ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರ ಪುಸ್ತಕ ಪ್ರಕಟಿಸಿದಾಗ ಬಾಯಿ ಮುಚ್ಚಿದ್ದೇಕೆ: ಸಿದ್ದರಾಮಯ್ಯ

Last Updated 21 ಜನವರಿ 2022, 16:39 IST
ಅಕ್ಷರ ಗಾತ್ರ

ಬೆಂಗಳೂರು: ‘ಜಗದೀಶ ಶೆಟ್ಟರ್‌ ನೇತೃತ್ವದ ಬಿಜೆಪಿ ಸರ್ಕಾರ ಟಿಪ್ಪು ಸುಲ್ತಾನ್‌ ಅವರನ್ನು ಹಾಡಿ, ಹೊಗಳಿ ಗ್ರಂಥ ಪ್ರಕಟಿಸಿದ್ದಾಗ ಬಾಯಿ ಮುಚ್ಚಿಕೊಂಡಿದ್ದೇಕೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ಕುಮಾರ್‌ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ಗೆ ಟಿಪ್ಪು ಸುಲ್ತಾನ್‌ ಸ್ತಬ್ಧಚಿತ್ರ ಕಳುಹಿಸಿದ್ದನ್ನು ಟೀಕಿಸಿರುವ ಸಚಿವರಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಬಿಜೆಪಿ ಸರ್ಕಾರ ಪ್ರಕಟಿಸಿದ್ದ ಟಿಪ್ಪು ಸುಲ್ತಾನ್‌ಕುರಿತ ಗ್ರಂಥ ಈಗಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗ್ರಂಥಾಲಯದಲ್ಲಿದೆ. ಇದು ಇಲಾಖೆ ಸಚಿವರಾಗಿರುವ ಸುನೀಲ್‌ಕುಮಾರ್‌ ಗಮನಕ್ಕೆ ಬಂದಿಲ್ಲವೆ? ಯಾಕೆ ಈ ಆತ್ಮವಂಚನೆ?’ ಎಂದು ಕೇಳಿದ್ದಾರೆ.

‘2017ರಲ್ಲಿ ಕರ್ನಾಟಕ ವಿಧಾನಮಂಡಲದ ವಜ್ರ ಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ‘ಟಿಪ್ಪು ಸುಲ್ತಾನ್‌ ಅವರನ್ನು ಸ್ವಾತಂತ್ರ್ಯ ಯೋಧ’ ಎಂದು ಹಾಡಿ ಹೊಗಳಿದ್ದಾಗ ಸುನೀಲ್‌ಕುಮಾರ್‌ ಮತ್ತು ಬಿಜೆಪಿಯ ನಾಯಕರು ಎಲ್ಲಿ ಅಡಗಿಕೊಂಡಿದ್ದರು’ ಎಂದೂ ಪ್ರಶ್ನಿಸಿದ್ದಾರೆ.

‘ನಾನು ಮುಖ್ಯಮಂತ್ರಿಯಾಗಿದ್ದಾಗ 2014ರಲ್ಲಿ ಗಣರಾಜ್ಯೋತ್ಸವ ಪರೇಡ್‌ಗೆ ಟಿಪ್ಪು ಸುಲ್ತಾನ್‌ ಸ್ತಬ್ಧಚಿತ್ರ ಕಳುಹಿಸಿದ್ದು ನಿಜ. ಸುನೀಲ್‌ಕುಮಾರ್‌ ಅವರಂತಹ ಟಿಪ್ಪು ವಿರೋಧಿಗಳು ಏಕೆ ಆಗ ಅದನ್ನು ವಿರೋಧಿಸಲಿಲ್ಲ’ ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಸ್ತಬ್ಧಚಿತ್ರದ ವಿವಾದ ಹುಟ್ಟಿಕೊಂಡ ದಿನದಿಂದ ನರೇಂದ್ರ ಮೋದಿ ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಸುಳ್ಳುಗಳ ಮೂಟೆ ಉರುಳಿಸುತ್ತಿರುವ ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ, ಪ್ರಲ್ಹಾದ ಜೋಶಿಯಂತಹವರು ನಾರಾಯಣ ಗುರುಗಳನ್ನು ತಾವು ಒಪ್ಪುವುದಿಲ್ಲ ಎಂಬ ಒಂದು ಸತ್ಯವನ್ನು ಏಕೆ ಹೇಳಬಾರದು ಎಂದು ಸವಾಲು ಹಾಕಿದ್ದಾರೆ.

‘ನಾರಾಯಣ ಗುರುಗಳು ನನ್ನ ಸೈದ್ಧಾಂತಿಕ ಗುರುಗಳು. ಆ ಕಾರಣಕ್ಕಾಗಿಯೇ ನಾನು ಮುಖ್ಯಮಂತ್ರಿಯಾಗಿದ್ದಾಗ ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರವೇ ಆಚರಿಸುವ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT