ಗುರುವಾರ , ಫೆಬ್ರವರಿ 2, 2023
26 °C
ಹೆಣಗಳ ವಿಚಾರದಲ್ಲೂ ಲಂಚ ಹೊಡೆಯುವುದು ಭ್ರಷ್ಟಾಚಾರ: ಸಿದ್ದರಾಮಯ್ಯ

ಸಚಿವ ಸುಧಾಕರ್ ಒಬ್ಬ ಪೆದ್ದ, ಬಿಜೆಪಿಯ ಆಲಿಬಾಬಾ: ಸಿದ್ದರಾಮಯ್ಯ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸಚಿವ ಸುಧಾಕರ್ ಒಬ್ಬ ಪೆದ್ದ. ಬಿಜೆಪಿಯ ಆಲಿಬಾಬಾ ಮತ್ತು 40 ಕಳ್ಳರ ದಂಡನಾಯಕ ಆಗುವ ಹಠಕ್ಕೆ ಬಿದ್ದ ಸುಧಾಕರ್‌ನನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಫೂನ್ ಮಾಡುತ್ತಿದ್ದಾರೆ. ಬೇಕಂತಲೇ ಸುಧಾಕರ್ ಬಾಯಲ್ಲಿ ಸುಳ್ಳು ಹೇಳಿಸುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ತಮ್ಮ ವಿರುದ್ಧ ಸುಧಾಕರ್‌ ಮಾಡಿರುವ ₹ 35 ಸಾವಿರ ಕೋಟಿ ಭ್ರಷ್ಟಾಚಾರದ ಆರೋಪಕ್ಕೆ ಬುಧವಾರ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯಿಸಿದ ಅವರು, ‘ಮಹಾಲೇಖಪಾಲರ (ಸಿಎಜಿ) ವರದಿ ಓದಲು, ಅರ್ಥ ಮಾಡಿಕೊಳ್ಳಲು ಸುಧಾಕರ್‌ಗೆ ಬರುವುದಿಲ್ಲ. ಆತ ಮಾಡಿದ ಆರೋಪಕ್ಕೂ ಸಿಎಜಿ ವರದಿಯಲ್ಲಿ ಇರುವುದಕ್ಕೂ ಸಂಬಂಧವೇ ಇಲ್ಲ’ ಎಂದರು.

‘ಭ್ರಷ್ಟಾಚಾರ ಎಂದರೆ ಯಾವುದು ಗೊತ್ತಾ ಸುಧಾಕರ್? ಕೊರೊನಾ ಸಮಯದಲ್ಲಿ ಹೆಣಗಳ ವಿಚಾರದಲ್ಲೂ ಲಂಚ ಹೊಡೆಯುವುದು ಭ್ರಷ್ಟಾಚಾರ. 2020-21ರಲ್ಲಿ ಕೊರೊನಾದಲ್ಲಿ ಸುಮಾರು ₹ 3 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆಯೆಂದು ಆಗಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಎಚ್‌.ಕೆ. ಪಾಟೀಲರು ವಿಧಾನಸಭಾಧ್ಯಕ್ಷರಿಗೆ ವರದಿ ಕೊಟ್ಟಿದ್ದಾರೆ. ಆದರೆ‌, ಸಭಾಧ್ಯಕ್ಷರು ಆ ವರದಿಯನ್ನು ಸದನದಲ್ಲಿ ಮಂಡಿಸದೆ ವಿಧಾನಸಭಾಧ್ಯಕ್ಷ ಎನ್ನುವುದನ್ನೂ ಮರೆತು
ಆರೆಸ್ಸೆಸ್ಸಿನ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ನಮ್ಮ ಪಕ್ಷದಿಂದ ರಾಜಕೀಯ ಜೀವನ ಪಡೆದ ಸುಧಾಕರ್, ದುಡ್ಡಿನ ಆಸೆಗೆ ಬಿದ್ದು ತಮ್ಮನ್ನು ಆಪರೇಷನ್ ಕಮಲಕ್ಕೆ ಮಾರಿಕೊಂಡರು. ಕಾಂಗ್ರೆಸ್‌ನಿಂದ ಸುಧಾಕರ್‌ಗೆ ಟಿಕೆಟ್ ಕೊಡುವಾಗ ಮೊಯಿಲಿ, ‘ಅವನೊಬ್ಬ ಬಿಗ್ ಫ್ರಾಡ್. ಅವನಿಗೆ ಟಿಕೆಟ್ ಕೊಡಬಾರದು’ ಎಂದು ಹೇಳಿದ್ದರು’ ಎಂದು ನೆನಪಿಸಿದರು.

‘ಬೆಂಗಳೂರಿನ ಟೆಂಡರ್ ಶ್ಯೂರ್ ಮತ್ತು ವೈಟ್ ಟಾಪಿಂಗ್ ಕಾಮಗಾರಿಯಲ್ಲಿ ‌ಅವ್ಯವಹಾರ ಆಗಿಲ್ಲ ಎಂದು ಕ್ಯಾಪ್ಟನ್ ದೊಡ್ಡಿಹಾಳ್ ಸಮಿತಿ ಕೊಟ್ಟಿದ್ದ ವರದಿಯನ್ನು ಯಡಿಯೂರಪ್ಪ ಸರ್ಕಾರವು ಅಂಗೀಕರಿಸಿದೆ. ಈ ವಿಚಾರ ತಿಳಿದುಕೊಳ್ಳದೆ ಸುಧಾಕರ್‌ ಮಣ್ಣು ತಿನ್ನುತ್ತಿದ್ದರಾ? ಇಲ್ಲ ಏನು ತಿನ್ನುತ್ತಿದ್ದರು?’ ಎಂದೂ ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಆಪರೇಷನ್ ಕಮಲ’ಕ್ಕೆ ಜೆಡಿಎಸ್ ಕಾರಣ: ‘ಜೆಡಿಎಸ್ 20 ತಿಂಗಳ ಅಧಿಕಾರ ಬಿಟ್ಟು ಕೊಟ್ಟಿದ್ದರೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಿರಲಿಲ್ಲ. ‌ಆಪರೇಷನ್ ಕಮಲ ಮಾಡಲು ಜೆಡಿಎಸ್ ಕಾರಣ’ ಎಂದೂ ಸಿದ್ದರಾಮಯ್ಯ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು