ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚ್‌ ಪ್ರಕರಣವೇನು ₹ 300 ಕೋಟಿ ಅವ್ಯವಹಾರವೇ?: ಸಿದ್ದರಾಮಯ್ಯ

Last Updated 5 ಮೇ 2022, 9:36 IST
ಅಕ್ಷರ ಗಾತ್ರ

ಮೈಸೂರು: ‌‘ಮತ್ತೆ ವಾಚ್‌ ಪ್ರಕರಣ ಕೆದಕುತ್ತಿದ್ದಾರೆ. ಕಳ್ಳತನದ ವಾಚ್‌ ಎಂದು ಕುಮಾರಸ್ವಾಮಿ ಹೇಳಿದ್ದರಿಂದ ಪ್ರಕರಣವನ್ನು ಆಗಲೇ ಎಸಿಬಿಗೆ ವಹಿಸಿದ್ದೆ. ತನಿಖೆಯಾಗಿ ನನಗೆ ವಾಚ್‌ ಕೊಟ್ಟ ದುಬೈನ ಡಾ.ವರ್ಮಾ ಎಂಬುವರು ಪ್ರಮಾಣಪತ್ರ ಸಲ್ಲಿಸಿ ರಸೀದಿ ಕೂಡ ನೀಡಿದ್ದು, ಪ್ರಕರಣ ಇತ್ಯರ್ಥವಾಗಿದೆ. ಸರ್ಕಾರಕ್ಕೇ ವಾಚ್‌ ಒಪ್ಪಿಸಿದ್ದೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಿದ್ದರಾಮಯ್ಯ ವಾಚ್‌ ಕಟ್ಟಿಕೊಂಡಿರಲಿಲ್ವಾ ಎಂದು ಈಗ ಪ್ರತಿವಾದ ಮಾಡಿದರೆ ಹೇಗೆ? ಆ ವಾಚ್‌ಗೆ ₹ 35 ಲಕ್ಷದಿಂದ ₹ 40 ಲಕ್ಷ ಇರಬಹುದು. ಈಗ ನಡೆದಿರುವ ₹ 300 ಕೋಟಿ ಅವ್ಯವಹಾರವೇ ಅದು? ಹಾಗೆಂದು ನಾನೇನೂ ಸಮರ್ಥಿಸಿಕೊಳ್ಳುತ್ತಿಲ್ಲ’ ಎಂದರು.

‘ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸರ್ಕಾರ ಶಾಮೀಲಾಗಿದ್ದು, ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದು ಮತ್ತೊಮ್ಮೆ ಆಗ್ರಹಿಸಿದರು.

‘ಹಗರಣದಲ್ಲಿ ಮಧ್ಯವರ್ತಿಗಳನ್ನು ಮಾತ್ರ ಬಂಧಿಸಲಾಗಿದೆ. ಎಡಿಜಿಪಿ, ಡಿವೈಎಸ್ಪಿಯನ್ನು ವರ್ಗಾವಣೆ ಮಾಡಲಾಗಿದೆ. ಅಕ್ರಮ ನಡೆದಿಲ್ಲವೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸದನದಲ್ಲಿ ಹೇಳಿ ದಾರಿ ತಪ್ಪಿಸಿದ್ದಾರೆ. ಈಗ ನಡೆದಿರುವುದೇನು? ಕಳ್ಳರು ಯಾವತ್ತೂ ಸತ್ಯ ಒಪ್ಪಿಕೊಳ್ಳುವುದಿಲ್ಲ. ಅಧಿಕಾರದಲ್ಲಿರಲು ಇವರು ಲಾಯಕ್ಕಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಸಿಐಡಿಯವರು ಸಚಿವರಾದ ಆರಗ ಜ್ಞಾನೇಂದ್ರ, ಡಾ.ಅಶ್ವತ್ಥನಾರಾಯಣ ಅವರನ್ನು ಕರೆದು ವಿಚಾರಣೆ ನಡೆಸುತ್ತಾರಾ? ಎಡಿಜಿಪಿಯನ್ನು ತನಿಖೆಗೆ ಒಳಪಡಿಸುತ್ತಾರಾ’ ಎಂದು ಪ್ರಶ್ನಿಸಿದರು.

‘ಹಿಂದೆ ಯಡಿಯೂರಪ್ಪ, ಈಗ ಬಸವರಾಜ ಬೊಮ್ಮಾಯಿ ಜನರಿಂದ ಆಯ್ಕೆಯಾದ ಮುಖ್ಯಮಂತ್ರಿ ಅಲ್ಲ. ಬರೀ ನೇಮಕವಾದ ಮುಖ್ಯಮಂತ್ರಿಗಳು. ಶಾಸಕರನ್ನು ಖರೀದಿಸಿ ಸರ್ಕಾರ ಮಾಡಿಕೊಂಡರು’ ಎಂದು ಟೀಕಾ ಪ್ರಹಾರ ನಡೆಸಿದರು.

‘ಜಾರ್ಜ್‌ ಅವರಿಗೆ ಸಂಬಂಧಿಸಿದ ಎರಡೂ ಪ್ರಕರಣ ಸಿಬಿಐಗೆ ಹೋಗಿದ್ದವು. ಎರಡೂ ಪ್ರಕರಣಗಳಲ್ಲಿ ಕ್ಲೀನ್‌ ಚಿಟ್‌ ನೀಡಲಾಗಿದೆ. ಆಗ ಯಾರ ಸರ್ಕಾರವಿತ್ತು? ಸತ್ಯವಿದ್ದರೆ ಕ್ಲೀನ್‌ ಚಿಟ್‌ ನೀಡುತ್ತಿದ್ದರಾ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT