ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಶ್ವೇತಪತ್ರ ಹೊರಡಿಸಲು ಸಿದ್ದರಾಮಯ್ಯ ಆಗ್ರಹ

Last Updated 27 ಮಾರ್ಚ್ 2021, 19:01 IST
ಅಕ್ಷರ ಗಾತ್ರ

ಬೆಂಗಳೂರು: 'ಕೊರೊನಾ ಸೋಂಕು, ಸಾವು, ಚಿಕಿತ್ಸೆ ಮತ್ತು ನೊಂದ ಕುಟುಂಬಗಳಿಗೆ ನೀಡಿರುವ ಪರಿಹಾರದ ಬಗ್ಗೆ ರಾಜ್ಯ ಸರ್ಕಾರ ತಕ್ಷಣ ಶ್ವೇತಪತ್ರ ಹೊರಡಿಸಬೇಕು' ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, 'ಕೊರೊನಾವನ್ನು ಔಷಧಿ-ಚಿಕಿತ್ಸೆಯಿಂದ ಗೆಲ್ಲಬೇಕೇ ಹೊರತು ಸುಳ್ಳುಗಳಿಂದಲ್ಲ' ಎಂದು ಕುಟುಕಿದ್ದಾರೆ. ‘ಸುಳ್ಳು ಹೇಳಿರುವುದು ಕೊರೊನಾ ಸಾವಿನ ಬಗ್ಗೆ ಮಾತ್ರ ಅಲ್ಲ, ಔಷಧಿ, ಮಾಸ್ಕ್, ಸ್ಯಾನಿಟೈಸರ್ ಪಿಪಿ ಕಿಟ್‌ಗಳಿಂದ ಹಿಡಿದು ಆಸ್ಪತ್ರೆಗಳ ಹಾಸಿಗೆ ಖರೀದಿವರೆಗೆ ಎಲ್ಲದರಲ್ಲಿಯೂ ನಡೆದಿರುವ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸುಳ್ಳು ಹೇಳುತ್ತಲೇ ಇದ್ದಾರೆ. ತಪ್ಪು ತಿದ್ದಿಕೊಳ್ಳದೆ ಎಲ್ಲವನ್ನು ಸಮರ್ಥಿಸಿಕೊಂಡ ಸರ್ಕಾರದ ಲಜ್ಜೆಗೇಡಿತನದ ಫಲವನ್ನು ರಾಜ್ಯದ ಜನ ಅನುಭವಿಸಬೇಕಾಗಿದೆ' ಎಂದಿದ್ದಾರೆ.

‘ಆರೋಗ್ಯ ಇಲಾಖೆ ದಾಖಲೆ ಪ್ರಕಾರ 2020ರ ಡಿಸೆಂಬರ್‌ವರೆಗಿನ ಕೊರೊನಾ ಸಾವಿನ ಸಂಖ್ಯೆ 12,090. ರಾಜ್ಯ ಯೋಜನಾ ಮತ್ತು ಅಂಕಿಅಂಶ ಇಲಾಖೆ ಪ್ರಕಾರ ಇದೇ ಅವಧಿಯಲ್ಲಿ ಕೊರೊನಾ ಸಾವಿನ ಸಂಖ್ಯೆ 22,320. ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರೇ ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು' ಎಂದೂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರಾಜಕೀಯಕ್ಕಾಗಿ ಸುಳ್ಳು ಹೇಳಬೇಡಿ–ಸುಧಾಕರ್

‘ಜವಾಬ್ದಾರಿ ಸ್ಥಾನದಲ್ಲಿರುವವರು ರಾಜಕೀಯ ಲಾಭಕ್ಕಾಗಿ ಸುಳ್ಳು ಆಪಾದನೆ ಮಾಡುವುದು ಸರಿಯಲ್ಲ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿರುವ ಅವರು, ‘ಈ ರೀತಿ ಆರೋಪಗಳನ್ನು ಮಾಡುವುದು ಕೊರೊನಾ ಯೋಧರಿಗೆ ಮಾಡುವ ಅಪಮಾನ’ ಎಂದಿದ್ದಾರೆ.

‘ಸರ್ಕಾರ ನೀಡಿರುವ ಎಲ್ಲ ಮಾಹಿತಿಗಳು ಇ-ಜನ್ಮ ತಂತ್ರಾಂಶದಲ್ಲಿ ತಾತ್ಕಾಲಿಕವಾಗಿ ದಾಖಲಿಸಲಾಗಿರುವ ದತ್ತಾಂಶವಾಗಿದ್ದು, ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಹೊರಡಿಸಿರುವ ಮಾರ್ಗಸೂಚಿಗಳ ಅನುಸಾರ ಪರಿಷ್ಕರಣೆ ನಡೆಯಬೇಕಿದೆ. ಈ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದ್ದು ಅಂತಿಮ ಅಂಕಿ-ಅಂಶಗಳ ಪ್ರಕಟಣೆ ಇನ್ನೂ ಬಾಕಿಯಿದೆ’ ಎಂದು ಹೇಳಿದ್ದಾರೆ.

‘ಸಿದ್ದರಾಮಯ್ಯನವರಿಗೆ ಬೇಕಿದ್ದಲ್ಲಿ ಎಲ್ಲಾ ಜಿಲ್ಲೆಗಳಿಂದ ಮಾಹಿತಿ ತರಿಸಿಕೊಂಡು ತಾಳೆ ಮಾಡಲಿ. ಆದರೆ, ಇನ್ನೂ ಅಂತಿಮವಾಗಿರದ ದತ್ತಾಂಶ, ಇನ್ನೂ ಪರಿಷ್ಕರಿಸಬೇಕಾದ ಅಂಕಿ ಅಂಶಗಳನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಅವರಿಗೆ ಶೋಭೆಯಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT