ಶನಿವಾರ, ಜನವರಿ 16, 2021
24 °C
ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿ

ಶಾಲೆ ದತ್ತು ವಿಶಿಷ್ಟ ಪರಿಕಲ್ಪನೆ: ಬಿಎಸ್ ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಶಾಸಕರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಜೊತೆ 3–4 ತಿಂಗಳಿಗೆ ಒಮ್ಮೆಯಾದರೂ ಆ ಶಾಲೆಗಳಿಗೆ ಭೇಟಿ ನೀಡಿ ಶಿಕ್ಷಕರು, ಮಕ್ಕಳ ಜೊತೆ ಅಲ್ಲಿನ ಸ್ಥಿತಿಗತಿ, ಸುಧಾರಣೆ ಬಗ್ಗೆ ಚರ್ಚೆ ಮಾಡಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಆಶ್ರಯದಲ್ಲಿ ನಡೆದ ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಸಮಾರಂಭದಲ್ಲಿ, ದತ್ತುಸ್ವೀಕರಿಸಿದ ಸಂಸ್ಥೆಗಳಿಗೆ ಶಾಲಾ ದತ್ತು ಪತ್ರಗಳನ್ನು ವಿತರಿಸಿ ಮಾತನಾಡಿದರು.

‘2020-21ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದಂತೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನ ಸದಸ್ಯರು ಕನಿಷ್ಠ ಮೂರು ಶಾಲೆಗಳನ್ನು ದತ್ತು ಪಡೆದು ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಮೂಲಕ ಅಭಿವೃದ್ಧಿಪಡಿಸುವುದು ಸೇರಿದಂತೆ ರಾಜ್ಯದ 34ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾನಿಲಯಗಳು, ಶಿಕ್ಷಣ ಸಂಸ್ಥೆಗಳು, ಮಾಧ್ಯಮ ಸಂಸ್ಥೆಗಳು ದತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಶ್ಲಾಘನೀಯ’ ಎಂದರು.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ‘ಇಡೀ ಸಮುದಾಯ ಮತ್ತು ಜನಪ್ರತಿನಿಧಿಗಳು ತಮ್ಮ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ಪರಿಕಲ್ಪನೆ ವಿಶಿಷ್ಟವಾಗಿದೆ. ಹೆಚ್ಚಿನ ಸಂಖ್ಯೆಯ ಸಂಸ್ಥೆಗಳು ಇದರಲ್ಲಿ ಭಾಗಿಯಾಗುವಂತಾಗಲಿ’ ಎಂದು ಆಶಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ‘ರಾಜ್ಯದಲ್ಲಿ 53 ಸಾವಿರ ಸರ್ಕಾರಿ ಶಾಲೆಗಳಿದ್ದು, ಶೇ 85ಕ್ಕಿಂತ ಹೆಚ್ಚಿನ ಮಕ್ಕಳು ಸರ್ಕಾರಿ ಶಾಲೆಗಳನ್ನು ಅವಲಂಬಿಸಿರುವುದರಿಂದ ಅವುಗಳ ಅಭಿವೃದ್ಧಿಗೆ ಸಮಾಜದ ಸಕ್ರಿಯ ಭಾಗಿಯಾಗುವಿಕೆಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರದ ಶೈಕ್ಷಣಿಕ ಸಲಹೆಗಾರ ಪ್ರೊ. ಎಂ.ಆರ್. ದೊರೆಸ್ವಾಮಿಯವರ ಚಿಂತನೆ ಅಮೂಲ್ಯವಾಗಿದೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ.ಎಂ.ಆರ್. ದೊರೆಸ್ವಾಮಿ, ‘ಜನಪ್ರತಿನಿಧಿಗಳಲ್ಲದೇ ಸಮುದಾಯವೂ ಪೂರ್ಣಪ್ರಮಾಣದಲ್ಲಿ ಭಾಗಿಯಾಗುವುದರಿಂದ ನಮ್ಮ ಶಾಲೆಗಳು ಸಂಪೂರ್ಣವಾಗಿ ಅಭಿವೃದ್ಧಿಯಾಗಲಿವೆ’ ಎಂದರು.

ಶಿಕ್ಷಣ ಸುಧಾರಣಾ ಶಿಫಾರಸುಗಳ ಪುಸ್ತಿಕೆಯನ್ನು ಮುಖ್ಯಮಂತ್ರಿ ಬಿಡುಗಡೆ ಮಾಡಿದರು. ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು.

ಈವರೆಗೆ ದತ್ತು ಪಡೆದ ಶಾಲೆಗಳು
224 ಶಾಸಕರು (ತಲಾ 3);
672
75 ಪರಿಷತ್‌ ಸದಸ್ಯರು (ತಲಾ 3); 225
40 ಲೋಕಸಭೆ/ರಾಜ್ಯಸಭೆ ಸದಸ್ಯರು (ತಲಾ5); 200
ಸರ್ಕಾರಿ, ಖಾಸಗಿ ವಿ.ವಿಗಳು (24 ವಿವಿಗಳು) ಮತ್ತು ಇತರ 6 ಶಿಕ್ಷಣ ಸಂಸ್ಥೆಗಳು; 306
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಿಂದ ಹೆಚ್ಚುವರಿ ದತ್ತು; 16
ಒಟ್ಟು; 1,419

ಮುಂದಿನ ದಿನಗಳಲ್ಲಿ ಶಾಲೆಗಳ ದತ್ತು ನಿರೀಕ್ಷೆ
200 ಐಟಿ ಕಂಪನಿಗಳು (ತಲಾ 100);
20,000
ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ, ನರ್ಸಿಂಗ್ ಕಾಲೇಜುಗಳು; 1,000
ಎಂಜಿನಿಯರಿಂಗ್‌ ಕಾಲೇಜುಗಳು; 1,000
ಸರ್ಕಾರಿ, ಖಾಸಗಿ ಇತರ ಕಾಲೇಜುಗಳು; 9000
ಇತರ ದಾನಿಗಳು; 4,000
ಒಟ್ಟು 35,000

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು