ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಿಂದಲೇ ಕಣಕ್ಕೆ: ಸಿದ್ದರಾಮಯ್ಯ

ಬೆಂಗಳೂರು: ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಬಾದಾಮಿಯಿಂದಲೇ ಕಣಕ್ಕಿಳಿಯುತ್ತೇನೆ. ನಿಮ್ಮ ಅಭಿಪ್ರಾಯ ಪಡೆದೇ ಬೇರೆ ಯಾವುದೇ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ತಾವು ಪ್ರತಿನಿಧಿಸುತ್ತಿರುವ ಕ್ಷೇತ್ರದ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಬಾದಾಮಿ ಕ್ಷೇತ್ರದಿಂದ ನೂರಾರು ಸಂಖ್ಯೆಯಲ್ಲಿ ಬಂದಿದ್ದ ಅಭಿಮಾನಿಗಳು ಮಂಗಳವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬಾದಾಮಿ ಕ್ಷೇತ್ರದಿಂದಲೇ ಮತ್ತೆ ಸ್ಪರ್ಧಿಸುವಂತೆ ಮನವಿ ಮಾಡಿದರು. ಬಾದಾಮಿಯಿಂದಲೇ ಗೆದ್ದು ಶಾಸಕರಾಗಬೇಕು. ಮುಖ್ಯಮಂತ್ರಿಯೂ ಆಗಬೇಕು ಎಂದೂ ಹಾರೈಸಿದರು.
‘ತಮ್ಮ ಕ್ಷೇತ್ರದಿಂದ ಸ್ಪರ್ಧಿಸುವಂತೆ ಹಲವರು ಅಭಿಮಾನದಿಂದ ಕರೆಯುತ್ತಿದ್ದಾರೆ. ಆದರೆ, ಬಾದಾಮಿ ಕ್ಷೇತ್ರದ ಜನರು ಒಳ್ಳೆಯವರು. ಚುನಾವಣೆ ವೇಳೆ ನಾಮಪತ್ರ ಸಲ್ಲಿಸಿ ಒಂದು ದಿನ ಮಾತ್ರ ಪ್ರಚಾರ ಕೈಗೊಂಡಿದ್ದೆ. ಆದರೂ ಕ್ಷೇತ್ರದ ಮತದಾರರು ಅಭಿಮಾನದಿಂದ ಗೆಲ್ಲಿಸಿದ್ದಾರೆ. ಅವರ ಈ ಋಣ ಮರೆಯಲು ಸಾಧ್ಯವೇ ಇಲ್ಲ’ ಎಂದರು.
‘ಕ್ಷೇತ್ರದ ಶಾಸಕನಾಗಿ ನನ್ನ ಕರ್ತವ್ಯ ನಿಭಾಯಿಸುತ್ತಿದ್ದೇನೆ. ಯಾವುದೇ ಕಾರಣಕ್ಕೂ ಅಭಿವೃದ್ಧಿ ವಿಷಯದಲ್ಲಿ ಹಿಂದೆ ಬೀಳುವುದಿಲ್ಲ. ಸಾವಿರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳು ಕ್ಷೇತ್ರದಲ್ಲಿ ನಡೆಯುತ್ತಿವೆ. ಶಾಶ್ವತ ಕುಡಿಯುವ ನೀರಿನ ಯೋಜನೆ ಹಾಗೂ ಕೆರೂರು ಏತ ನೀರಾವರಿ ಯೋಜನೆ ಇದರಲ್ಲಿ ಪ್ರಮುಖವಾದದ್ದು. ಇನ್ನೂ ಎರಡು ವರ್ಷಗಳ ಅವಧಿ ಇದೆ. ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಇನ್ನಷ್ಟು ಶ್ರಮ ವಹಿಸುತ್ತೇನೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.