ಮಂಗಳವಾರ, ಮಾರ್ಚ್ 28, 2023
33 °C
ಡ್ರಗ್ಸ್‌ ಹಗರಣದಲ್ಲಿ ಪೊಲೀಸರು ಸರ್ಕಾರದ ಕೈಗೊಂಬೆ– ಸಿದ್ದರಾಮಯ್ಯ ಆರೋಪ

ಡ್ರಗ್ಸ್‌ ಹಗರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲು ಸಿದ್ದರಾಮಯ್ಯ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಡ್ರಗ್ಸ್ ಹಗರಣದಲ್ಲಿ ಪೊಲೀಸರು ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಪ್ರಮುಖ ಆರೋಪಿಗಳನ್ನು ಬಂಧಿಸಿದಂತೆ ಅವರಿಗೆ ಸರ್ಕಾರ ಒತ್ತಡ ಹೇರುತ್ತಿದೆ. ಆದ್ದರಿಂದ, ಇಡೀ ಹಗರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ, ‘ಹೈಕೋರ್ಟ್‍ನ ಹಾಲಿ ನ್ಯಾಯಮೂರ್ತಿಯ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು’ ಎಂದು ಆಗ್ರಹಿಸಿದರು.

‘ಪ್ರಧಾನಿ ನರೇಂದ್ರ ಮೋದಿಯವ ಹುಟ್ಟುಹಬ್ಬಕ್ಕೆ ನಾನು ಶುಭಾಶಯ ಕೋರುತ್ತೇನೆ. ಆದರೆ, ಹುಟ್ಟುಹಬ್ಬಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪತ್ರಿಕೆಗಳಿಗೆ ಪುಟಗಟ್ಟಲೆ ಜಾಹೀರಾತು ನೀಡಲಾಗಿದೆ. ಮೋದಿಯವರು ಭಾರಿ ಸಾಧನೆ ಮಾಡಿದ್ದಾರೆ ಎಂದು ಜಾಹೀರಾತಿನಲ್ಲಿ ಬಿಂಬಿಸಲಾಗಿದೆ’ ಎಂದು ಟೀಕಿಸಿದರು.

‘ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ನೋಟು ಅಮಾನ್ಯ, ಅವೈಜ್ಞಾನಿಕ ಜಿಎಸ್‌ಟಿ, ಕೆಟ್ಟ ಹಣಕಾಸು ನೀತಿಯಿಂದ ದೇಶ ಆರ್ಥಿಕವಾಗಿ ಕೆಳಮಟ್ಟಕ್ಕೆ ಹೋಗಿದೆ. ಜಿಡಿಪಿಯೂ ಭಾರಿ ಕುಸಿತ ಕಂಡಿದೆ. ಇದರಿಂದ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಕೃಷಿ ವಲಯ ಹೊರತುಪಡಿಸಿ ಬೇರೆ ಎಲ್ಲ ಕ್ಷೇತ್ರಗಳ ಬೆಳವಣಿಗೆ ನಕಾರಾತ್ಮಕವಾಗಿದೆ’ ಎಂದರು.

‘ಹೊಸದಾಗಿ ಉದ್ಯೋಗ ಕೊಡುವುದಿರಲಿ, ಇರುವ ಉದ್ಯೋಗಗಳೂ ಕಡಿತವಾಗುತ್ತಿವೆ. ಸೂಕ್ಷ್ಮ, ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು ಮುಚ್ಚಿವೆ. ನಿರುದ್ಯೋಗ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಯುವಕರು ಜೀವನವೇ ಬೇಡ ಎನ್ನುವ ಹಂತ ತಲುಪಿದ್ದಾರೆ. ಪ್ರತಿವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಪ್ರಧಾನಿ ನೀಡಿದ್ದ ಭರವಸೆ ಹುಸಿಯಾಗಿದೆ. ಸ್ವಾಮಿನಾಥನ್ ವರದಿ ಜಾರಿಯಾಗದ ಪರಿಣಾಮ ರೈತರೂ ಕಷ್ಟಕ್ಕೆ ಸಿಲುಕಿದ್ದಾರೆ’ ಎಂದರು.

‘ನರೇಂದ್ರಮೋದಿ ಭಾರಿ ಬದಲಾವಣೆ ತರಲಿದ್ದಾರೆ ಎಂದು ಯುವಕ, ಯುವತಿಯರು ಅವರನ್ನು ಬೆಂಬಲಿಸಿದರು. ಆದರೆ, ಈಗ ಉದ್ಯೋಗ ಸಿಗದೆ ಪರದಾಡುತ್ತಿದ್ದಾರೆ. ಹೀಗಾಗಿ, ಅವರು ಮೋದಿಯವರ ಹುಟ್ಟುಹಬ್ಬವನ್ನು ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿರುವುದು ಸರಿಯಾಗಿದೆ’ ಎಂದು ಸಿದ್ದರಾಮಯ್ಯ, ‘ಯು ಜನತೆ ನಿರಾಶರಾಗುವುದು, ಭ್ರಮನಿರಸನಗೊಳ್ಳುವುದು ಬೇಡ’ ಎಂದು ಮನವಿ ಮಾಡಿದರು.

‘ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಈಗ 51 ಲಕ್ಷ ಮೀರಿದೆ. ಸೋಂಕಿನಲ್ಲಿ ಭಾರತ ಜಗತ್ತಿನಲ್ಲೇ ಎರಡನೇ ಸ್ಥಾನಕ್ಕೆ ಬಂದಿದೆ. ಇದು ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆ’ ಎಂದೂ ವ್ಯಂಗ್ಯವಾಡಿದರು.

ಇಬ್ಬರು ಮುಖ್ಯಮಂತ್ರಿಗಳು: ‘ರಾಜ್ಯದಲ್ಲಿ ಯಡಿಯೂರಪ್ಪ ಜೊತೆಗೆ ಪುತ್ರ ವಿಜಯೇಂದ್ರ ಕೂಡಾ ಪರ್ಯಾಯ ಮುಖ್ಯಮಂತ್ರಿಯಂತೆ ಕೆಲಸ ಮಾಡುತ್ತಿದ್ದಾರೆ. ವೈದ್ಯರ ಜೊತೆ ಸಭೆ ನಡೆಸಲು ಬಿಜೆಪಿಯಲ್ಲಿ ಬೇರೆ ಪದಾಧಿಕಾರಿಗಳು ಇರಲಿಲ್ಲವೇ. ಮಾಧ್ಯಮಗಳು ಜನರ ಧ್ವನಿಯಾಗಿ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಹುಳುಕು, ಸ್ಥಗಿತಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಬೆಳಕು ಚೆಲ್ಲಬೇಕು’ ಎಂದರು.

‘ನಮ್ಮ ಸರ್ಕಾರ ಇದ್ದಾಗ ಆರಂಭವಾದ ಶಿವಾನಂದ ವೃತ್ತದ ಉಕ್ಕಿನ ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ₹ 53 ಸಾವಿರ ಕೋಟಿ ಸಾಲ ಪಡೆಯುವುದಾಗಿ ಸರ್ಕಾರ ಬಜೆಟ್‍ನಲ್ಲಿ ಹೇಳಿದೆ. ಇದರ ಜೊತೆಗೆ ₹ 33 ಸಾವಿರ ಕೋಟಿ ಸಾಲ ಪಡೆಯಲು ನಿರ್ಧರಿಸಿದೆ. ಹೀಗಾದರೆ, ರಾಜ್ಯ ಉಳಿಯುವುದೇ. ಕೊನೆಗೆ ಬಡ್ಡಿ, ಸಾಲ ತೀರಿಸಲು ಮಾತ್ರ ಹಣ ಇರುತ್ತದೆಯೇ ಹೊರತು ಅಭಿವೃದ್ಧಿ ಎಂಬುದು ಶೂನ್ಯವಾಗುತ್ತದೆ. ರಸ್ತೆ, ನೀರಾವರಿ, ಸಮಾಜ ಕಲ್ಯಾಣ ಇಲಾಖೆಗೆ ಕೊಡಲು ಅನುದಾನವೇ ಇರುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.

‘ಬೆಂಗಳೂರಿನ ಚಿತ್ರಣವನ್ನೇ ಬದಲಾವಣೆ ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದರು. ಅನುದಾನವೇ ಇಲ್ಲದ ಮೇಲೆ ಚಿತ್ರಣವನ್ನು ಅವರು ಹೇಗೆ ಬದಲಾವಣೆ ಮಾಡುವರೋ ತಿಳಿಯದು’ ಎಂದರು.

‘ನೀವು ಜನರ ಬಳಿಗೆ ಹೋಗಿ ಬಡಿಗೆ ತೆಗೆದುಕೊಂಡು ಹೊಡೆಯುತ್ತಾರೆ ಎಂದು ವಿರೋಧ ಪಕ್ಷದ ಸ್ಥಾನದಲ್ಲಿದ್ದಾಗ ಯಡಿಯೂರಪ್ಪ ನಮಗೆ ಹೇಳುತ್ತಿದ್ದರು. ಆದರೆ, ನಮಗೆ ಯಾರೂ ಹೊಡೆಯಲಿಲ್ಲ. ಈಗ ಆಡಳಿತ ನಡೆಸುತ್ತಿರುವವರು ಏನಾದರೂ ಜನರ ಬಳಿಗೆ ಹೋದರೆ ಬಡಿಗೆ ಏಟು ಬೀಳುವುದು ಖಚಿತ’ ಎಂದರು.

‘ಬೆಂಗಳೂರಿನ ಜನಸಂಖ್ಯೆ 1.10 ಕೋಟಿ. ಕೇವಲ ವಲಯಗಳನ್ನು ಮಾಡಿ ಆಯುಕ್ತರ ಹುದ್ದೆಯನ್ನು ಮುಖ್ಯ ಆಯುಕ್ತರ ಹುದ್ದೆ ಎಂದು ಬದಲಾಯಿಸಿದರೆ ಮಹಾನಗರ ಅಭಿವೃದ್ಧಿ ಆಗುವದೇ. ಪ್ರತಿವರ್ಷ ಮಳೆ ಬರುತ್ತದೆ. ಈವರೆಗೆ ರಾಜ ಕಾಲುವೆಗಳ ದುರಸ್ತಿ ಆಗಿಲ್ಲ. ಪಾಲಿಕೆ ಆಸ್ತಿಯನ್ನು ಅಡಮಾನ ಇಟ್ಟವರು ಯಾರು’ ಎಂದು ಪ್ರಶ್ನಿಸಿದ ಅವರು, ‘ಬಿಜೆಪಿಯವರಿಂದ ಬೆಂಗಳೂರು ಅಭಿವೃದ್ಧಿ ಅಸಾಧ್ಯ. ಕೇವಲ ಭಾಷಣ ಮತ್ತು ಭ್ರಷ್ಟಾಚಾರವನ್ನು ಮಾತ್ರ ಅವರಿಂದ ನಿರೀಕ್ಷೆ ಮಾಡಬಹುದು’ ಎಂದು ಟೀಕಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು