ಶನಿವಾರ, ಜೂನ್ 19, 2021
26 °C

ಲಸಿಕೆ ವಿಚಾರದಲ್ಲಿ ಕಾಂಗ್ರೆಸ್‌ನಿಂದ ರಾಜಕಾರಣ ಎಂದ ಎಚ್‌ಡಿಕೆ: ಸಿದ್ದರಾಮಯ್ಯ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುವುದಕ್ಕೆ ಕಾಂಗ್ರೆಸ್‌ ಕಾರಣ ಎಂದು ಹೇಳಿಕೆ ನೀಡಿರುವ ಜೆಡಿಎಸ್‌ ನಾಯಕ ಕುಮಾರಸ್ವಾಮಿ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಅವರು, ' ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಜನ ಹಿಂದೇಟು ಹಾಕುತ್ತಿರುವುದಕ್ಕೆ ಕಾಂಗ್ರೆಸ್ ಅಪಪ್ರಚಾರ ಕಾರಣ ಎಂದು ಆರೋಪಿಸುವ ಮೂಲಕ ಕುಮಾರಸ್ವಾಮಿ ತಮಗೆ ತಾವೇ ಗೋಲು ಹೊಡೆದುಕೊಂಡಿದ್ದಾರೆ. ಕಾಂಗ್ರೆಸ್ ಪ್ರಚಾರ ನಂಬಿ ನೀವು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮಾರ್ಚ್ 23ರ ವರೆಗೆ ಕಾದು ಕೂತಿದ್ದೇ?' ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದಾರೆ.

'ಸರ್ವರಿಗೂ ಉಚಿತ ವ್ಯಾಕ್ಸಿನ್ ಹಾಕುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೊತೆಗೂಡಿ ಎಚ್‌.ಡಿ.ದೇವೆಗೌಡ ಅವರು ಪ್ರಧಾನಿಗೆ ಪತ್ರ ಬರೆದಿದ್ದರು. ಎಚ್‌.ಡಿ.ಕುಮಾರಸ್ವಾಮಿ ಅವರು ಇಂತಹ ಬಾಲಿಷ ಹೇಳಿಕೆ ನೀಡುವ ಮೊದಲು ತಂದೆಯ ಸಲಹೆ‌ ಪಡೆಯುವುದು ಒಳ್ಳೆಯದು' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಲಸಿಕೆ ಹೆಸರಿನಲ್ಲಿ ಕಾಂಗ್ರೆಸ್‌ ರಾಜಕಾರಣ - ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ

ಇದೇ ವೇಳೆ ಲಸಿಕೆ ವಿಚಾರವಾಗಿ ಬಿಜೆಪಿ ವಿರುದ್ಧವೂ ಹರಿಹಾಯ್ದಿರುವ ಸಿದ್ದರಾಮಯ್ಯ, 'ಜನರು ಕೊರೊನಾ ವ್ಯಾಕ್ಸಿನ್ ಪಡೆಯಲು ಹಿಂಜರಿಯುತ್ತಿರುವುದಕ್ಕೆ ಕಾಂಗ್ರೆಸ್ ಅಪಪ್ರಚಾರ ಕಾರಣ ಎನ್ನುವ ಬಿಜೆಪಿಯ ಆರೋಪ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ನಡೆಸುತ್ತಿರುವ ಹತಾಶ ಪ್ರಯತ್ನ ಅಷ್ಟೆ. ವ್ಯಾಕ್ಸಿನ್ ಪಡೆಯಲು ಜನ ಕ್ಯೂನಲ್ಲಿದ್ದಾರೆ, ಮೊದಲು ಅವರಿಗೆ ಕೊಡಿ, ಆ ಮೇಲೆ ನಮ್ಮ ಕಡೆ ಬೊಟ್ಟು ಮಾಡಿ' ಎಂದು ಹೇಳಿದ್ದಾರೆ.

'ಕೊರೊನಾ ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ಹಂಚಿ ಎನ್ನುವುದೇ ನಮ್ಮ ಮೂಲ ಬೇಡಿಕೆ. ನಾವು ಲಸಿಕೆಯನ್ನು ಎಂದೂ ವಿರೋಧಿಸಿಲ್ಲ, ಅದರ ಸತ್ವಪರೀಕ್ಷೆಯ ಫಲಿತಾಂಶಕ್ಕಿಂತ ಮೊದಲು ಕೇವಲ ಪ್ರಚಾರಕ್ಕಾಗಿ ಬಳಕೆಗೆ ಬಿಡುಗಡೆ ಮಾಡಬಾರದೆಂಬ ತಜ್ಞರ ಅಭಿಪ್ರಾಯಕ್ಕೆ ಕಾಂಗ್ರೆಸ್‌ ಪಕ್ಷ ಸಹಮತ ವ್ಯಕ್ತಪಡಿಸಿತ್ತು' ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

'ಕೊರೊನಾ ಲಸಿಕೆಯನ್ನು ಕೊರೊನಾ ವಾರಿಯರ್‌ಗಳಿಗಾಗಿ ಬಿಡುಗಡೆಗೊಳಿಸಿದ್ದು ಜನವರಿ 18ರಂದು. ಪ್ರಧಾನಮಂತ್ರಿ ಮತ್ತು ಕೇಂದ್ರ ಆರೋಗ್ಯ ಸಚಿವರು ವ್ಯಾಕ್ಸಿನ್ ಪಡೆಯುವ ಧೈರ್ಯ ತೋರಿಸಿದ್ದು ಮಾರ್ಚ್ ಒಂದರಂದು. ಎಲ್ಲದರಲ್ಲಿಯೂ ನಾವೇ ಮೊದಲು ಎಂದು ಎದೆ ತಟ್ಟಿಕೊಳ್ಳುವ ನರೇಂದ್ರ ಮೋದಿ ಅವರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂಜರಿದದ್ದು ಯಾಕೆ?' ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ- ಲಸಿಕೆ ಜಟಾಪಟಿ | ಸಿದ್ದರಾಮಯ್ಯ ಎಸೆತಕ್ಕೆ ಸಿಕ್ಸರ್‌ ಕೊಡಬೇಕೆನಿಸಿದೆ: ಎಚ್‌ಡಿಕೆ

'ಬೇರೆಲ್ಲ ದೇಶಗಳ ಪ್ರಧಾನಿ/ಅಧ್ಯಕ್ಷರು ಕೊರೊನಾ ವಾರಿಯರ್‌ಗಳಂತೆ ಮೊದಲು ವ್ಯಾಕ್ಸಿನ್ ಹಾಕಿಸಿಕೊಂಡು ಜನರಿಗೆ ಧೈರ್ಯ ತುಂಬಿದ್ದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಮಾತ್ರ ಫಲಿತಾಂಶ ಕಾದು ನೋಡಿ ವ್ಯಾಕ್ಸಿನ್ ಹಾಕಿಸಿಕೊಂಡರು. 56 ಇಂಚಿನ ಎದೆಯ ಧೈರ್ಯ ಎಂದರೆ ಇದೇನಾ?' ಎಂದು ವ್ಯಂಗ್ಯವಾಡಿದ್ದಾರೆ.

'ಭಾರತದಲ್ಲಿ ಎರಡೂ ಡೋಸ್ ವ್ಯಾಕ್ಸಿನ್ ಹಾಕಿಸಿಕೊಂಡವರು 4 ಕೋಟಿ ಜನ ಮಾತ್ರ, ಕರ್ನಾಟಕದಲ್ಲಿ ಕೇವಲ 25 ಲಕ್ಷ ಜನ. ಇದಕ್ಕೆ ವ್ಯಾಕ್ಸಿನ್ ಕೊರತೆಯೇ ಕಾರಣ ಹೊರತು ಜನರ ಹಿಂಜರಿಕೆ ಅಲ್ಲ. ಜನರ ಬೇಡಿಕೆಗೆ ತಕ್ಕಂತೆ ವ್ಯಾಕ್ಸಿನ್ ಪೂರೈಸಲಾಗದ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಈಗ ವಿರೋಧ ಪಕ್ಷಗಳನ್ನು ಹಳಿಯುವುದು ತಮಾಷೆಯಾಗಿದೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

'ಮೊದಲು ಕೊರೊನಾ ಕಾಣಿಸಿಕೊಂಡಾಗ ತಟ್ಟೆ ಬಡಿಯಿರಿ, ದೀಪ ಹಚ್ಚಿರಿ ಎಂದು ಪ್ರಧಾನಿಯವರು ಕರೆ ನೀಡಿದಾಗ ಇಡೀ ದೇಶ ಕುಣಿದಾಡಿತ್ತು. ಆದರೆ ವ್ಯಾಕ್ಸಿನ್ ವಿಷಯದಲ್ಲಿ ಮಾತ್ರ ಜನ ಕಾಂಗ್ರೆಸ್ ಮಾತಿಗೆ ತಲೆದೂಗಿದ್ದಾರೆ ಎಂದರೆ ದೇಶದ ಜನ ಈಗ ನರೇಂದ್ರ ಮೋದಿ ಮಾತಿಗೆ ಕಿವಿಗೊಡಲ್ಲ, ಕಾಂಗ್ರೆಸ್ ಮಾತಿಗೆ ಬೆಲೆಕೊಡುತ್ತಾರೆ ಎಂದರ್ಥವೇ?' ಎಂದು ವಿರೋಧ ಪಕ್ಷದ ನಾಯಕ ಪ್ರಶ್ನಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು