ಪ್ರಧಾನಿ ಮೋದಿಯೇ ವಿಫಲವಾಗಿರುವಾಗ ಹೊಸ ಸಚಿವರೇನು ಮಾಡಿಯಾರು?: ಸತೀಶ್ ಜಾರಕಿಹೊಳಿ

ಬೆಳಗಾವಿ: ‘ಜನಪರ ಆಡಳಿತ ನೀಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ವಿಫಲವಾಗಿರುವಾಗ ಸಚಿವರು ಏನು ಮಾಡಿಯಾರು?’.
ಕೇಂದ್ರ ಸಚಿವ ಸಂಪುಟ ಪುನರ್‌ರಚನೆ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ವ್ಯಂಗ್ಯವಾಡಿದ್ದು ಹೀಗೆ.
ಇಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೇಂದ್ರ ಸರ್ಕಾರ ಗಂಟೆಗೆ 50 ಕಿ.ಮೀ. ವೇಗದಲ್ಲಿ ಓಡುತ್ತಿತ್ತು. ಈಗ ಹೊಸಬರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಇನ್ಮುಂದೆ ಗಂಟೆಗೆ 30 ಕಿ.ಮೀ. ವೇಗದಲ್ಲಿ ಹೋಗಲಿದೆ. ಮೀರಜ್‌ನಿಂದ ಪಂಢರಪುರಕ್ಕೆ ಮೆರವಣಿಗೆ ಹೋದಂತೆ ನಿಧಾನವಾಗಿ ಸಾಗಲಿದೆ’ ಎಂದು ಟೀಕಿಸಿದರು.
‘ಸಂಪುಟಕ್ಕೆ ‘ಔಟ್‌ಡೇಟೆಡ್ ಗಿರಾಕಿ’ಗಳನ್ನೇ ಸೇರಿಸಿಕೊಳ್ಳಲಾಗಿದೆ. ಹೊಸದಾಗಿ ರಾಜ್ಯದ ನಾಲ್ವರು ಸಚಿವರಾದರೂ ಏನೂ ಪ್ರಯೋಜನವಿಲ್ಲ. ಕರ್ನಾಟಕದ ಇನ್ನೂ 10 ಮಂದಿಯನ್ನು ಸಚಿವರನ್ನಾಗಿ ಮಾಡಿದರೂ ಉಪಯೋಗ ಆಗುವುದಿಲ್ಲ. ಕೆಲಸ ಮಾಡುವ ಇಚ್ಛಾಶಕ್ತಿ ಪ್ರಧಾನಿಯಲ್ಲೇ ಇಲ್ಲ. ಸೇನಾಧಿಪತಿಯಲ್ಲೇ ಇಚ್ಛಾಶಕ್ತಿ ಇಲ್ಲದಿರುವಾಗ ಜೊತೆಗಿರುವ ಸೈನಿಕರೇನು ಮಾಡುತ್ತಾರೆ? ಪ್ರಧಾನಿ ಭೇಟಿಯಾಗಲು ಮಂತ್ರಿಗಳಿಗೇ ಸಾಧ್ಯವಾಗುತ್ತಿಲ್ಲ. ದೇಶದ ಜನರ ಗಮನ ಬೇರೆಡೆ ಸೆಳೆಯುವುದಕ್ಕಾಗಿ ಸಂಪುಟ ಪುನರ್‌ರಚಿಸಿದ್ದಾರೆ’ ಎಂದು ಆರೋಪಿಸಿದರು.
‘ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಕೋರ್ಟ್ ಆದೇಶ ಮಾಡಿದ್ದರಿಂದಾಗಿ ಕೇಂದ್ರದಿಂದ ರಾಜ್ಯಕ್ಕೆ ಆಮ್ಲಜನಕ ಲಭ್ಯವಾಯಿತು. ಕೋವಿಡ್ ಲಸಿಕೆಗಾಗಿ ಜನರು ಪರದಾಡುವುದು ತಪ್ಪಿಲ್ಲ. ಈಗಿನಂತೆಯೇ ನಡೆದರೆ ಲಸಿಕಾ ಅಭಿಯಾನ ಪೂರ್ಣವಾಗಲು ಇನ್ನೂ ಎರಡು ವರ್ಷಗಳು ಬೇಕಾಗುತ್ತವೆ’ ಎಂದು ಹೇಳಿದರು.
‘ಪಕ್ಷದ ಮುಂದಿನ ಸಾಲಿನ ಮುಂಚೂಣಿ ನಾಯಕರಾರೂ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿಲ್ಲ. ಹಿಂದಿನ ಸಾಲಿನಲ್ಲಿ ಕುಳಿತು ಸೀಟಿ ಹೊಡೆಯುವವರು ಇರುತ್ತಾರೆ. ನಾವೇನು ಮಾಡೋಣ? ಮುಖ್ಯಮಂತ್ರಿ ಸ್ಥಾನ ಅಭಿಮಾನಿಗಳು ಹೇಳಿದರೆ ಸಿಗುವಂಥದಲ್ಲ. ಹೈಕಮಾಂಡ್ ಹಾಗೂ ಶಾಸಕರು ನಿರ್ಧರಿಸುವಂಥದು. ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹಾಕಿದಾಕ್ಷಣಕ್ಕೆ ಸಾಧ್ಯವಾಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.
‘ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮದಿಂದಾಗಿಯೇ ಪ್ರಧಾನಿ ಆಗಿಲ್ಲ; ಅವರ ಭಾಷಣದಿಂದಲೂ ಆಗಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದಿಂದಾಗಿ ಆಗಿದ್ದಾರೆ’ ಎಂದು ಹೇಳಿದರು.
ಇದನ್ನೂ ಓದಿ: ಕೇಂದ್ರ ಸಂಪುಟ ಪುನರ್‌ರಚನೆ: ಕರ್ನಾಟಕದ ಕೈಯಲ್ಲಿ ಮಹತ್ವದ ಖಾತೆಗಳು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.