ಗುರುವಾರ , ಮಾರ್ಚ್ 30, 2023
31 °C

ಬಿಜೆಪಿ ದಲಿತ ನಾಯಕರಿಗೆ 12 ಸವಾಲುಗಳನ್ನು ಮುಂದಿಟ್ಟ ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಂಗಳೂರು: 'ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ, ನಾರಾಯಣ ಸ್ವಾಮಿ ಮೊದಲಾದವರು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನವನ್ನು ವಿರೋಧಿಸುವ ಬಿಜೆಪಿ ಜೊತೆ ಸ್ವಾರ್ಥಕ್ಕಾಗಿ ಸೇರಿದ್ದಾರೆ' ಎಂದು ಸಿಂದಗಿಯಲ್ಲಿ ನಡೆದ ಮಾದಿಗ ದಂಡೋರಾ ಸಭೆಯಲ್ಲಿ ಹೇಳಿದ್ದೆ ಹೊರತು ಎಲ್ಲಿಯೂ ದಲಿತರನ್ನು ಅಗೌರವಿಸುವ ಮಾತು ಆಡಿಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

'ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಸೇರಿದ್ದಾರೆ' ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕ್ಷಮೆಗೆ ಆಗ್ರಹಿಸಿದ ಬೆನ್ನಲ್ಲೇ ಸಿದ್ದರಾಮಯ್ಯ #ದಲಿತವಿರೋಧಿಬಿಜೆಪಿ ಹ್ಯಾಷ್‌ಟ್ಯಾಗ್‌ನಲ್ಲಿ ಸರಣಿ ಟ್ವೀಟ್‌ ಮೂಲಕ ಬಿಜೆಪಿ ದಲಿತ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾನು ಮುಸ್ಲಿಂ ವಿರೋಧಿ ಎಂಬ ಬೊಬ್ಬಿಟ್ಟ ಪಕ್ಷದ ಅಭ್ಯರ್ಥಿಗಳ ಠೇವಣಿ ಜಪ್ತಿ ಮಾಡಿಸಿ ಉಪ ಚುನಾವಣೆಯಲ್ಲಿ ಮತದಾರರು ಉತ್ತರ ಕೊಟ್ಟಿದ್ದಾರೆ. ಈಗ ಬಿಜೆಪಿಯ ಕೆಲವು ತಥಾಕಥಿತ ದಲಿತ ನಾಯಕರು ನಾನು ದಲಿತ ವಿರೋಧಿ ಎಂದು ಕೂಗಾಡುತ್ತಿದ್ದಾರಂತೆ. ಇದಕ್ಕೂ ಮತದಾರರೇ ಉತ್ತರ ನೀಡುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಬಿಜೆಪಿ ದಲಿತ ನಾಯಕರ ಮುಂದೆ ಇಟ್ಟಿರುವ ಸವಾಲುಗಳು:

- ಕೇಂದ್ರದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುತ್ತೇವೆ ಎಂದಾಗ, ದಲಿತರನ್ನು ನಾಯಿಗಳು ಎಂದು ತುಚ್ಚೀಕರಿಸಿದಾಗ ಬಾಯಿ ಮುಚ್ಚಿಕೊಂಡಿದ್ದ ಬಿಜೆಪಿ ದಲಿತ ನಾಯಕರು, ಈಗ ನನ್ನ ವಿರುದ್ಧ ಕೂಗು ಹಾಕುತ್ತಿರುವುದು ರಾಜಕೀಯ ಸ್ವಾರ್ಥಕ್ಕಾಗಿಯಲ್ಲದೇ ಮತ್ತೇನು?

- ನನ್ನನ್ನು ದಲಿತ ವಿರೋಧಿ ಎಂದು ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ನನ್ನದೊಂದು ಸಣ್ಣ ಸವಾಲು. ರಾಜ್ಯ ಬಜೆಟ್ ನ ಶೇಕಡಾ 24.1ರಷ್ಟು ಭಾಗವನ್ನು ಮೀಸಲಿಡುವ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯನ್ನು ನಾನು ಜಾರಿಗೆ ತಂದಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ ರಾಷ್ಟ್ರಮಟ್ಟದಲ್ಲಿ ಅದನ್ನು ಜಾರಿಗೆ ತರುವಂತೆ ಮಾಡಿ ನೋಡೋಣ.

- 2008-09ರಿಂದ 2012-13ನೇ ಸಾಲಿನವರೆಗೆ ಬಿಜೆಪಿ ಸರ್ಕಾರ ಎಸ್‌ಸಿಎಸ್‌ಪಿ/ಟಿಎಸ್‌ಪಿ ಯೋಜನೆಯಡಿ ಖರ್ಚು ಮಾಡಿದ್ದು ಕೇವಲ ರೂ.22,261 ಕೋಟಿ. ನಮ್ಮ ಸರ್ಕಾರದ ಅವಧಿಯಲ್ಲಿ ₹88,395 ಕೋಟಿ.  ಯಾರು ದಲಿತ ವಿರೋಧಿ? ನಾನಾ? ಬಿಜೆಪಿ ನಾಯಕರಾ?

- ಪರಿಶಿಷ್ಟ ಜಾತಿ/ಪಂಗಡದ ಸರ್ಕಾರಿ ನೌಕರರ ಮುಂಬಡ್ತಿ ಸೌಲಭ್ಯವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದಾಗ ಬಿಜೆಪಿಯ ದಲಿತ ನಾಯಕರು ಕಣ್ಣು ಮುಚ್ಚಿ ಕೂತಿದ್ದರು. ಸುಗ್ರೀವಾಜ್ಞೆ ಮೂಲಕ ಆ ಸೌಲಭ್ಯವನ್ನು ಮತ್ತೆ ಜಾರಿಗೊಳಿಸಿದ್ದು ನಮ್ಮ ಸರ್ಕಾರ ಎನ್ನುವುದನ್ನು ಮರೆಯಬೇಡಿ.

- ಪರಿಶಿಷ್ಟ ಜಾತಿ/ಪಂಗಡದ ಗುತ್ತಿಗೆದಾರರಿಗೆ ಒಂದು ಕೋಟಿ ರೂಪಾಯಿ ವರೆಗಿನ ಸರ್ಕಾರಿ ಕಾಮಗಾರಿಗಳಲ್ಲಿ ಶೇಕಡಾ 18ರಷ್ಟು ಮೀಸಲಾತಿ ನೀಡಿ ಕೆಟಿಟಿಪಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದು ನಮ್ಮ ಸರ್ಕಾರ. ನರೇಂದ್ರ ಮೋದಿ ಅವರಿಗೆ ಹೇಳಿ ರಾಷ್ಟ್ರಮಟ್ಟದಲ್ಲಿ ದಲಿತರಿಗೆ ಈ ಅನುಕೂಲ ಮಾಡಿಕೊಡಿ.

- ಬಿಜೆಪಿ ಸರ್ಕಾರದಲ್ಲಿ ಪರಿಶಿಷ್ಟ ಜಾತಿ/ಪಂಗಡಗಳ ಆಶ್ರಮ ಶಾಲೆ, ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಆಹಾರಕ್ಕಾಗಿ ಮಾಸಿಕವಾಗಿ ನೀಡುತ್ತಿದ್ದ ಹಣ ₹600, ₹750 ಮತ್ತು ₹850. ಅದನ್ನು ಕ್ರಮವಾಗಿ ₹1300, ₹1500 ಮತ್ತು ₹1600ಕ್ಕೆ ಹೆಚ್ಚಿಸಿದ್ದು ನಮ್ಮ ಸರ್ಕಾರ.

- ನಮ್ಮ ಸರ್ಕಾರ ಹೋಬಳಿಗೊಂದು ಪ.ಜಾ/ಪ.ಪಂ ವಸತಿ ಶಾಲೆಯಂತೆ 270 ಹೊಸ ವಸತಿ ಶಾಲೆ ಹಾಗೂ 200 ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿತ್ತು.. ಇದರಿಂದ 74,300 ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಪ್ರವೇಶಾವಕಾಶ ಸಿಕ್ಕಿದೆ. ಬಿಜೆಪಿ ಸರ್ಕಾರದ ಸಾಧನೆ ಏನು?

- ಪ.ಜಾ/ಪ.ಪಂ. ಉದ್ಯಮಿಗಳಿಗೆ  ಕೆಎಸ್‌ಎಫ್‌ಸಿ ಮೂಲಕ ಶೇ.4ರ ಬಡ್ಡಿಯಲ್ಲಿ ರೂ.10 ಕೋಟಿ ವರೆಗೆ ಸಾಲ. ಈ ಸೌಲಭ್ಯ ರಾಷ್ಟ್ರೀಕೃತ ಬ್ಯಾಂಕುಗಳಿಗೂ ವಿಸ್ತರಣೆ. ಈ ಮೂಲಕ 1,597 ಉದ್ಯಮಿಗಳಿಗೆ 908 ಕೋಟಿ ರೂ. ಸಾಲ. ಇದು ನಮ್ಮ ಸಾಧನೆ. ಬಿಜೆಪಿ ಸರ್ಕಾರದ ಸಾಧನೆ ಏನು?

- ಪ.ಜಾ/ಪ.ಪಂ ಸಮುದಾಯದ ಅಲೆಮಾರಿ/ ಅರೆ ಅಲೆಮಾರಿ/ ಸೂಕ್ಷ್ಮ/ಅತಿ ಸೂಕ್ಷ್ಮ 72 ಸಮುದಾಯಗಳನ್ನು ಗುರುತಿಸಿ ರೂ.222 ಕೋಟಿ ವೆಚ್ಚದಲ್ಲಿ ಅವರ ಶೈಕ್ಷಣಿಕ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಿದ್ದು ನಮ್ಮ ಸರ್ಕಾರ.

- ನಮ್ಮ ಸರ್ಕಾರ ₹840 ಕೋಟಿ ವೆಚ್ಚದಲ್ಲಿ  ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನರಾಂ  ಮತ್ತು ಮಹರ್ಷಿ ವಾಲ್ಮೀಕಿ ಯವರ ಹೆಸರಲ್ಲಿ 8,199 ಭವನಗಳನ್ನು ನಿರ್ಮಿಸಿತ್ತು.  ನನ್ನನ್ನು ದಲಿತ ವಿರೋಧಿ ಎಂದು ಹೇಳುವವರು ಬಿಜೆಪಿ ಕಾಲದಲ್ಲಿ ಕಟ್ಟಿದ್ದೆಷ್ಟು ಎಂದು ಲೆಕ್ಕ ಹೇಳಲಿ.

- ನಮ್ಮ ಸರ್ಕಾರ ₹1,494 ಕೋಟಿ ವೆಚ್ಚದಲ್ಲಿ  ಪ.ಜಾ/ಪ.ಪಂ ವಿದ್ಯಾರ್ಥಿನಿಲಯಗಳ ಸ್ವಂತ ಕಟ್ಟಡ, ₹1,537 ಕೋಟಿ ವೆಚ್ಚದಲ್ಲಿ 129 ವಸತಿ ಶಾಲಾ ಸಂಕೀರ್ಣ ನಿರ್ಮಾಣ,  16 ವಿಶ್ವವಿದ್ಯಾಲಯಗಳಲ್ಲಿ ₹116 ಕೋಟಿ ವೆಚ್ಚದಲ್ಲಿ ಸ್ನಾತಕೋತ್ತರ ವಸತಿನಿಲಯ ನಿರ್ಮಿಸಿದೆ. ಬಿಜೆಪಿ ಸರ್ಕಾರ ಏನು ಮಾಡಿದೆ?

- ಎರಡೂವರೆ ಲಕ್ಷ ಪ.ಜಾ/ಪ.ಪಂ ಫಲಾನುಭವಿಗಳು ವಿವಿಧ ಅಭಿವೃದ್ದಿ ನಿಗಮದಿಂದ ಪಡೆದಿದ್ದ ₹581 ಕೋಟಿ ಸಾಲ ಮನ್ನಾ ಮಾಡಿದ್ದು ನಮ್ಮ ಸರ್ಕಾರ. ಬಿಜೆಪಿ ಸರ್ಕಾರ ಈ ಸಮುದಾಯದ ಫಲಾನುಭವಿಗಳ ಎಷ್ಟು ಸಾಲ ಮನ್ನಾ ಮಾಡಿದೆ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು