಿತು ತಜ್ಞರು ಮಾತನಾಡಲಿದ್ದಾರೆ ಎಂದು ಶ್ರೀನಿವಾಸ ಪೂಜಾರಿ ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು