ಮಂಗಳವಾರ, ಡಿಸೆಂಬರ್ 6, 2022
21 °C
ಮುಖ್ಯಮಂತ್ರಿಗೆ ಪತ್ರ ಬರೆದ ಕೆಪಿಸಿಸಿ ಕಾರ್ಯಾಧ್ಯಕ್ಷ

‘ಹಿಂದೂ’ ಪದ ವಿವಾದ: ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ -ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಹಿಂದೂ ಪದಕ್ಕೆ ಅಶ್ಲೀಲ ಅರ್ಥಗಳಿವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಅವರು ನೀಡಿದ ಹೇಳಿಕೆಯನ್ನು ಹಿಂಪಡೆದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬುಧವಾರ ಪತ್ರ ಬರೆದ ಸತೀಶ, ‘ಹಿಂದೂ ಪದದ ಕುರಿತು ನಾನು ನೀಡಿದ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿ ಆಗಬಾರದು ಎಂದು ಹೇಳಿಕೆ ಹಿಂಪಡೆದಿದ್ದೇನೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.

ಅಲ್ಲದೇ, ‘ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನನ್ನನ್ನು ಹಿಂದೂ ವಿರೋಧಿ ಎಂದು ಬಿಂಬಿಸಲು ಹೊರಟಿವೆ. ನನ್ನ ತೇಜೋವಧೆ ಮಾಡುವ ವ್ಯವಸ್ಥಿತಿ ಪಿತೂರಿ ನಡೆದಿದೆ. ಈ ಎಲ್ಲ ಅಂಶಗಳ ಕುರಿತು ಪರಿಶೀಲಿಸಬೇಕು. ನೈಜ ಸ್ಥಿತಿ ವಿವರಿಸದೇ, ಅವಾಂತರ ಸೃಷ್ಟಿಸಿದವರ ವಿರುದ್ಧ ತನಿಖೆಗಾಗಿ ಸಮಿತಿ ರಚಿಸಬೇಕು’ ಎಂದೂ ವಿನಂತಿಸಿದ್ದಾರೆ.

‘ಹಿಂದೂ ಶಬ್ದ ಪರ್ಷಿಯನ್ ಭಾಷೆಯಿಂದ ಬಂದಿದೆ. ಇದು ಭಾರತಕ್ಕೆ ಹೇಗೆ ಬಂತು? ಹಲವಾರು ಲೇಖನಗಳಲ್ಲಿ ಹಿಂದೂ ಪದದ ಬಗ್ಗೆ ಕೆಟ್ಟ ಅರ್ಥಗಳಿವೆ ಎಂಬುದಾಗಿ ಬರೆದಿದ್ದಾರೆ ಎಂದು ನಾನು ಹೇಳಿಕೆ ನೀಡಿದ್ದೇನೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಆಗಬೇಕಾದುದು ಅವಶ್ಯ ಎಂದು ಹೇಳಿದ್ದೇನೆ. ವಿಕಿಪೀಡಿಯಾ, ಪುಸ್ತಕಗಳು, ಶಬ್ದಕೋಶಗಳು ಹಾಗೂ ಇತಿಹಾಸಕಾರರ ಬರಹದ ಉಲ್ಲೇಖದ ಮೇಲೆ ಈ ನನ್ನ ಭಾಷಣ ಆಧರಿತವಾಗಿದೆ’ ಎಂದು ವಿವರಿಸಿದ್ದಾರೆ.

ನಿಪ್ಪಾಣಿಯಲ್ಲಿ ನ.6ರಂದು ನಡೆದ ಮಾನವ ಬಂಧುತ್ವ ವೇದಿಕೆಯ ಕಾರ್ಯಕ್ರಮದಲ್ಲಿ ಸತೀಶ ಜಾರಕಿಹೊಳಿ ಈ ವಿಷಯ ಪ್ರಸ್ತಾಪಿಸಿದ್ದರು. ‘ಹಿಂದೂ ಎಂಬ ಪದಕ್ಕೆ ಅಶ್ಲೀಲ ಅರ್ಥಗಳಿವೆ. ಈ ಬಗ್ಗೆ ಶಬ್ದಕೋಶ ಹಾಗೂ ವಿಕಿಪೀಡಿಯಾದಲ್ಲಿ ದಾಖಲೆಗಳಿವೆ. ನಾನು ಕ್ಷಮೆ ಕೇಳುವ ಪ್ರಮೇಯವೇ ಇಲ್ಲ. ನನ್ನದು ತಪ್ಪೆಂದು ಸಾಬೀತು ಮಾಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಮಂಗಳವಾರ ಸವಾಲು ಹಾಕಿದ್ದರು.

ಇದನ್ನು ಖಂಡಿಸಿ ಬುಧವಾರ ರಾಜ್ಯದ ಎಲ್ಲೆಡೆ ಬಿಜೆಪಿ ಹಾಗೂ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ವ್ಯಕ್ತವಾಯಿತು.

ಇವನ್ನೂ ಓದಿ..

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು