ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಖರೀದಿಗೆ ವಿಧಿಸಿದ ನಿರ್ಬಂಧ ತೆಗೆದುಹಾಕಬೇಕು: ಪಿಎಂಗೆ ಸಿದ್ದರಾಮಯ್ಯ ಪತ್ರ

Last Updated 20 ಫೆಬ್ರುವರಿ 2022, 9:49 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿಸಲು ವಿಧಿಸಿರುವ ನಿರ್ಬಂಧಗಳನ್ನು ತಕ್ಷಣ ತೆಗೆದು ಹಾಕಬೇಕು. ರೈತರು ಎಷ್ಟು ಕ್ವಿಂಟಲ್ ಖರೀದಿ ಕೇಂದ್ರಗಳಿಗೆ ತರುತ್ತಾರೋ,ಅಷ್ಟನ್ನೂ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು’ ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಒತ್ತಡ ತಂದು ಕೇವಲ 2.10 ಲಕ್ಷ ಟನ್ ಖರೀದಿಸಲು ವಿಧಿಸಿರುವ ನಿರ್ಬಂಧ ತೆಗೆದು ಹಾಕಬೇಕು. ಸ್ಥಗಿತಗೊಳಿಸಿರುವ ನೋಂದಣಿ ಕೇಂದ್ರಗಳನ್ನು ಮತ್ತೆ ಆರಂಭಿಸಬೇಕು. ರಾಗಿ, ಭತ್ತ ಮುಂತಾದ ಉತ್ಪನ್ನಗಳಿಗೆ ನಿಗದಿಗೊಳಿಸಿರುವ ಬೆಲೆಯನ್ನು ಹೆಚ್ಚಿಸಬೇಕುಎಂದೂ ಅವರು ಆಗ್ರಹಿಸಿದ್ದಾರೆ.

ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆಯಾದರೂ ತಮ್ಮ ಬೆಳೆಗಳಿಗೆ ಸಿಗಲಿ ಎಂದು ಆಶಿಸುತ್ತಿದ್ದಾರೆ. ಏಕೆಂದರೆ, ಮುಕ್ತ ಮಾರುಕಟ್ಟೆಯಲ್ಲಿ ರಾಗಿಯ ಬೆಲೆ ಪ್ರತಿ ಕ್ವಿಂಟಲಿಗೆ ₹ 1,800ರಿಂದ ₹ 2,180 ಇದೆ. ಕೇಂದ್ರ ಸರ್ಕಾರ ಈ ಬಾರಿ ರಾಜ್ಯದ ರೈತರಿಂದ ಕೇವಲ 2.10 ಲಕ್ಷ ಟನ್ ರಾಗಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಸೂಚನೆ ಆಧರಿಸಿ ರಾಜ್ಯ ಸರ್ಕಾರ ರಾಗಿ ಖರೀದಿಗೆ ನಿಬಂಧನೆಗಳನ್ನು ವಿಧಿಸಿದೆ. ಅದರಲ್ಲಿ ಸಣ್ಣ ರೈತರಿಂದ ಕೇವಲ 20 ಕ್ವಿಂಟಲ್ ರಾಗಿಖರೀದಿ ಮಾಡ ಲಾಗುವುದೆಂದು ತಿಳಿಸಿ ಆದೇಶ ಹೊರಡಿಸಿದೆ. ಯೂಕಲಿಪ್ಟಸ್ ಬೆಳೆಯನ್ನು ಬೆಳೆಯುತ್ತಿದ್ದ ರೈತರು ಕಳೆದ ಎರಡು ವರ್ಷಗಳಿಂದ ಈಚೆಗೆ ತಮ್ಮ ಹೊಲಗಳಲ್ಲಿ ಬೆಳೆದಿದ್ದ ಯೂಕಲಿಪ್ಟಸ್ ಬೆಳೆಯನ್ನು ತೆಗೆದು ಹಾಕಿ ರಾಗಿ ಬೆಳೆಯಲಾರಂಭಿಸಿದ್ದಾರೆ. ಹೀಗಾಗಿ ಸಹಜವಾಗಿಯೆ ರಾಗಿಯ ಉತ್ಪಾದನೆ ಹೆಚ್ಚಾಗಿದೆಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ದೊಡ್ಡಬಳ್ಳಾಪುರ ಮುಂತಾದ ಕಡೆ ರೈತರು, ರೈತ ಸಂಘದವರು ರಾಗಿ ಖರೀದಿಗೆ ವಿಧಿಸಿರುವ ನಿಬಂಧನೆಗಳನ್ನು ತೆಗೆದುಹಾಕುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ವರ್ಷ ಸುಮಾರು 4.7 ಲಕ್ಷ ಟನ್ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದರೆ, ಈ ಬಾರಿ ರಾಜ್ಯದಿಂದ ಕೇವಲ 2.10 ಲಕ್ಷ ಟನ್ ರಾಗಿ ಖರೀದಿಸಲು ಅನುಮತಿ ನೀಡಲಾ ಗಿದೆ. ರೈತರು 15 ಲಕ್ಷ ಟನ್ ರಾಗಿ ಬೆಳೆದರೆ ಅವರು ತಮ್ಮ ಸ್ವಂತ ಬಳಕೆಗೆ ಶೇ 50ರಷ್ಟನ್ನು ಬಳಸುತ್ತಾರೆಂದರೆ ಉಳಿದದ್ದನ್ನು ಮಾರಲೇಬೇಕು. ಬೆಂಬಲ ಬೆಲೆ ಯೋಜನೆಯಡಿ ರೈತರ ಉತ್ಪನ್ನಗಳನ್ನು ಖರೀದಿಸದಿದ್ದರೆ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಮಾರುಕಟ್ಟೆಯಲ್ಲಿ ಬೆಲೆಗಳು ಬಿದ್ದು ಹೋಗುತ್ತವೆ. ಹೀಗಾದರೆ ರೈತರ ಹಿತಾಸಕ್ತಿಯನ್ನು ಕಾಪಾಡುವುದು ಹೇಗೆ? ರೈತರ ಆದಾಯ ದ್ವಿಗುಣಗೊಳ್ಳುವುದು ಹೇಗೆಎಂದು ಅವರು ಪ್ರಶ್ನಿಸಿದ್ದಾರೆ.

ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡುವುದನ್ನು ನಿಲ್ಲಿಸಿರುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಈಗಾಗಲೆ ರಾಗಿಯ ಬೆಲೆ ಕಡಿಮೆಯಾಗಿ ಈಗ ಕೇವಲ ₹ 1,800ರಿಂದ ₹ 2,180 ವರೆಗೆ ಮಾತ್ರ ಮಾರಾಟವಾಗುತ್ತಿದೆ. ಇದರಿಂದ ಪ್ರತಿ ಕ್ವಿಂಟಲ್‍ಗೆ ರೈತರಿಗೆ ಸರಾಸರಿ ₹ 1,377 ನಷ್ಟವಾಗುತ್ತಿದೆ. ಈ ಲೆಕ್ಕದಲ್ಲಿ ನೋಡಿದರೆ ಮಾರುಕಟ್ಟೆಗೆ 8 ಲಕ್ಷ ಟನ್ ರಾಗಿ ಬಂದರೆ 2.1 ಲಕ್ಷ ಟನ್‌ನಷ್ಟು ಬೆಂಬಲ ಬೆಲೆಯಡಿ ಖರೀದಿಸಲಾಗುತ್ತಿದೆ. ಉಳಿಕೆ 6 ಟನ್ ರಾಗಿ ಬೆಳೆದ ರೈತರಿಗೆ ಕನಿಷ್ಟ ₹1000 ಕೋಟಿ ನಷ್ಟವಾಗುತ್ತದೆಎಂದಿದ್ದಾರೆ.

ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎಂದು ಸರ್ಕಾರಗಳು ಪದೇ ಪದೇ ಹೇಳಲಾಗುತ್ತಿವೆ. ಆದರೆ, ರೈತರ ಆದಾಯ ಹೆಚ್ಚಾಗುವ ಬದಲು ಕಡಿಮೆಯಾಗುತ್ತಿದೆ. ಅದರಲ್ಲೂ ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆಯುವ ರಾಗಿಯು ಲಾಭದಾಯಕ ಬೆಳೆಯಲ್ಲ. ಖರ್ಚು ಹೆಚ್ಚು ಲಾಭ ಕಡಿಮೆ. ಹೀಗಾಗಿ ಸರ್ಕಾರಗಳು ಈ ರೀತಿಯ ಬೆಳೆಗಳಿಗೆ ಹೆಚ್ಚು ಬೆಲೆ ನಿಗದಿಪಡಿಸಿ ರೈತರು ಮಾರುಕಟ್ಟೆಗೆ ತರುವಷ್ಟು ಉತ್ಪನ್ನ ಖರೀದಿಸಬೇಕುಎಂದು ಆಗ್ರಹಿಸಿದ್ದಾರೆ.

ಇಡೀ ವರ್ಷ ಪದೇ ಪದೇ ಸುರಿದ ಮಳೆಯ ನಡುವೆಯೂ ರಾಗಿ, ಭತ್ತ ಮುಂತಾದ ಬೆಳೆಗಳನ್ನು ಕೊಯಿಲು ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ. ರಾಜ್ಯ ಸರ್ಕಾರ ಈ ವರ್ಷ ಜನವರಿ 1ರಿಂದ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನೋಂದಣಿ ಪ್ರಕ್ರಿಯೆ ಆರಂಭಿಸಿದೆ. ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಗಳ ಪ್ರಮುಖ ಬೆಳೆಯಾದ ರಾಗಿಯನ್ನು ಬೆಳೆಯುತ್ತಾರೆ. ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ರಾಜ್ಯದ ರೈತರು ಈ ವರ್ಷ ಸುಮಾರು 19.35 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದಿದ್ದಾರೆ. ಎಕರೆಗೆ ಕನಿಷ್ಟ 1 ಟನ್ ಎಂದರೂ ಸುಮಾರು 19.3 ಲಕ್ಷ ಟನ್ ಟನ್ ರಾಗಿ ಇಳುವರಿ ಬರುತ್ತದೆ. ಈ ವರ್ಷ ನಿರಂತರವಾಗಿ ಸುರಿದ ಮಳೆಯಿಂದಾಗಿ 4.5 ಲಕ್ಷ ಟನ್ ರಾಗಿ ಮಳೆಯ ಪಾಲಾದರೂ 15 ಲಕ್ಷ ಟನ್ ರಾಗಿ ರೈತರ ಕೈಯಲ್ಲಿದೆ. ಹೀಗಾಗಿ ರೈತರು ಬೆಂಬಲ ಬೆಲೆಯಡಿ ರಾಗಿಯನ್ನು ಮಾರಾಟ ಮಾಡಲು ಉತ್ಸಾಹ ತೋರಿಸುತ್ತಿದ್ದಾರೆಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT