ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಮಾನವ ಹಸ್ತಕ್ಷೇಪದ ಭೂ ಕಂಪನ

Last Updated 22 ಜನವರಿ 2021, 19:38 IST
ಅಕ್ಷರ ಗಾತ್ರ

ಶಿವಮೊಗ್ಗ: ಹುಣಸೋಡು ಸ್ಫೋಟ ಮತ್ತು ಅದೇ ವೇಳೆ ನಾಲ್ಕು ಜಿಲ್ಲೆಗಳಲ್ಲಿ ನಡೆದ ಭೂಕಂಪನ ಪ್ರಕರಣವನ್ನು ಸ್ಯಾಟಲೈಟ್‌ ರೆಡಾರ್ ಮೂಲಕ ಅಧ್ಯಯನ ನಡೆಸಿರುವ ಭಾರತೀಯ ಭೂ ಕಂಪನ ವಿಜ್ಞಾನ ಕೇಂದ್ರ ಇದು ಮಾನವ ನಿರ್ಮಿತ ಭೂಕಂಪ ಎಂದು ಸ್ಪಷ್ಟಪಡಿಸಿದೆ.

ಸ್ಫೋಟದ ತೀವ್ರತೆ ಹೆಚ್ಚು ಕಡಿಮೆ 100 ಕಿ.ಮೀ ನಷ್ಟು ವ್ಯಾಪಿಸಿದೆ. ಮಷ್ರುಮ್ ಮಾದರಿ ಸ್ಫೋಟದಂತೆ ಪ್ರತಿ ಮನೆಯ ಬಾಗಿಲು ತಟ್ಟಿದೆ. ಅಸಾಮಾನ್ಯ ತೀವ್ರತೆ ಎಂಬ ಮಾಹಿತಿ ರೆಡಾರ್‌ನಿಂದ ಗೊತ್ತಾಗಿದೆ.

‘ನೆರೆಯ ಉಡುಪಿ, ಮಂಗಳೂರಿನ ರಿಯಾಕ್ಟರ್ ಮಾಪನದಲ್ಲಿ ಭೂ ಕಂಪದ ತೀವ್ರತೆ ದಾಖಲಾಗಿಲ್ಲ. ಹಾಗಾಗಿ, ಇದು ಪ್ರಕೃತಿ ಸಹಜ ಕಂಪನವಲ್ಲ. ಒಮ್ಮೆಗೆ ಭಾರಿ ಸ್ಫೋಟಕ ಸಿಡಿದ ಪರಿಣಾಮವೇ ಭೂಮಿ ನಡುಗಿದೆ’ ಎಂದು ವಿಪತ್ತು ನಿರ್ವಹಣಾ ಕೇಂದ್ರದ ವಿಜ್ಞಾನಿ ಡಾ.ಶ್ರೀನಿವಾಸ ರೆಡ್ಡಿ ತಿಳಿಸಿದರು.

ಬಗೆಹರಿಯದ ಅನುಮಾನಗಳು: ಸ್ಫೋಟದಲ್ಲಿ ಅಕ್ಕಪಕ್ಕದ ಕೆಲವು ಮನೆಗಳು ಬಿರುಕು ಬಿಟ್ಟಿದ್ದರೂ ದೊಡ್ಡ ಪ್ರಮಾಣದ ಅನಾಹುತ ನಡೆದಿಲ್ಲ. ಸ್ಫೋಟದ ಮಗ್ಗುಲಲ್ಲೇ ಇರುವ ಮನೆಯ ಹೆಂಚುಗಳು ಕೆಳಗೆ ಬಿದ್ದಿಲ್ಲ. ಕಂದಕವೂ ನಿರ್ಮಾಣವಾಗಿಲ್ಲ.

ಸ್ಥಳೀಯರ ಮಾಹಿತಿ ಪ್ರಕಾರ ಸ್ಫೋಟವಾದಾಗ ಲಾರಿ ಮೇಲಕ್ಕೆ ಚಿಮ್ಮಿ ಕೆಳಗೆ ಬಿದ್ದಿದೆ. ಭಾರಿ ಶಬ್ದ, ಬೆಳಕು, ದೂಳು ಆವರಿಸಿದೆ. ಯಾವ ಮನೆಗಳಿಗೂ ದೊಡ್ಡ ಮಟ್ಟದ ಹಾನಿಯಾಗಿಲ್ಲ. ಇಲ್ಲಿನ ವಿದ್ಯುತ್ ಕಂಬಗಳು ಧರೆಗೆ ಉರುಳಿಲ್ಲ. ಸ್ಫೋಟದ ಅಕ್ಕಪಕ್ಕದಲ್ಲಿದ್ದ ವಾಹನಗಳು, ಕ್ರಷರ್ ಯಂತ್ರಗಳು, ಅವುಗಳಿಗೆ ಹಾಕಿರುವ ತಡೆಗೋಡೆಗಳೂ ಸುರಕ್ಷಿತವಾಗಿವೆ. ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿರುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ ಅಲ್ಲಿನ ನಿವಾಸಿ ಸೋಮ್ಲಾನಾಯ್ಕ.

‘ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಆಗಿರುವ ಶಬ್ದ, ನೂರಾರು ಮನೆಗಳ ಕಿಟಕಿ ಗಾಜು, ಗೋಡೆಗಳು, ಆರ್‌ಸಿಸಿ ಕಳಚಿರುವುದು ಸ್ಫೋಟದಿಂದ ಆಗಿರಲು ಸಾಧ್ಯವಿಲ್ಲ. ತಜ್ಞರು ವರದಿ ನೀಡಿದ ಬಳಿಕ ವಾಸ್ತವಾಂಶ ತಿಳಿಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

‘ರಾಜಕಾರಣಿಗಳೇ ಹೊಣೆ’

ಹುಣಸೋಡು ಬಳಿ ನಡೆದ ಸ್ಫೋಟದ ಸ್ಥಳಕ್ಕೆ ಭೇಟಿ ನೀಡಿದ್ದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ರಾಜಕಾರಣಿಗಳು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧ ಹರಿಹಾಯ್ದರು.

‘ನಾಲ್ಕು ತಿಂಗಳ ಹಿಂದೆ ಶಿವಮೊಗ್ಗ ಸಮೀಪದ ಊರುಗಡೂರು ಬಳಿ ಭಾರಿ ಪ್ರಮಾಣದ ಜಿಲೆಟಿನ್‌ ಕಡ್ಡಿಗಳು ಪತ್ತೆಯಾಗಿದ್ದವು. ಅವುಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು ಪ್ರಕರಣ ದಾಖಲಿಸದೇ ಆರೋಪಿಗಳನ್ನು ಬಿಟ್ಟಿದ್ದರು. ಇದರ ಹಿಂದೆ ನಮ್ಮಂಥ ರಾಜಕಾರಣಿಗಳ ಕೈವಾಡವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಾಕಷ್ಟು ಲಂಚ ಸಿಗುವ ಕಾರಣಕ್ಕೆ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಿಲ್ಲ. ಇಂತಹ ಅಕ್ರಮದ ಹಿಂದೆ ಹಲವು ರಾಜಕಾರಣಿಗಳು ಶಾಮೀಲಾಗಿದ್ದಾರೆ. ಹಲವು ಜನಪ್ರತಿನಿಧಿಗಳು ಹಾಗೂ ಅವರ ಕುಟುಂಬದ ಒಡೆತನದಲ್ಲೇ ಕಲ್ಲು ಗಣಿಗಾರಿಕೆ ನಡೆಯುತ್ತಿದೆ’ ಎಂದು ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌. ಸುಂದರೇಶ್ ಆರೋಪಿಸಿದರು.

ತನಿಖೆಗೆ ರಾಹುಲ್ ಒತ್ತಾಯ

ನವದೆಹಲಿ (ಪಿಟಿಐ): ಶಿವಮೊಗ್ಗದ ಕಲ್ಲು ಗಣಿಕಾರಿಕೆ ಕ್ವಾರಿಯಲ್ಲಿ ಸಂಭವಿಸಿರುವ ಸ್ಫೋಟ ಬಹುದೊಡ್ಡ ದುರಂತವಾಗಿದ್ದು, ಈ ಪ್ರಕರಣವನ್ನು ಆಳವಾದ ತನಿಖೆಗೆ ಒಳಪಡಿಸಬೇಕು. ಈ ಮೂಲಕ ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಪುನರಾವರ್ತನೆಯಾಗುವುದನ್ನು ತಪ್ಪಿಸಬೇಕು ಎಂದು ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಒತ್ತಾಯಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಾಹುಲ್‌ ಗಾಂಧಿ, ಘಟನೆಯಲ್ಲಿ ಮೃತಪಟ್ಟವರಿಗೆ ಕಂಬನಿ ಮಿಡಿದಿದ್ದಾರೆ.

ತನಿಖೆಗೆ ಉನ್ನತ ಮಟ್ಟದ ಸಮಿತಿ: ನಿರಾಣಿ

ಮುಖ್ಯಮಂತ್ರಿ ಜತೆ ಚರ್ಚಿಸಿದ ಬಳಿಕ ಜಿಲ್ಲೆಯ ಹುಣಸೋಡು ಸ್ಫೋಟ ಪ್ರಕರಣದ ತನಿಖೆಗೆ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದರು.

ಘಟನಾ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಗಣಿಗಾರಿಕೆ ಅಧಿಕೃತವೇ? ಅನಧಿಕೃತವೇ? ಭಾರಿ ಪ್ರಮಾಣದ ಸ್ಫೋಟಕ ಹೇಗೆ ತಂದರು? ಸಾಗಣೆ ವೇಳೆ ನಿಯಮ ಉಲ್ಲಂಘಿಸಲಾಗಿದೆಯೇ? ಇದರ ಹಿಂದೆ ಯಾರು ಇದ್ದಾರೆ ಎಂಬ ಕುರಿತು ಸಮಗ್ರ ತನಿಖೆ ನಡೆಸಲಾಗುವುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಇಂತಹ ದುರ್ಘಟನೆಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದ ಅಭಿವೃದ್ಧಿಗೆ ಜಲ್ಲಿ ಕಲ್ಲುಗಳ ಪೂರೈಕೆ ಅನಿವಾರ್ಯ. ಆದರೆ, ಪರವಾನಗಿ ಇಲ್ಲದೆ ಗಣಿ
ಗಾರಿಕೆ ನಡೆಸಲು ಅವಕಾಶ ನೀಡುವುದಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಅನಧಿಕೃತ ಗಣಿಗಾರಿಕೆ ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.

ಲೋಕಾಯುಕ್ತದಲ್ಲಿ ಹುಣಸೋಡು ಪ್ರಕರಣ

ಹುಣಸೋಡು, ಕಲ್ಲುಗಂಗೂರು ಅಕ್ರಮ ಗಣಿಗಾರಿಕೆ ಸಂಬಂಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು, ಇದೇ ಜನವರಿ 29ರಂದು ಅಂತಿಮ ವಿಚಾರಣೆ ಇದೆ. ‘ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸರಿಗೆ ದೂರು ನೀಡಿದ್ದರೂ ಸ್ಪಂದಿಸಿಲ್ಲ’ ಎಂದು ಆರೋಪಿಸಿ‌ ಕೆಲವು ವರ್ಷಗಳ ಹಿಂದೆ ಸ್ಥಳೀಯರಾದ ಸಂದೀಪ್‌ ಲೋಕಾಯುಕ್ತಕ್ಕೆ ದೂರು ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT