ಶನಿವಾರ, ಸೆಪ್ಟೆಂಬರ್ 18, 2021
30 °C

ಭ್ರಷ್ಟಾಚಾರವೇ ಯಡಿಯೂರಪ್ಪನವರ ದೊಡ್ಡ ಸಾಧನೆ: ಸಿದ್ದರಾಮಯ್ಯ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನನ್ನ ಪ್ರಕಾರ ಭ್ರಷ್ಟಾಚಾರವೇ ಯಡಿಯೂರಪ್ಪನವರ ದೊಡ್ಡ ಸಾಧನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಗುರುವಾರ ಸರಣಿ ಟ್ವೀಟ್‌ ಮಾಡಿರುವ ಅವರು, 'ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಸರ್ಕಾರಕ್ಕೆ ಜುಲೈ 26 ಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನಾ ಕಾರ್ಯಕ್ರಮವನ್ನು ಮಾಡಿ, ಕಷ್ಟದ ಕಾಲದಲ್ಲೂ ತಾವೇನೋ ಸಾಧನೆ ಮಾಡಿದ್ದೇವೆ ಎಂದು ಸುಳ್ಳುಗಳನ್ನು ಹೇಳಿದರು. ನನ್ನ ಪ್ರಕಾರ ಭ್ರಷ್ಟಾಚಾರವೇ ಇವರ ಎರಡು ವರ್ಷದ ದೊಡ್ಡ ಸಾಧನೆ' ಎಂದು ಹೇಳಿದ್ದಾರೆ.

'ಮಕ್ಕಳು ತಿನ್ನುವ ಮೊಟ್ಟೆಯಲ್ಲಿ, ಕೊರೊನಾ ಚಿಕಿತ್ಸಕ ಉಪಕರಣಗಳ ಖರೀದಿಯಲ್ಲೂ ಭ್ರಷ್ಟಾಚಾರ ಮಾಡಿದಂತಹ ಭಂಡ ಸರ್ಕಾರ ಅವರದು. ಇವೆಲ್ಲವನ್ನು ಸಾಕ್ಷಿ ಸಮೇತ ಸದನದಲ್ಲಿ ಪ್ರಸ್ತಾಪ ಮಾಡಿದರೆ ಬಿಎಸ್‌ವೈ ನನ್ನ ಆರೋಪಕ್ಕೆ ತುಟಿ ಬಿಚ್ಚಲಿಲ್ಲ' ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

'ಕೊರೊನಾ ರೋಗದಿಂದ ಮೃತಪಟ್ಟವರ ಸಂಖ್ಯೆ ಸರ್ಕಾರ ನೀಡುವ ಅಂಕಿ ಅಂಶಗಳಿಗಿಂತ 10 ಪಟ್ಟು ಹೆಚ್ಚಿದೆ. ಮೊದಲ ಅಲೆಯಲ್ಲೇ ಲಕ್ಷಾಂತರ ಜನ ಸತ್ತಿದ್ದರೂ ಎರಡನೇ ಅಲೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವ ಸಿದ್ಧತೆಯನ್ನು ಮಾಡಿಕೊಂಡಿರಲಿಲ್ಲ' ಎಂದು ವಿರೋಧ ಪಕ್ಷದ ನಾಯಕ ಕಿಡಿ ಕಾರಿದ್ದಾರೆ.

'ಕೊರೊನಾ ರೋಗ ಉಲ್ಬಣಗೊಂಡ ನಂತರ ಆಕ್ಸಿಜನ್‌, ಬೆಡ್‌ಗಳು, ಔಷಧಿಗಳು, ಆಂಬುಲೆನ್ಸ್‌ಗಳ ಕೊರತೆಯಾಯಿತು. ಇದರಿಂದ ಹಲವರು ರಸ್ತೆಗಳಲ್ಲಿ ಪ್ರಾಣ ಬಿಡುವಂತಾಯಿತು. ಶವ ಸಂಸ್ಕಾರಕ್ಕೂ ಸ್ಥಳ ಸಿಗದೆ ನದಿಗಳಲ್ಲಿ ಹೆಣಗಳು ತೇಲಿ ಬಂದವು' ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

'ಚಾಮರಾಜನಗರದ ದುರಂತ ನಮ್ಮ ಕಣ್ಣೆದುರೇ ಇದೆ. ಆದರೂ ಕೇಂದ್ರದ ಮಂತ್ರಿ ಒಬ್ಬರು ಆಕ್ಸಿಜನ್‌ ಕೊರತೆಯಿಂದ ದೇಶದಲ್ಲಿ ಯಾರೊಬ್ಬರೂ ಸತ್ತಿಲ್ಲ ಎಂದು ಹೇಳುತ್ತಾರೆ. ರೋಗಿಗಳ ಸಂಬಂಧಿಕರು ತಮ್ಮವರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲು ಒದ್ದಾಡಿದ ರೀತಿಯನ್ನು ಇಡೀ ದೇಶ ಕಂಡಿದೆ' ಎಂದು ಮಾಜಿ ಸಿಎಂ ಆರೋಪಿಸಿದ್ದಾರೆ.

'ರಾಜ್ಯ ಬಿಜೆಪಿ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿತು. ಇದರಿಂದ ದಿನಗೂಲಿ ನೌಕಕರು, ಆಟೋ, ವಾಹನ ಚಾಲಕರು, ಕುಶಲ ಕರ್ಮಿಗಳು, ಕೈಗಾರಿಕೆಗಳು, ಅಕ್ಕಸಾಲಿಗರು, ಸವಿತಾ ಸಮಾಜದವರು ಹೀಗೆ ದುಡಿಯುವ ವರ್ಗದ ಜನ ಕೆಲಸವಿಲ್ಲದೆ ನಷ್ಟಕ್ಕೀಡಾದರು. ಅವರ ನೆರವಿಗೆ ನಿಲ್ಲಬೇಕಿದ್ದ ಸರ್ಕಾರ ಕೈಕಟ್ಟಿ ಕೂತಿತ್ತು' ಎಂದು ಕಾಂಗ್ರೆಸ್‌ ನಾಯಕ ಹೇಳಿದ್ದಾರೆ.

'ದುಡಿಯುವ ವರ್ಗದ ಜನರಿಗೆ ಸರ್ಕಾರದ ಪರವಾಗಿ ₹10,000 ಲಾಕ್‌ಡೌನ್ ಪರಿಹಾರದ ಹಣ ನೀಡಿ ಎಂದು ನಾನು ಹಲವು ಬಾರಿ ಪತ್ರ ಬರೆದೆ. ಮಾಧ್ಯಮಗಳ ಮೂಲಕ ಒತ್ತಾಯಿಸಿದೆ. ನನ್ನ ಮನವಿಗಲ್ಲದಿದ್ದರೂ ಬಡವರ ಕಷ್ಟಕ್ಕಾದರೂ ಬಿಜೆಪಿ ಸರ್ಕಾರದ ಹೃದಯ ಮಿಡಿಯಬೇಕಿತ್ತು' ಎಂದು ಅವರು ತಿಳಿಸಿದ್ದಾರೆ.

'ಕಳೆದ ಬಾರಿಯಂತೂ ಪರಿಹಾರದ ಆಸೆ ಹುಟ್ಟಿಸಿ, ಮೂಗಿಗೆ ತುಪ್ಪ ಸವರಿ ಕೈತೊಳೆದುಕೊಂಡಿದ್ದ ಸರ್ಕಾರ ಈ ಬಾರಿ ಲಾಕ್‌ಡೌನ್‌ ಮಾಡಿದಾಗಲಾದರೂ ಬಡಜನರ ನೆರವಿಗೆ ನಿಲ್ಲಬೇಕಿತ್ತು. ಪರಿಹಾರ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ಲಾಕ್‌ಡೌನ್‌ನ ಹೆಸರನ್ನೇ ಬದಲಿಸಿ ಕೊರೊನಾ ಕರ್ಫ್ಯೂ ಎಂಬ ಹೊಸ ನಾಮಾಕರಣದೊಂದಿಗೆ ಲಾಕ್‌ಡೌನ್ ಹೇರಿತು' ಎಂದು ರಾಜ್ಯ ಸರ್ಕಾರದ ವಿರುದ್ಧ ಅವರು ಹರಿಹಾಯ್ದಿದ್ದಾರೆ.

'ಬಡ ಜನರಿಗೆ ಕನಿಷ್ಠ 10 ಕೆ.ಜಿ ಉಚಿತ ಅಕ್ಕಿ ನೀಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದೆ, ಆದರೆ, ಬಿಜೆಪಿ ಸರ್ಕಾರ ನಮ್ಮ ಕಾಲದಲ್ಲಿ ನೀಡುತ್ತಿದ್ದ 7 ಕೆ.ಜಿ ಅಕ್ಕಿಯನ್ನೇ ಕಡಿತ ಮಾಡಿ ರಾಜ್ಯದ ಜನ ಹಸಿವಿನಿಂದ ಬಳಲುವಂತೆ ಮಾಡಿತು. ಇದನ್ನೆಲ್ಲಾ ಸರ್ಕಾರದ ಸಾಧನೆ ಎಂದು ಕರೆಯಬೇಕೋ ಅಥವಾ ವೈಫಲ್ಯವೆಂದು ಕರೆಯಬೇಕೋ?' ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

'ನಮ್ಮ ಸರ್ಕಾರ ಜಾರಿಗೊಳಿಸಿದ್ದ ಜನಪರ ಯೋಜನೆಗಳಿಗೆ ಹಣ ನೀಡುತ್ತಿಲ್ಲ. ಹೊಸ ಯೋಜನೆಗಳನ್ನೂ ಘೋಷಿಸುತ್ತಿಲ್ಲ. ಮಾತೆತ್ತಿದರೆ ಕೊರೊನಾ ನಿರ್ವಹಣೆಗೆ ಖರ್ಚು ಮಾಡಿದ್ದೇವೆ ಎನ್ನುತ್ತಾರೆ. ಕೊರೊನಾ ನಿರ್ವಹಣೆಗೆ ರಾಜ್ಯ ಬಿಜೆಪಿ ಸರ್ಕಾರ ಖರ್ಚು ಮಾಡಿರುವ ಒಟ್ಟು ಹಣ ₹4,000 ಕೋಟಿ' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

'ಸಿದ್ದರಾಮಯ್ಯನವರ ಸರ್ಕಾರ ಸಾಲ ಮಾಡಿದೆ ಎನ್ನುತ್ತಾರೆ. ನಮ್ಮ 5 ವರ್ಷದ ಆಡಳಿತದಲ್ಲಿ ಮಾಡಿದ ಒಟ್ಟು ಸಾಲ ₹1.25 ಲಕ್ಷ ಕೋಟಿ. ನಾನು ಅಧಿಕಾರದಿಂದ ಇಳಿಯುವಾಗ ಇದ್ದ ರಾಜ್ಯದ ಒಟ್ಟು ಸಾಲ ₹2.42 ಲಕ್ಷ ಕೋಟಿ. ಈ ವರ್ಷದ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ ₹4.57 ಲಕ್ಷ ಕೋಟಿ. ಈಗ ಹೇಳಿ ಸಾಲ ಮಾಡಿ ತುಪ್ಪ ತಿಂದವರು ಯಾರು ಎಂದು?' ಎಂಬುದಾಗಿ ಟ್ವೀಟ್‌ ಮಾಡಿದ್ದಾರೆ.

'ಬಿಜೆಪಿ ಸರ್ಕಾರದ ಅವಧಿಯಲ್ಲಿ ಬದ್ಧತಾ ಖರ್ಚುಗಳು ರಾಜ್ಯದ ಆದಾಯದಕ್ಕಿಂತ ₹17,000 ಕೋಟಿ ಹೆಚ್ಚಿದೆ. ನೌಕರರ ಸಂಬಳ, ವೃದ್ಧಾಪ್ಯ ವೇತನ, ವಿಧವಾ ವೇತನ ಮುಂತಾದ ಪಿಂಚಣಿ ಹಣ ನೀಡಲು ಸಾಲ ಮಾಡಬೇಕಾದ ಸ್ಥಿತಿಯಲ್ಲಿ ನಾವಿದ್ದೇವೆ. ರಾಜ್ಯದ ಇತಿಹಾಸದಲ್ಲಿ ಈ ರೀತಿ ರಾಜಸ್ವ ಕೊರತೆಯ ಸ್ಥಿತಿ ಎದುರಾಗಿರುವುದು ಇದೇ ಮೊದಲು' ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

'ಸ್ವಾತಂತ್ರ ಬಂದ ನಂತರದಿಂದ 2014 ರ ವರೆಗೆ ಭಾರತದ ಒಟ್ಟು ಸಾಲ ₹53 ಲಕ್ಷ ಕೋಟಿ ಇತ್ತು. ನರೇಂದ್ರ ಮೋದಿ ಅವರ 6 ವರ್ಷಗಳ ಆಡಳಿತದಲ್ಲಿ ಮಾಡಿರುವ ಸಾಲ ₹ 82 ಲಕ್ಷ ಕೋಟಿ. ಈಗ ದೇಶದ ಮೇಲಿರುವ ಒಟ್ಟು ಸಾಲ ₹135 ಲಕ್ಷ ಕೋಟಿ. ಇದನ್ನೇ ಅಚ್ಚೇ ದಿನ್‌ ಎಂದು ಕರೆಯುವುದಾದರೆ ನನ್ನ ಅಭ್ಯಂತರವಿಲ್ಲ' ಎಂದು ಅವರು ಟ್ವೀಟಿಸಿದ್ದಾರೆ.

'ಮನಮೋಹನ್‌ ಸಿಂಗ್‌ ಅವರ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್‌ ಮೇಲೆ ₹ 9, ಡೀಸೆಲ್‌ ಮೇಲೆ 3 ರೂಪಾಯಿ 82 ಪೈಸೆ ಅಬಕಾರಿ ಸುಂಕ ಇತ್ತು. ಈಗ ನರೇಂದ್ರ ಮೋದಿ ಸರ್ಕಾರ ಪೆಟ್ರೋಲ್‌ ಮೇಲೆ ₹ 32 ಹಾಗೂ ಡೀಸೆಲ್‌ ಮೇಲೆ ₹ 33 ಅಬಕಾರಿ ಸುಂಕ ವಿಧಿಸುತ್ತಿದೆ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

'ಗುಜರಾತ್‌, ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಬಂದರೆ ಪ್ರಧಾನಿ ಓಡೋಡಿ ಹೋಗುತ್ತಾರೆ. ಆದರೆ ನಮ್ಮ ರಾಜ್ಯ ಕಳೆದ ಎರಡು ವರ್ಷಗಳಿಂದ ಪ್ರವಾಹ ಪರಿಸ್ಥಿತಿ ಎದುರಿಸಿದೆ. ಪ್ರಧಾನಿಯವರು ಸೌಜನ್ಯಕ್ಕಾದರೂ ಒಮ್ಮೆ ಬಂದು ಹೋಗಬಹುದಿತ್ತಲ್ಲವೇ?' ಎಂದು ಟೀಕಾಪ್ರಹಾರ ನಡೆಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು