ಬೆಂಗಳೂರು: ‘ಸಣ್ಣಪುಟ್ಟದ್ದಕ್ಕೆಲ್ಲಾ ಈ ರೀತಿ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ ಅನ್ವಯ ಮಾಡುತ್ತಾ ಹೋದರೆ ರಾಜ್ಯದಲ್ಲಿ ಧಾರ್ಮಿಕ ಸಂಸ್ಥೆಗಳು ಮುಚ್ಚಿಕೊಂಡು ಹೋಗುತ್ತವೆ’ ಎಂದು ಹಿರಿಯ ವಕೀಲ ಸಿ.ವಿ.ನಾಗೇಶ್ ಹೈಕೋರ್ಟ್‌ನಲ್ಲಿ ಕಳವಳ ವ್ಯಕ್ತಪಡಿಸಿದರು.
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೊಕ್ಸೊ), ಅತ್ಯಾಚಾರ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಶರಣರ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿರುವ; ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿದ ರಿಟ್ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ಮುಂದುವರಿಸಿತು.
ವಿಚಾರಣೆ ವೇಳೆ ಶರಣರ ಪರ ವಾದ ಮುಂದುವರಿಸಿದ ಸಿ.ವಿ.ನಾಗೇಶ್, ‘ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ–1988ರ ಕಲಂ 8 (2)ರ ಅಡಿಯಲ್ಲಿ ಸೆಷನ್ಸ್ ನ್ಯಾಯಾಧೀಶರು ವಿಚಾರಣೆ ಆರಂಭಕ್ಕೂ ಮೊದಲೇ ಮಾಡಿರುವ ಈ ನಿರ್ಬಂಧದ ಆದೇಶ ಸಿಂಧು ಎನಿಸಿಕೊಳ್ಳುವುದಿಲ್ಲ. ಯಾಕೆಂದರೆ, ವಿಚಾರಣೆಯನ್ನು ಬಾಕಿ ಇರಿಸಿ ಎಂದು ಹೇಳುವ ಶಬ್ದವು ದೋಷಾರೋಪ ಹೊರಿಸಿದ ನಂತರ ಆರಂಭವಾಗುವ ವಿಚಾರಣೆ ಎಂದೇ ಅರ್ಥೈಸಬೇಕಾಗುತ್ತದೆ’ ಎಂದು ವಿವರಿಸಿದರು.
‘ಯಾವುಗಲೋ ಒಂದು ಬಾರಿ ಮಾಡಿದ ಅಪರಾಧಕ್ಕೆ ನಿರಂತರ ಅಪರಾಧಗಳ ಸರಮಾಲೆ ಎಂದು ವ್ಯಾಖ್ಯಾನಿಸಲು ಆಗುವುದಿಲ್ಲ. ಅಂತೆಯೇ, ಈ ಕಾಯ್ದೆಯ ಕಲಂ 3 ಎಫ್ ಮತ್ತು ಕಾಯ್ದೆಯ ಪೀಠಿಕೆಯ ಹಿನ್ನೆಲೆಯಲ್ಲಿ ಈ ಆದೇಶವನ್ನು ಅರ್ಥೈಸುವುದಾದರೆ ಶರಣರ ವಿರುದ್ಧ ಮಾಡಲಾದ ಆರೋಪವು ಈ ಕಾನೂನಿನ ವ್ಯಾಪ್ತಿಗೆ ಒಳಪಡುವುದಿಲ್ಲ’ ಎಂದು ವಿವರಿಸಿದರು.
‘ನಾಗೇಶ್ ಅವರ ವಾದಕ್ಕೆ ಪ್ರತ್ಯುತ್ತರವಾಗಿ ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ವಾದ ಮಂಡಿಸಲಿದ್ದಾರೆ. ಅದಕ್ಕಾಗಿ ಕಾಲಾವಕಾಶ ನೀಡಬೇಕು’ ಎಂದು ಸರ್ಕಾರಿ ವಕೀಲ ಆರ್.ಶ್ರೀನಿವಾಸ ಗೌಡ ಮನವಿ ಮಾಡಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್ 2ಕ್ಕೆ ಮುಂದೂಡಿದೆ.
ಇದೇ ವೇಳೆ ಮಠಕ್ಕೆ ಸರ್ಕಾರ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ ಅವರ ನೇಮಕಾತಿ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆಯೂ ಮಾರ್ಚ್ 2ರಂದೇ ವಿಚಾರಣೆ ಮುಂದುವರೆಸುವುದಾಗಿ ನ್ಯಾಯಮೂರ್ತಿಗಳು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.