ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಲಿಂಗಯ್ಯ: ಕಾವ್ಯದ ದಿಕ್ಕನ್ನೇ ತಿರುಗಿಸಿದ ಕವಿ

Last Updated 11 ಜೂನ್ 2021, 20:49 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣದಲ್ಲಿ ‘ಸಿದ್ಧಲಿಂಗಯ್ಯನವರು ನಮ್ಮನ್ನಗಲಿದ್ದಾರೆ’ ಎನ್ನುವ ಸಾಲುಗಳನ್ನು ಓದಿದಾಗ ನಂಬಲಾಗಲಿಲ್ಲ. ಆದರೆ ಒಂದರ ಮೇಲೊಂದರಂತೆ ಅವೇ ಪೋಸ್ಟ್‌ಗಳು ಹರಿದು ಬಂದಾಗ ಯಾರನ್ನು ಕೇಳಿ ಖಚಿತಪಡಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಪ್ರಜಾವಾಣಿಯ ಸ್ನೇಹಿತರಿಂದ ಕರೆ ಬಂತು. ಕಹಿಸತ್ಯ ಕಿವಿಗೆ ಸೀಸವಾಯಿತು. ಇನ್ನೂ ಮನಸ್ಸು ವಿಷಯವನ್ನು ನಂಬಲು ಹಿಂದೇಟು ಹಾಕುತ್ತಿದೆ. ಕೊರೊನಾ ಹೀಗೆ ಬದುಕನ್ನು, ಸ್ನೇಹಿತರನ್ನು, ಬಂಧುಗಳನ್ನು ಹಿಸುಕುತ್ತೆ ಅಂತ ನಾನಂದುಕೊಂಡಿರಲಿಲ್ಲ. ಆತ್ಮೀಯರು ಅಗಲಿದಾಗಲೆಲ್ಲ ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಬೇಸರವಾಗುತ್ತದೆ.

ಡಾ. ಸಿದ್ಧಲಿಂಗಯ್ಯನವರು ಮತ್ತು ನಾನು ಮೊದಲು ಭೇಟಿಯಾದಾಗ ಅವರು ಕೇಳಿದ ಪ್ರಶ್ನೆ, ‘ನಾನು ನಿಮ್ಮನ್ನು ಏನಂತ ಕರೆಯಬೇಕು?’ ಎಂಬುದಾಗಿತ್ತು. ‘ನಿಮಗೆ ಹೇಗೆ ಕರೆಯಬೇಕು ಅನಿಸುತ್ತೋ ಹಾಗೆ ಕರೆಯಿರಿ, ಅದರಲ್ಲೇನಿದೆ?’ ಎಂದಿದ್ದೆ. ಸ್ವಲ್ಪ ಹೊತ್ತಿನ ನಂತರ ‘ಪ್ರೊಫೆಸರ್‌’ ಅಂತ ಕರೀತೀನಿ ಅಂದರು. ‘ಆಯ್ತು’ ಅಂದೆ. ಅದೇ ಹೆಸರನ್ನೇ ಭೇಟಿಯಾದಾಗಲೆಲ್ಲ ಬಳಸುತ್ತಿದ್ದರು. ಯಾರ ಮನಸ್ಸಿಗೂ ನೋವಾಗದ ಹಾಗೆ ನಡೆದುಕೊಳ್ಳುವ ಧೋರಣೆ ಅವರದು. ಅವರ ಮಾತಿನಲ್ಲಿರುವ ಈ ಮೃದುತ್ವಕ್ಕೂ, ಅವರ ಕಾವ್ಯಕ್ಕಿರುವ ಗಡಸುತನಕ್ಕೂ ಬಹಳ ಅಂತರವಿದೆ ಎನಿಸುತ್ತಿತ್ತು. ಬಹುಶಃ ಅದು ಸಮಾನಮನಸ್ಕರಿಗೂ ಶೋಷಕರಿಗೂ ಇರುವ ಅಂತರವನ್ನು ಪ್ರತಿಬಿಂಬಿಸುವಂತಹದ್ದಾಗಿತ್ತು.

ನಾನು ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹುದ್ದೆಗೆ ಸಂದರ್ಶನಕ್ಕೆ ಹೋಗಿದ್ದೆ. ಸಿದ್ಧಲಿಂಗಯ್ಯನವರು ಅದೇ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು. ನಾನಾಗ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರವಾಚಕನಾಗಿದ್ದೆ. ಅವರ ಆಯ್ಕೆಯಾಗಿತ್ತು. ಇದರ ಬಗ್ಗೆ ಅವರು ಮಾತನಾಡಿದ್ದರು.

ಕೆಲ ವರ್ಷಗಳ ನಂತರ ಮತ್ತೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರೊಫೆಸರ್‌ ಹುದ್ದೆ ತೆರವಾದಾಗ ಅರ್ಜಿ ನಮೂನೆಯನ್ನು ಕಳುಹಿಸುತ್ತೇನೆ, ಹಾಕಿ ಎಂದು ಹೇಳಿದರು. ಇಲ್ಲ, ನಾನೀಗ ಮೈಸೂರಿಗೆ ಬಂದುದರಿಂದ ಬದಲಾವಣೆ ಬೇಡ ಎನಿಸಿದೆ ಎಂದೆ. ಈ ಎರಡು ಸಂದರ್ಭಗಳು ಅವರ ಸಹೃದಯತೆಯ ಪರಿಚಯ ಮಾಡಿಕೊಡುತ್ತವೆ.

ಅವರ ಕಾವ್ಯದ ಪ್ರಾರಂಭವೇ ಒಂದು ಮೈಲುಗಲ್ಲು. ಅವರ ಕಾವ್ಯದ ಪ್ರಭಾವದಿಂದ ತಪ್ಪಿಸಿಕೊಳ್ಳುವುದಕ್ಕೆ ಚಳವಳಿಯಲ್ಲಿ ಯಾರಿಂದಲೂ ಸಾಧ್ಯವಾಗಲಿಲ್ಲ. ಚಳವಳಿಯಿಂದ ಆಚೆಗಿದ್ದ ಹಿರಿಯರೂಕೂಡ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಳವಳಿಯಲ್ಲಿ ಅವರ ಹಾಡುಗಳಿಲ್ಲದೆ ಕಾರ್ಯಕ್ರಮಗಳು ಆರಂಭವಾಗುತ್ತಿರಲಿಲ್ಲ. ಒಂದರ್ಥದಲ್ಲಿ ಅವರ ಕ್ರಾಂತಿಗೀತೆಗಳು ಚಳವಳಿಗಾರರಿಗೆ ಪ್ರಾರ್ಥನಾಗೀತೆಗಳಂತೆ ಬಳಕೆಯಾಗುತ್ತಿದ್ದವು . ಆ ಹಾಡುಗಳನ್ನು ಕೇಳುತ್ತಿದ್ದರೆ ರೋಮಗಳೆಲ್ಲ ಎದ್ದುನಿಲ್ಲುತ್ತಿದ್ದವು. ಚಳವಳಿಯನ್ನು ಕಟ್ಟಿ ಬೆಳೆಸುವುದರಲ್ಲಿ ಇವರ ಕಾವ್ಯ ಪ್ರಧಾನ ಪಾತ್ರ ವಹಿಸಿತ್ತು.

ಸಾಹಿತ್ಯದ ಮೂಲಕ ಜನನಾಡಿಯನ್ನು ಹಿಡಿದು ಅವರು ತುಂಬ ಎತ್ತರಕ್ಕೆ ಬೆಳೆದರು. ಸಮಾಜವನ್ನು ಬೆಳೆಯುವಂತೆ ಮಾಡಿದರು. ಅವರ ‘ಹೊಲೆ ಮಾದಿಗರ ಹಾಡು ನಲ್ವತ್ತು, ನಲವತ್ತೈದು ಪುಟದ ಪುಟ್ಟ ಕವನ ಸಂಕಲನ, ಕನ್ನಡ ಕಾವ್ಯದ ದಿಕ್ಕನ್ನೇ ಬದಲಿಸಿತು. ‘ಸಾವಿರಾರು ನದಿಗಳು ಸಂಕಲನ ಕ್ಯಾಸೆಟ್‌ ಆಗಿ ಹೊರಬಂದದ್ದು ಒಂದು ದೊಡ್ಡ ದಾಖಲೆಯೇ. ಅವರ ಆತ್ಮಕತೆ ‘ಊರುಕೇರಿ ಭಿನ್ನ ನಡೆಯ ಹೆಜ್ಜೆಗಳನ್ನು ದಾಖಲಿಸುವಂತಹದು. ಮೆರವಣಿಗೆ, ಕಪ್ಪು ಕಾಡಿನ ಹಾಡು ಇತರ ಸಂಕಲನಗಳು. ಅವರು ಬರೆದ ನಾಟಕಗಳು ಜನಮನ್ನಣೆ ಪಡೆಯುವುದರೊಂದಿಗೆ ಬೀದಿನಾಟಕಗಳಿಗೆ ಪ್ರಧಾನವಾಗಿ ಜೀವಂತಿಕೆಯನ್ನೂ ತಂದುಕೊಟ್ಟರು. ಸಮುದಾಯದ ಜಾಥಾಗಳ ಮೂಲಕ ಮನೆಮಾತಾದರು. ದಲಿತರ ವಿಷಯಗಳು ಮಾಧ್ಯಮದಲ್ಲಿ ಪ್ರಕಟವಾಗಲು ಹಿಂದೇಟು ಹಾಕುತ್ತಿದ್ದ ಕಾಲವದು. ಆ ಪರಿಕಲ್ಪನೆಯನ್ನು ಬಡಿದು ನೀರಾಗಿಸುವುದರಲ್ಲಿ ಇವರ ಪಾತ್ರ ಹಿರಿದು.

ಸಿದ್ಧಲಿಂಗಯ್ಯನವರು ಹೋರಾಟದಿಂದ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿದಾಗ ತುಂಬ ಚರ್ಚೆಗೆ ಒಳಗಾದರು. ಚಳವಳಿ ಮತ್ತು ರಾಜಕೀಯ ಒಂದಕ್ಕೊಂದು ವಿರೋಧಿ ಸ್ವರೂಪದವು ಎನ್ನುವ ಧೋರಣೆ ಇತ್ತು. ಅಂತಹ ಸಂದರ್ಭದಲ್ಲಿ ಅವರು ಪ್ರವೇಶ ಮಾಡಿ ಅದರ ಚಹರೆಯನ್ನು ಬದಲಾಯಿಸಿದರು. ‘ಸದನದಲ್ಲಿ ಸಿದ್ಧಲಿಂಗಯ್ಯ’ ಒಂದು ಅತ್ಯತ್ತಮವಾದ ದಾಖಲಾರ್ಹ ಪ್ರಾತಿನಿಧಿಕ ಸಮಸ್ಯೆ ಹಾಗೂ ಪರಿಹಾರ ಮಾರ್ಗದ ಚಿಂತನಕೃತಿ. ಸದನದಲ್ಲಿ ಮಾಡಿದ ಭಾಷಣಗಳು, ಚರ್ಚೆ ಎಂದಿಗೂ ಮಾರ್ಗದರ್ಶಿಯಾಗಿ ನಿಲ್ಲುವಂಥವು.

ಸಾಹಿತಿಯಾಗಿ, ರಾಜಕೀಯವಾಗಿ ಅವರ ನಡೆಗಳು ವಿವಾದಕ್ಕೆ ಒಳಗಾಗಿವೆ. ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರದೊಂದಿಗಿನ ಅವರ ಸಂಬಂಧ ಕರ್ನಾಟಕದಲ್ಲಿ ಟೀಕೆಗೂ ಕಾರಣವಾಗಿತ್ತು. ಮೊದಲ ದಲಿತ ಚಳವಳಿಯ ನಾಯಕರು ಅವರಾಗಿರುವುದರಿಂದ ಅವರ ಹೆಜ್ಜೆಗಳನ್ನು ಎಲ್ಲರೂ ಗಮನಿಸುವವರೇ ಆಗಿದ್ದರು. ಇಂಥ ಸಂದರ್ಭದಲ್ಲಿ ಅವರು ತೆಗೆದುಕೊಂಡ ನಿರ್ಣಯ, ಕೊಟ್ಟ ಪ್ರತಿಕ್ರಿಯೆಗಳು ಹಲವಾರು ಚಾರಿತ್ರಿಕವಾಗಿವೆ. ಮತ್ತು ಮುಂದಿನವರು ಪರಿಶೀಲಿಸಿ ಹೆಜ್ಜೆ ಹಾಕಲು ಕೈಪಿಡಿಯಂತೆ ನಿಂತುಕೊಳ್ಳುತ್ತವೆ.

ಸಿದ್ಧಲಿಂಗಯ್ಯನವರ ಕಾವ್ಯ ಎಷ್ಟು ಗಂಭೀರವೋ ಅವರ ಭಾಷಣಗಳು ಅಷ್ಟೇ ನವಿರು ಹಾಸ್ಯದಿಂದ ಕೂಡಿರುತ್ತಿದ್ದವು. ಎರಡು ಭಿನ್ನ ವ್ಯಕ್ತಿತ್ವದ ನೆಲೆಗಳು ಅವು. ಬಂಡಾಯವೆಂದರೆ ಗಾಂಭೀರ್ಯದ ಮುಸುಕಿನಲ್ಲಿಯೇ ಚಲಿಸುವಂತಹದು ಎನ್ನುವ ಪರಿಕಲ್ಪನೆಯನ್ನೇ ಮುರಿದುಹಾಕಿದವರು. ಅದು ಅವರದ್ದೇ ಶೈಲಿ. ಇದಕ್ಕೆ ಮುಖ್ಯ ಕಾರಣ ಮತ್ತು ಪ್ರೇರಣೆ ಅವರ ಜಾನಪದ ಅಧ್ಯಯನದ ಮಾರ್ಗವೆಂದೇ ನಾನು ಭಾವಿಸಿದ್ದೇನೆ.

ಕೇಂದ್ರ ಸಾಹಿತ್ಯ ಅಕಾಡೆಮಿಯ ಸಭೆಯೊಂದರ ಸಂದರ್ಭದಲ್ಲಿ ಎಸ್.‌ಜಿ.ಸಿದ್ಧರಾಮಯ್ಯ, ಪದ್ಮಪ್ರಸಾದ್‌, ನಾನು, ಸಿದ್ಧಲಿಂಗಯ್ಯನವರು ಒಟ್ಟಿಗೆ ಸೇರಿದ್ದೆವು. ನನ್ನ ಹೊಸ ಬರಹದ ಬಗ್ಗೆ ಕೇಳಿದ್ದರು. ಹಾಗೂ ನನ್ನ ಹೊಸ ಪುಸ್ತಕ ಕಳುಹಿಸದೇ ಇದ್ದ ಬಗ್ಗೆ ಆಕ್ಷೇಪಿಸಿ, ಕಳುಹಿಸಲು ಹೇಳಿದ್ದರು. ಲಾಕ್‌ಡೌನ್‌ ಕಾರಣದಿಂದ ಕಳುಹಿಸಲಾಗಲೇ ಇಲ್ಲ. ಅವರು ಪುಸ್ತಕ ಪ್ರೇಮಿ. ಅವರ ಮನೆಯೇ ಒಂದು ಗ್ರಂಥಾಲಯವಾಗಿತ್ತು. ನನ್ನ ಗ್ರಂಥಾಲಯವನ್ನೂ ಅಷ್ಟೇ ಮೆಚ್ಚಿಕೊಂಡಿದ್ದರು. ಕೊರೊನಾದಿಂದ ಬಹಳಷ್ಟು ಜನ ವಾಸಿಯಾಗಿ ಬಂದರು. ಇವರ ಆರೋಗ್ಯವೂ ಸುಧಾರಣೆಯಲ್ಲಿದೆ ಎನ್ನುವುದನ್ನು ಕೇಳಿದ್ದೆ. ಆದರೆ ಅವರಿಲ್ಲದ ಸುದ್ದಿ ಹೀಗೆ ಬಂದು ಅಪ್ಪಳಿಸುತ್ತದೆ ಎಂದು ಭಾವಿಸಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT