ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಸಿಂಧುತ್ವ: ‌ಹಕ್ಕು ಜಾರಿ ನಿರ್ದೇಶನಾಲಯ ವರದಿಬೇಕೆಂಬ ಆದೇಶ ಹಿಂಪಡೆಯಲು ಆಗ್ರಹ

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ
Last Updated 6 ಫೆಬ್ರುವರಿ 2021, 9:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡ ಜಾತಿ ಪಟ್ಟಿಯಲ್ಲಿರುವ ಕೆಲವು ನಿರ್ದಿಷ್ಟ ಜಾತಿಗಳಿಗೆ, ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷತೆಯ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ (ಜಾಗೃತ ಕೋಶ) ವರದಿ ಪಡೆಯಬೇಕೆಂದು ಜ. 16ರಂದು ಹೊರಡಿಸಿರುವ ಆದೇಶವನ್ನು ತಕ್ಷಣ ವಾಪಸು ಪಡೆಯಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ಪರಿಶಿಷ್ಟ ವರ್ಗದ ಜಾತಿಗಳಲ್ಲಿ 21 ಜಾತಿಗಳನ್ನು ಹಾಗೂ ಪರಿಶಿಷ್ಟ ಜಾತಿಯಲ್ಲಿ 8 ಜಾತಿಗಳನ್ನು ಗುರಿಯಾಗಿಸಿ ಈ ಆದೇಶ ಹೊರಡಿಸಲಾಗಿದೆ. ಈ ಆದೇಶ ಹೊರಡಿಸಲು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವನ್ನು ಉಲ್ಲೇಖಿಸಲಾಗಿದೆ. ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಈ 29 ಜಾತಿಗಳನ್ನು ಮಾತ್ರ ಗುರಿಯಾಗಿಸಿ ಜಾಗೃತ ಕೋಶದವರು ಪರಿಶೀಲನೆ ಮಾಡಬೇಕೆಂದು ಖಂಡಿತ ಹೇಳಿಲ್ಲ.ಸುಪ್ರೀಂ ಕೋರ್ಟ್‌ ಆದೇಶವನ್ನು ತಪ್ಪು ವ್ಯಾಖ್ಯಾನ ಮಾಡಿ ಕೆಲವೇ ಜಾತಿಗಳನ್ನು ಗುರಿಯಾಗಿಸಿ ಈ ಆದೇಶ ಹೊರಡಿಸಲಾಗಿದೆ. ಈ ಜಾತಿ, ವರ್ಗಗಳ ಹಿತಾಸಕ್ತಿ ಕಾಪಾಡಬೇಕಾದ ಸರ್ಕಾರ ಮತ್ತು ಸಚಿವರು ತಕ್ಷಣ ಕ್ರಮ ಕೈಗೊಂಡು ಅವೈಜ್ಞಾನಿಕ ಮತ್ತು ಅಮಾಯಕರಿಗೆ ಕಿರುಕುಳ ನೀಡುವ ಈ ಆದೇಶವನ್ನು ಹಿಂತೆಗೆದುಕೊಳ್ಳಬೇಕು’ ಎಂದೂ ಒತ್ತಾಯಿಸಿದ್ದಾರೆ.

‘ನಾಗರಿಕ ಹಕ್ಕು ಜಾತಿ ನಿರ್ದೇಶನಾಲಯದ (ಜಾಗೃತ ಕೋಶ) ಮುಂದೆ ಹಲವು ವರ್ಷಗಳಿಂದ ಅಸಂಖ್ಯಾತ ಪ್ರಕರಣಗಳು ತನಿಖೆಗಾಗಿ, ವಿಚಾರಣೆಗಾಗಿ ಬಾಕಿ ಇವೆ. ಅವುಗಳನ್ನು ಇತ್ಯರ್ಥಪಡಿಸದೆ, ಜನರನ್ನು ಅಯ್ಯೊ ಎನ್ನಿಸುತ್ತಾ ಅಲ್ಲಿನ ಅಧಿಕಾರಿಗಳು ಕೂತಿದ್ದಾರೆ. ಇಂಥ ಇಲಾಖೆಗೆ ಸರ್ಕಾರದ ನೌಕರಿಗೆ ಆಯ್ಕೆಯಾದ ಅಭ್ಯರ್ಥಿಗಳ ಜಾತಿ ಕುರಿತಾದ ವಿವರಗಳನ್ನು ನಿರ್ಧಿಷ್ಟ ಅವಧಿಯಲ್ಲಿ ತನಿಖೆ ಮಾಡಿ ಸಲ್ಲಿಸಲು ಸಾಧ್ಯವಿದೆಯೆ? ಮೇಲಿನ ಸಮುದಾಯಗಳ ಅಭ್ಯರ್ಥಿಗಳಿಗೆ ಕಿರುಕುಳ ನೀಡಲು, ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಲು ಮಾಡಿದ ಆದೇಶ ಇದಾಗಿದೆ’ ಎಂದೂ ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

‘ಪರಿಶಿಷ್ಟ ವರ್ಗಗಳ, ಜಾತಿಗಳ ಹಿತಾಸಕ್ತಿ ಕಾಪಾಡಬೇಕಾದ ಸಚಿವರು ಮೌನವಾಗಿರುವುದು ವಿಷಾದನೀಯ ಸಂಗತಿ. ಇದೇ ವರ್ಗವನ್ನು ಪ್ರತಿನಿಧಿಸುವ ಸಮಾಜ ಕಲ್ಯಾಣ ಸಚಿವರು, ಈ ಆದೇಶವನ್ನು ಹೊರಡಿಸಲು ಅನುಮೋದನೆ ನೀಡಿರುವುದನ್ನು ನೋಡಿದರೆ ಈ ವರ್ಗಗಳ ಕುರಿತಂತೆ ಅವರ ಕಾಳಜಿ ಎಂಥದ್ದು ಎಂದು ಅರ್ಥವಾಗುತ್ತದೆ’ ಎಂದೂ ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳ ಹಿತಾಸಕ್ತಿಯನ್ನು ರಕ್ಷಿಸುವವರು ಇಲ್ಲದಂತಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಆಳವಾಗಿ ಬೇರೂರುತ್ತಿದೆ. ಇದಕ್ಕೆಸಮಾಜ ಕಲ್ಯಾಣ ಇಲಾಖೆಯಿಂದ ಈ ಆದೇಶ ಹೊರಡಿಸಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) ನಿಯಮಗಳು 1992 ರ ಪ್ರಕಾರ ಸರ್ಕಾರದ ಇಲಾಖೆಗಳಿಗೆ ಅಥವಾ ಸಂಸ್ಥೆಗಳಿಗೆ ನೌಕರರಾಗಿ ಆಯ್ಕೆಯಾದ ಸಂದರ್ಭಗಳಲ್ಲಿ ಜಾತಿ ಸಿಂಧುತ್ವ ಪ್ರಮಾಣ ಪತ್ರವನ್ನು ನೀಡಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಅಧಿಕಾರ ನೀಡಲಾಗಿತ್ತು’ ಎಂದೂ ಅವರು ವಿವರಿಸಿದ್ದಾರೆ.

ಯಾವುದಕ್ಕೆಲ್ಲ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಿಂದ ವರದಿ ಪಡೆಯಬೇಕು: ಕರ್ನಾಟಕ ಪರಿಶಿಷ್ಟ ಪಂಗಡದಲ್ಲಿರುವ ಜಾತಿಗಳ ಕ್ರಮ ಸಂಖ್ಯೆ ಮತ್ತು ಜಾತಿ: 9– ಗೊಂಡ, ರಾಜಗೊಂಡ, ನಾಯಕ್‌ಪೋಡ್‌, 15– ಜೇನು ಕುರುಬ, 16, ಕಾಡು ಕುರುಬ, 17 ಕಮ್ಮಾರ ( ದಕ್ಷಿಣ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ) 18– ಕಣಿಯನ್‌, ಕಣ್ಯನ್‌ ( ಕೊಳ್ಳೇಗಾಲ), 21– ಕೊಂಕಣ, ಕೊಂಕಣಿ, ಕುಕನ, 22– ಕೋಲಿಧೋರ್, ಟೋಕ್ರೆ ಕೇಳಿ, ಕೊಲ್ಚ, ಕೊಲಘ, 28–ಕುರುಬ (ಕೊಡಗು ಜಿಲ್ಲೆ), 34– ಮಾಲೇರು, 35– ಮರಾಠ (ಕೊಡಗು ಜಿಲ್ಲೆ), 36– ಮರಾಠಿ (ದಕ್ಷಿಣ ಕನ್ನಡ ಜಿಲ್ಲೆ), 37– ಪರಿವಾರ, ತಳವಾರ.

ಕರ್ನಾಟಕ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಜಾತಿಗಳ ಕ್ರಮ ಸಂಖ್ಯೆ ಮತ್ತು ಜಾತಿ: 19– ಬೇಡ ಜಂಗಮ, ಬುಡ್ಗ ಜಂಗಮ, 20– ಬೋವಿ, 21– ಚನ್ನ ದಾಸರ್, 41– ಹಂದಿ ಜೋಗಿ, 55– ಕೋಟೆಗಾರ್, ಮೇತ್ರಿ, 78– ಮೊಗೇರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT