ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ ಅಂಕ ಕಡಿತ ಸಂವಿಧಾನಬಾಹಿರ: ಸಿದ್ದರಾಮಯ್ಯ

‘ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸರ್ಕಾರದ ಸವಾರಿ’ –ಸಿದ್ದರಾಮಯ್ಯ ಟೀಕೆ
Last Updated 11 ಮಾರ್ಚ್ 2022, 16:03 IST
ಅಕ್ಷರ ಗಾತ್ರ

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆಗಾಗಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸುವ ಪರೀಕ್ಷೆಯಲ್ಲಿನ ವ್ಯಕ್ತಿತ್ವ ಪರೀಕ್ಷೆಯ (ಸಂದರ್ಶನ) ಅಂಕಗಳನ್ನು 25ಕ್ಕೆ ಇಳಿಸುವ ರಾಜ್ಯ ಸರ್ಕಾರದ ತೀರ್ಮಾನ ಸಂವಿಧಾನಬಾಹಿರ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಕುರಿತು ಪತ್ರ ಬರೆದಿರುವ ಅವರು, ‘ಸಂದರ್ಶನದ ಅಂಕ ಕಡಿತದ ನಿರ್ಧಾರ ಮತ್ತು ಅದಕ್ಕೆ ಪೂರಕವಾಗಿ ಹೊರಡಿಸಿರುವ ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು. ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಒಟ್ಟು ಅಂಕದ ಶೇಕಡ 12.5ರಷ್ಟು ಅಂಕಗಳನ್ನು ಸಂದರ್ಶನಕ್ಕೆ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಸರ್ಕಾರಿ ಹುದ್ದೆಗಳ ಭರ್ತಿಗೆ ನಡೆಸುವ ಆಯ್ಕೆ ಪ್ರಕ್ರಿಯೆಯಲ್ಲಿ ಸಂದರ್ಶನದ ಅಂಕಗಳ ಪ್ರಮಾಣವು ಒಟ್ಟು ಅಂಕಗಳ ಶೇಕಡ 12.2ರಷ್ಟಿರಬೇಕು ಎಂದು ಅಶೋಕ್‌ ಕುಮಾರ್‌ ಯಾದವ್‌ ಮತ್ತು ಇತರರು ಹಾಗೂ ಹರ್ಯಾಣ ಸರ್ಕಾರದ ಮಧ್ಯದ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ 1987ರಲ್ಲಿ ತೀರ್ಪು ನೀಡಿತ್ತು. ಆದರೆ, ರಾಜ್ಯ ಸರ್ಕಾರವು ಸಂದರ್ಶನದ ಅಂಕಗಳನ್ನು ಶೇ 2ಕ್ಕೆ ಇಳಿಸಿದೆ. ಇದು ಸಮಂಜಸವಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಆಯ್ಕೆಯಾಗುವವರು 30 ವರ್ಷಗಳಿಗೂ ಹೆಚ್ಚು ಕಾಲ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಬೇಕು. ಅವರು ಅನೇಕ ವಿಚಾರಗಳ ಕುರಿತು ಜ್ಞಾನ ಹೊಂದಿರಬೇಕಾಗುತ್ತದೆ. ಅಭ್ಯರ್ಥಿಯ ವ್ಯಕ್ತಿತ್ವ ಅರಿಯಲು ಸಂದರ್ಶನವೇ ಮುಖ್ಯ. ಇತರ ರಾಜ್ಯಗಳು ಸಂದರ್ಶನಕ್ಕೆ 100ರಿಂದ 275 ಅಂಕಗಳವರೆಗೂ ನಿಗದಿಪಡಿಸಿವೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ 25 ಅಂಕ ನಿಗದಿಪಡಿಸಿರುವುದರಿಂದ ಪ್ರತಿಕೂಲ ಪರಿಣಾಮಗಳಾಗಲಿವೆ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳು ಸಾಂವಿಧಾನಿಕ ಸಂಸ್ಥೆಗಳು. ಕೆಪಿಎಸ್‌ಸಿ ವಿಚಾರದಲ್ಲಿ ರಾಜ್ಯ ಸರ್ಕಾರ ಸರ್ವಾಧಿಕಾರದಿಂದ ನಡೆದುಕೊಂಡಿದೆ. ಆಯೋಗದ ಜತೆ ಸಮಾಲೋಚನೆ ನಡೆಸದೇ ಸಂದರ್ಶನದ ಅಂಕಗಳನ್ನು ಕಡಿತಗೊಳಿಸುವ ನಿರ್ಧಾರ ಮಾಡಲಾಗಿದೆ. ರಾಜ್ಯ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸವಾರಿ ಮಾಡುತ್ತಿದೆ ಎಂಬ ಆರೋಪಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದಿದ್ದಾರೆ.

‘ಕೆಪಿಎಸ್‌ಸಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಪಾರದರ್ಶಕತೆ ತರಲು ನಮ್ಮ ಸರ್ಕಾರ ಇದ್ದಾಗ ಪ್ರಯತ್ನಿಸಿದ್ದೆವು. ಪಿ.ಸಿ. ಹೋಟಾ ಸಮಿತಿ ಶಿಫಾರಸುಗಳನ್ನು ಸಮಪರ್ಕವಾಗಿ ಅನುಷ್ಠಾನಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡಬೇಕಿತ್ತು. ಅದರ ಬದಲಿಗೆ ಸಂದರ್ಶನದ ಅಂಕ ಕಡಿತಕ್ಕೆ ಹೊರಟಿರುವುದು ಸರಿಯಲ್ಲ. ಇದರ ದುಷ್ಪರಿಣಾಮ ರಾಜ್ಯದ ಭವಿಷ್ಯದ ಮೇಲೆ ಆಗಲಿದೆ’ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT