ಬುಧವಾರ, ಏಪ್ರಿಲ್ 21, 2021
30 °C

114ನೇ ಜಯಂತ್ಯುತ್ಸವ ಆಚರಣೆ: ಶಿವಕುಮಾರ ಸ್ವಾಮೀಜಿಗೆ ಭಕ್ತಿ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಸಿದ್ಧಗಂಗಾ ಮಠದಲ್ಲಿ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ 114ನೇ ವರ್ಷದ ಜಯಂತಿಯನ್ನು ಸರಳವಾಗಿ ಗುರುವಾರ ಆಚರಿಸಲಾಯಿತು.

ಮಠಾಧೀಶರಾದ ಸಿದ್ಧಲಿಂಗ ಸ್ವಾಮೀಜಿ ಬೆಳಗಿನ ಜಾವವೇ ಶಿವಪೂಜೆ ನೆರವೇರಿಸಿ, ನಂತರ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿದರು. ತಮ್ಮ ಗುರುವನ್ನು ನೆನೆದು ಕಣ್ಣೀರಾದರು. ಕೆಲ ಸಮಯ ಧ್ಯಾನಸ್ಥ ಸ್ಥಿತಿಯಲ್ಲಿ ನಮಿಸಿದರು. ಸ್ವಾಮೀಜಿ ಪೂಜೆ ಪೂರ್ಣಗೊಳಿಸಿದ ನಂತರ ಇತರ ಸ್ವಾಮೀಜಿಗಳು, ಭಕ್ತರು ಪೂಜೆ ಮುಂದುವರಿಸಿದರು. ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು.

ಗದ್ದುಗೆ ಪೂಜೆ ನಂತರ ರುದ್ರಾಕ್ಷಿ ಮಂಟಪದಲ್ಲಿ ಶಿವಕುಮಾರ ಸ್ವಾಮೀಜಿ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಿ, ಮಠದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ಮಠದ ವಿದ್ಯಾರ್ಥಿಗಳು, ವಿವಿಧ ಮಠಗಳ ಸ್ವಾಮೀಜಿಗಳು, ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು. ಕಲಾ ತಂಡಗಳು ಮೆರುಗು ತಂದವು.

ಬೆಳಿಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡುಬರಲಿಲ್ಲ. ಮಧ್ಯಾಹ್ನದ ವೇಳೆಗೆ ಭಕ್ತರ ಸಂಖ್ಯೆ ಸ್ವಲ್ಪ ಮಟ್ಟಿಗೆ ಹೆಚ್ಚಾಗತೊಡಗಿತು. ಸಂಜೆ ವೇಳೆಗೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಯಿತು. ಭಕ್ತರು, ಅತಿಥಿಗಳಿಗಾಗಿ ಮಠದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ನಗರದ ವಿವಿಧೆಡೆ, ಪ್ರಮುಖ ವೃತ್ತಗಳು ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ಸ್ವಾಮೀಜಿ ಭಾವಚಿತ್ರವಿಟ್ಟು ಪೂಜಿಸಿದರು. ಕಾರ್ಯಕ್ರಮಗಳು ನಡೆದ ಸ್ಥಳಗಳಲ್ಲಿ ಪ್ರಸಾದ ವಿತರಣೆ ಮಾಡಲಾಯಿತು. ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವ ಸಮಿತಿ ವತಿಯಿಂದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿಗೆ ನುಡಿ ನಮನ ಸಲ್ಲಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು