ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಶರಣ ಸೇನೆಗೆ ಬಿ.ವೈ.ವಿಜಯೇಂದ್ರರಿಂದ ಚಾಲನೆ

Last Updated 14 ಮಾರ್ಚ್ 2021, 12:16 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ನೇತೃತ್ವದಲ್ಲಿ ರಚನೆಯಾಗಿರುವ ‘ಶರಣ ಸೇನೆ’ಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾನುವಾರ ಚಾಲನೆ ನೀಡಿದರು. ಜಾತ್ಯತೀತ ನಿಲುವಿನೊಂದಿಗೆ ಆರಂಭವಾದ ಸೇನೆ, ಯುವ ಸಮೂಹ ಸಂಘಟಿಸುವ ವಾಗ್ದಾನ ಮಾಡಿತು.

‘ಸಾಮಾಜಿಕ ಅವಮಾನ ಉಂಟು ಮಾಡುವ ದುಷ್ಟ ಶಕ್ತಿಗಳ ವಿರುದ್ಧ ಹೋರಾಡುತ್ತೇವೆ. ಶಿವಮೂರ್ತಿ ಮುರುಘಾ ಶರಣರ ತತ್ವಾದರ್ಶಗಳನ್ನು ಬೆಂಬಲಿಸುತ್ತೇವೆ. ಸಮೃದ್ಧ ಸಮಾಜ ರಚನೆಗೆ ಸಹಕರಿಸುತ್ತೇವೆ’ ಎಂದು ಶರಣ ಸೇನೆಯ ಪದಾಧಿಕಾರಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಬಿ.ವೈ.ವಿಜಯೇಂದ್ರ ಮಾತನಾಡಿ, ‘ಎಲ್ಲ ಸಮುದಾಯದ ಯುವಕರನ್ನು ಸೇರಿಸಿ ರಚಿಸಿದ ಜಾತ್ಯತೀತ ಸಂಘಟನೆ ಶರಣ ಸೇನೆ. ರಾಜ್ಯದ ಸವಾಲುಗಳನ್ನು ಎದುರಿಸಲು ಇದರ ಅಗತ್ಯವಿದೆ. ಇದು ಚಿತ್ರದುರ್ಗಕ್ಕೆ ಮಾತ್ರ ಸೀಮಿತವಾಗದೇ ರಾಜ್ಯದ ಎಲ್ಲ ಜಿಲ್ಲೆಗೂ ವಿಸ್ತರಿಸಬೇಕು’ ಎಂದು ಹೇಳಿದರು.

ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ‘ಶರಣ ಎಂಬ ಪದಕ್ಕೆ ಜಾತಿಯ ಹಂಗಿಲ್ಲ. ಧಾರ್ಮಿಕ ತಳಹದಿಯ ಮೇಲೆ ಸೇನೆ ರಚನೆಗೊಂಡಿದ್ದು, ಮೌಲ್ಯ ಹಾಗೂ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲಿದೆ. ಇದು ದುಶ್ಚಟಗಳ ವಿರುದ್ಧ ಕೆಲಸ ಮಾಡುತ್ತದೆಯೇ ಹೊರತು ವ್ಯಕ್ತಿ ವಿರುದ್ಧವಲ್ಲ’ ಎಂದರು.

‘ಗೂಂಡಾ ವರ್ತನೆಗೆ ಸಹಿಸಲ್ಲ’

ಭದ್ರಾವತಿ ಕ್ಷೇತ್ರದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತುಘಲಕ್‌ ದರ್ಬಾರ್‌ ನಡೆಸುತ್ತಿದ್ದಾರೆ. ಇದನ್ನು ಬೆಂಬಲಿಸುವ ಮೂಲಕ ಕಾಂಗ್ರೆಸ್‌ ಪಕ್ಷ ಅಸ್ತಿತ್ವದ ಹುಡುಕಾಟಕ್ಕೆ ಮುಂದಾಗಿದೆ. ಗೂಂಡಾ ವರ್ತನೆಗೆ ಅವಕಾಶ ನೀಡುವುದಿಲ್ಲ’ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಾಂಗ್ರೆಸ್‌ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಜೈ ಶ್ರೀರಾಮ್‌ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ’ ಎಂದರು.

‘ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಪ್ರಕರಣದ ವಿಚಾರಣೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಆರಂಭಿಸಿದೆ. ಸತ್ಯ ಏನು ಎಂಬುದು ರಾಜ್ಯದ ಜನರಿಗೆ ಗೊತ್ತಾಗಲಿದೆ. ಯಾವುದನ್ನೂ ಮುಚ್ಚಿಡುವುದಿಲ್ಲ’ ಎಂದರು.

***

ಮಠದಲ್ಲಿದ್ದು ಅನ್ನ, ಜ್ಞಾನ ದಾಸೋಹ ಮಾಡಬೇಕಾದ ಮಠಾಧೀಶರು ಬೀದಿಗೆ ಇಳಿದಿದ್ದಾರೆ. ಎಲ್ಲರೂ ಮೀಸಲಾತಿ ಕೇಳುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಯಾರಿಗೆ ಮೀಸಲಾತಿ ಕೊಡಲು ಸಾಧ್ಯ?

–ಶಿವಮೂರ್ತಿ ಮುರುಘಾ ಶರಣರು, ಮುರುಘಾ ಮಠ, ಚಿತ್ರದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT