ಗುರುವಾರ , ಜನವರಿ 28, 2021
20 °C

ಸಂಪುಟ ವಿಸ್ತರಣೆಗೆ ಸದ್ಯವೇ ಒಪ್ಪಿಗೆ; ಮಾಸಾಂತ್ಯದೊಳಗೆ ಕಸರತ್ತು ಪೂರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈ ತಿಂಗಳ ಅಂತ್ಯದೊಳಗೆ ಸಚಿವ ಸಂಪುಟ ವಿಸ್ತರಣೆ ಮಾಡಲು ಅನುವಾಗುವಂತೆ ಬಿಜೆಪಿ ವರಿಷ್ಠರು ಒಪ್ಪಿಗೆ ನೀಡುವ ಸಾಧ್ಯತೆ ಇದೆ. ಈ ಸುಳಿವು ಸಿಕ್ಕಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಂಪುಟ ವಿಸ್ತರಣೆಯ ತಯಾರಿ ಸಿದ್ಧತೆ ನಡೆಸಿದ್ದಾರೆ.

‘ಈ ಬಾರಿ ಸಚಿವರ ಸಂಪುಟ ವಿಸ್ತರಣೆ ಆಗುವುದು ಖಚಿತ. ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಅರುಣ್‌ಸಿಂಗ್‌ ಅವರು ದೆಹಲಿಗೆ ಮರಳುವುದಕ್ಕೆ ಮುನ್ನ ಈ ಸಂಬಂಧ ಸೂಚನೆ ನೀಡಿದ್ದಾರೆ’ ಎಂದು ಬಿಜೆಪಿಯ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮುಖ್ಯಮಂತ್ರಿಯವರು ಈಗಾಗಲೇ ಭರವಸೆ ನೀಡಿರುವಂತೆ  ಆರ್‌.ಶಂಕರ್‌, ಎಂ.ಟಿ.ಬಿ.ನಾಗರಾಜ್‌, ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ. ಅಲ್ಲದೆ, ಉಮೇಶ ಕತ್ತಿ, ರಾಜೂಗೌಡ, ಸಿ.ಪಿ.ಯೋಗೇಶ್ವರ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಅರವಿಂದ ಲಿಂಬಾವಳಿ ಅವರ ಹೆಸರು ವರಿಷ್ಠರ ಪರಿಶೀಲನೆಯಲ್ಲಿದೆ. ವರಿಷ್ಠರು ಹಸಿರು ನಿಶಾನೆ ನೀಡಿದರೆ ಪಟ್ಟಿಯಿಂದ ಒಬ್ಬರನ್ನು ಕೈಬಿಟ್ಟು ಲಿಂಬಾವಳಿಗೆ ಅವಕಾಶ ಸಿಗಬಹುದು ಎಂದು ಮೂಲಗಳು ತಿಳಿಸಿವೆ.

ವರಿಷ್ಠರ ಸಂಪೂರ್ಣ ಒಪ್ಪಿಗೆಯ ಮೇರೆಗೆ ಸಂಪುಟ ವಿಸ್ತರಣೆ ಮಾಡಬೇಕು ಎಂಬುದು ಯಡಿಯೂರಪ್ಪ ಅವರ ಇರಾದೆ. ಹೀಗಾಗಿ ಎಷ್ಟೇ ಒತ್ತಡಗಳಿದ್ದರೂ ಒಪ್ಪಿಗೆ ಪಡೆಯದೇ ವಿಸ್ತರಣೆಗೆ ಕೈ ಹಾಕುವುದಿಲ್ಲ ಎಂಬ ನಿಲುವಿಗೆ ಬಂದಿದ್ದಾರೆ. ಸಂಭಾವ್ಯ ಸಚಿವರ ಪಟ್ಟಿಗೆ ಒಪ್ಪಿಗೆ ಪಡೆದೇ ಮುಂದುವರಿಯಲು ತೀರ್ಮಾನಿಸಿದ್ದಾರೆ.

ಒಟ್ಟು ಏಳು ಸಚಿವ ಸ್ಥಾನಗಳು ಖಾಲಿ ಇದ್ದು, ಕನಿಷ್ಠ ಆರು ಸಚಿವ ಸ್ಥಾನಗಳನ್ನು ತುಂಬಲು ತೀರ್ಮಾನಿಸಲಾಗಿದೆ. ಸರ್ಕಾರ ರಚನೆಗೆ ಕಾರಣರಾದ ಆರ್‌.ಶಂಕರ್‌, ಎಂ.ಟಿ.ಬಿ.ನಾಗರಾಜ್‌, ಮುನಿರತ್ನ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತವಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಒತ್ತು ನೀಡುವ ಉದ್ದೇಶದಿಂದ ರಾಜೂಗೌಡ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು