ಮಂಗಳವಾರ, ಮೇ 17, 2022
25 °C
ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಜಾತಿಗಳ ಸಂಘಟನೆಗೆ ಒಲವು

ಅಲಕ್ಷಿತರ ಸಂಘಟನೆಗೆ ಮುಂದಾದ ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮೀಸಲಾತಿ ಪ್ರಮಾಣ ಹೆಚ್ಚಳ, ಮೀಸಲಾತಿ ಪಟ್ಟಿಯ ಪರಿಷ್ಕರಣೆ ಬೇಡಿಕೆ ಇಟ್ಟು ಹೋರಾಟಕ್ಕೆ ಧುಮುಕಿರುವ ಹಿಂದುಳಿದ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿವಿಧ ಸಮುದಾಯದವರನ್ನು ಒಗ್ಗೂಡಿಸುವ ಕಾಯಕಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದಡಿ ಇಟ್ಟಿದ್ದಾರೆ.

ಕುರುಬ ಸಮುದಾಯವನ್ನು ಎಸ್‌.ಟಿ ಪಟ್ಟಿಗೆ ಸೇರಿಸಬೇಕೆಂಬ ಹೋರಾಟಕ್ಕೆ ಸಚಿವ ಕೆ.ಎಸ್‌. ಈಶ್ವರಪ್ಪ, ಎಚ್‌.ಎಂ. ರೇವಣ್ಣ, ಎಚ್. ವಿಶ್ವನಾಥ್‌ ಮೊದಲಾದವರು ನೇತೃತ್ವ ವಹಿಸಿದ್ದಾರೆ.  ರಾಜಕೀಯ ಜೀವನದ ಈಚಿನ ವರ್ಷಗಳಲ್ಲಿ ‘ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ’ (ಅಹಿಂದ) ಸಮುದಾಯದವರ ನಾಯಕರಾಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ, ಅದೇ ವರ್ಚಸ್ಸು ಉಳಿಸಿಕೊಳ್ಳಲು ಬಯಸಿದ್ದಾರೆ. ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕೆಂಬ ಕುರುಬ ಸಮುದಾಯದವರು ನಡೆಸುತ್ತಿರುವ ಹೋರಾಟದಲ್ಲಿ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿಲ್ಲ. ಒಂದು ಜಾತಿಗೆ ಸೀಮಿತವಾಗದೇ, ತಳಸಮುದಾಯ ತಲ್ಲಣಗಳಿಗೆ ಧ್ವನಿಯಾಗಬೇಕೆಂಬ ಕಾರಣಕ್ಕೆ ಕುರುಬ ಸಮುದಾಯದವರ ಹೋರಾಟದಲ್ಲಿ ಅವರು ಪಾಲ್ಗೊಂಡಿಲ್ಲ ಎಂದೂ ಹೇಳಲಾಗುತ್ತಿದೆ.

ಕುರುಬರು, ಈಡಿಗರು, ಉಪ್ಪಾರರು, ಸವಿತಾ ಸಮಾಜದವರು, ನೇಕಾರರು, ಪರಿಶಿಷ್ಟ ಪಂಗಡಗಳಲ್ಲಿ ಬಲಗೈ ಮತ್ತು ಎಡಗೈ ಸಮುದಾಯದ ಉಪಪಂಗಡಗಳು ಹೀಗೆ ಎಲ್ಲರನ್ನೂ ಸೇರಿಸಿಕೊಂಡು ಮುಂದಡಿ ಇಡುವುದು ಸದ್ಯದ ಆಲೋಚನೆ. ಮುಂದಿನ ಸಮಾಲೋಚನಾ ಸಭೆಗಳಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು ಎಂದೂ ಮೂಲಗಳು ವಿವರಿಸಿವೆ.

ರಾಜ್ಯ ಬಜೆಟ್‌ ಅಧಿವೇಶನ ಮುಗಿಯುತ್ತಿದ್ದಂತೆ ಮೊದಲ ಹಂತದಲ್ಲಿ ನಾಲ್ಕು ವಿಭಾಗಗಳಲ್ಲಿ ಬೃಹತ್‌ ಸಮಾವೇಶಗಳನ್ನು ಆಯೋಜಿಸುವುದು ಈ ಹೋರಾಟದ ಭಾಗವಾಗಿದೆ.  ಈ ಉದ್ದೇಶದಿಂದ ಶಾಸಕರು, ಮಾಜಿ ಶಾಸಕರು, ಸಂಸದರು, ಮಾಜಿ ಸಂಸದರು, ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋಲು ಕಂಡ ಅಭ್ಯರ್ಥಿಗಳು, ಜಾತಿ, ಸಮುದಾಯಗಳ ಮುಖಂಡರ ಪೂರ್ವಭಾವಿ ಸಭೆಯನ್ನು ಅವರು ಶೀಘ್ರದಲ್ಲೇ ಕರೆಯಲಿದ್ದಾರೆ ಎಂದು ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ತಿಳಿಸಿವೆ.

ಇದೇ 6ರಂದು ನಡೆದ ತಮ್ಮ ಬೆಂಬಲಿಗರು, ಅಭಿಮಾನಿಗಳ ಸಭೆಯಲ್ಲಿ ಎಲ್ಲ ಶೋಷಿತ ಸಮುದಾಯದವರನ್ನು ಸಂಘಟಿಸಿ, ಅವರಿಗೆ ಧ್ವನಿಕೊಡುವ ಬಗ್ಗೆ ಚರ್ಚೆ ನಡೆದಿದೆ. ಈ ಸಭೆಯಲ್ಲಿ ಅಲಕ್ಷಿತ ಸಮುದಾಯಕ್ಕೆ ಸೇರಿದ 16ಕ್ಕೂ ಹೆಚ್ಚು ಶಾಸಕರು ಭಾಗಿಯಾಗಿದ್ದರು ಎಂದೂ ಮೂಲಗಳು ಹೇಳಿವೆ.

22ರಿಂದ ಪ್ರಕೃತಿ ಚಿಕಿತ್ಸೆ: ಸಿದ್ದರಾಮಯ್ಯ ಇದೇ 22ರಿಂದ 10 ದಿನ ಉಜಿರೆಯಲ್ಲಿರುವ ಧರ್ಮಸ್ಥಳದ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು