ಭಾನುವಾರ, ಜೂನ್ 26, 2022
26 °C
4 ವರ್ಷವಾದರೂ ಮುಗಿಯದ ಕೆಎಸ್ಆರ್‌ಟಿಸಿ ತಾಂತ್ರಿಕ ಸಹಾಯಕ, ಭದ್ರತಾ ರಕ್ಷಕ ಹುದ್ದೆ ನೇಮಕಾತಿ

ನೇಮಕಾತಿಗೆ ಗ್ರಹಣ, ಅಭ್ಯರ್ಥಿಗಳು ಹೈರಾಣ

ಇಮಾಮ್‌ಹುಸೇನ್ ಗೂಡುನವರ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ನೇಮಕ ಪ್ರಕ್ರಿಯೆ ಆರಂಭಗೊಂಡು ನಾಲ್ಕು ವರ್ಷ ಕಳೆದರೂ ಮುಗಿಯುವ ಸೂಚನೆಗಳಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ನಿಖರವಾಗಿ ಮಾಹಿತಿಯನ್ನೂ ನೀಡುತ್ತಿಲ್ಲ. ದಿಕ್ಕೇ ತೋಚದಂತಾಗಿದೆ...’

–ಇದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ದಲ್ಲಿ (ಕೆಎಸ್‌ಆರ್‌ಟಿಸಿ) ಖಾಲಿ ಇರುವ ತಾಂತ್ರಿಕ ಸಹಾಯಕರು ಹಾಗೂ ಭದ್ರತಾ ರಕ್ಷಕ ಹುದ್ದೆಗಳಿಗೆ ಪರೀಕ್ಷೆ ಬರೆದಿರುವ ಉದ್ಯೋಗ ಆಕಾಂಕ್ಷಿಗಳ ಅಳಲು.

ಕೋವಿಡ್‌–19 ಸಂಕಷ್ಟದಿಂದಾಗಿ ಉಂಟಾಗಿರುವ ಆರ್ಥಿಕ ಸಮಸ್ಯೆಯ ಹಿನ್ನೆಲೆಯಲ್ಲಿ ಈ ನೇಮಕಾತಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇದರಿಂದಾಗಿ, ರಾಜ್ಯದಾದ್ಯಂತ ಸಾವಿರಾರು ಅಭ್ಯರ್ಥಿಗಳು ಅತಂತ್ರರಾಗಿದ್ದಾರೆ.

‘ಕೋವಿಡ್‌ ನಂತರದ ಆರ್ಥಿಕ ಸಂಕಷ್ಟದ ಕಾರಣಕ್ಕೆ ನೇಮಕಾತಿ ತಡೆಹಿಡಿಯಲಾಗಿದೆ ಎಂದು ಕೆಎಸ್‌ ಆರ್‌ಟಿಸಿ ಹೇಳುತ್ತಿದೆ. ಆದರೆ, ಈಗ ಕೋವಿಡ್‌ ಪರಿಣಾಮ ತಗ್ಗಿದೆ. ನಿಗಮಕ್ಕೆ ಆದಾಯ ಬರುತ್ತಿದೆ. ಹಾಗಾಗಿ ನೇಮಕ ಪ್ರಕ್ರಿಯೆ ಮರು ಆರಂಭಿಸಬೇಕು’ ಎಂಬುದು ಅವರ ಒತ್ತಾಯ.

2018ರಲ್ಲೇ ಅರ್ಜಿ ಆಹ್ವಾನಿಸಿತ್ತು: 2018ರ ಮಾರ್ಚ್‌–ಏ‍ಪ್ರಿಲ್‌ನಲ್ಲಿ 726 ತಾಂತ್ರಿಕ ಸಹಾಯಕ ಹಾಗೂ 200 ಭದ್ರತಾ ರಕ್ಷಕ ಹುದ್ದೆಗಳ ನೇಮಕಾತಿಗೆ ಕೆಎಸ್‌ಆರ್‌ಟಿಸಿ ಅರ್ಜಿ ಆಹ್ವಾನಿಸಿತ್ತು. ರಾಜ್ಯದಾದ್ಯಂತ ಸುಮಾರು 50 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. 2020ರ ಫೆಬ್ರುವರಿಯಲ್ಲಿ ಪರೀಕ್ಷೆ ನಡೆದಿತ್ತು. ಅಂದುಕೊಂಡಂತೆ ಆಗಿದ್ದರೆ, ಈ ವೇಳೆಗೆ ನೇಮಕ ಪ್ರಕ್ರಿಯೆ ಪೂರ್ಣವಾಗಿ ಆಯ್ಕೆಯಾದವರು ನೌಕರಿ ಆರಂಭಿಸಬೇಕಿತ್ತು. ಆದರೆ, ಈವರೆಗೆ ಪ್ರಕ್ರಿಯೆ ಮುಗಿಯದಿರುವುದು ಅಭ್ಯರ್ಥಿಗಳ ಗೊಂದಲಕ್ಕೆ ಕಾರಣ ವಾಗಿದೆ.

ತ್ವರಿತವಾಗಿ ಮುಗಿದಿದ್ದರೆ ಅನುಕೂಲ: ‘ನಾಲ್ಕು ವರ್ಷಗಳಿಂದ ಚಾತಕಪಕ್ಷಿ ಯಂತೆ ಕಾಯುತ್ತಿದ್ದೇವೆ. ಸಾರಿಗೆ ನಿಗಮ ದಲ್ಲೂ ಸಿಬ್ಬಂದಿ ಕೊರತೆ ಹೆಚ್ಚಿದೆ. ತ್ವರಿತ ವಾಗಿ ನೇಮಕಾತಿ ಪೂರ್ಣಗೊಳಿಸಿ ಆಯ್ಕೆಯಾದವರಿಗೆ ಆದೇಶ ನೀಡು ವಂತೆ ಸಾರಿಗೆ ಸಚಿವರು ಹಾಗೂ ನಿಗಮದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ, ಸ್ಪಂದನೆ ಸಿಕ್ಕಿಲ್ಲ’ ಎಂದು ಬೆಳಗಾವಿ ಜಿಲ್ಲೆಯ ಆಕಾಂಕ್ಷಿಗಳು ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.

ಅನುಮತಿ ಸಿಕ್ಕ ಕೂಡಲೇ ಆರಂಭ
‘ಕೊರೊನಾ ಹಿನ್ನೆಲೆಯಲ್ಲಿ ನೇಮಕ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೆವು. ಅದನ್ನು ಮರುಆರಂಭಿಸಲು ಸರ್ಕಾರದ ಅನುಮತಿ ಕೇಳಿದ್ದೇವೆ. ಅನುಮತಿ ದೊರೆತ ತಕ್ಷಣವೇ ಪ್ರಕ್ರಿಯೆ ಆರಂಭಿಸಿ, ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು’ ಎಂದು ನಿಗಮದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು