ಗುರುವಾರ , ಅಕ್ಟೋಬರ್ 29, 2020
22 °C

ಜಾತಿ ಸಮೀಕ್ಷೆ ಕುರಿತು ಪ್ರತಿಕ್ರಿಯೆಗೆ ಸಿದ್ದರಾಮಯ್ಯ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ (2013– 2018) ತಾವೇ ಮುತುವರ್ಜಿಯಿಂದ, ದೇಶದಲ್ಲೇ ಮೊದಲ ಬಾರಿಗೆ ಮಾಡಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿ ಬಗ್ಗೆ ಪ್ರತಿಕ್ರಿಯಿಸಲು ಈಗ ವಿಧಾನಸಭೆ ವಿರೋಧ ಪಕ್ಷದ ಸಿದ್ದರಾಮಯ್ಯ ಬಿಲ್‌ಕುಲ್ ಒಪ್ಪಲಿಲ್ಲ. ಈ ಕುರಿತು ಅವರನ್ನು ಸಂಪರ್ಕಿಸಿದಾಗ, ‘ಸಮೀಕ್ಷೆಯ ವರದಿ ಸಿದ್ಧವಿದೆ. ನೋಡೋಣ’ ಎಂದಷ್ಟೆ ಪ್ರತಿಕ್ರಿಯಿಸಿ ಸುಮ್ಮನಾದರು.

ವರದಿ ಸಿದ್ಧಗೊಂಡ ಬಳಿಕ ಎಚ್‌. ಕಾಂತರಾಜು ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ, ಸಮ್ಮಿಶ್ರ (ಜೆಡಿಎಸ್– ಕಾಂಗ್ರೆಸ್) ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಎಚ್‌. ಕುಮಾರಸ್ವಾಮಿ ಅವರನ್ನು 3–4 ಬಾರಿ ಭೇಟಿ ಮಾಡಿ ವರದಿ ಸ್ವೀಕರಿಸುವಂತೆ ಮನವಿ ಮಾಡಿತ್ತು. ಆದರೆ, ಅವರು ಉತ್ಸುಕತೆ ತೋರಿಸಿರಲಿಲ್ಲ. ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರನ್ನೂ ಆಯೋಗದ ಸದಸ್ಯರು ಭೇಟಿ ಮಾಡಿದ್ದರು. ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಬಾಸ್ಕರ್ ಅವರ ಬಳಿಯೂ ವರದಿ ಸಲ್ಲಿಸುವ ಬಗ್ಗೆ ಚರ್ಚಿಸಿದ್ದರು. ಕೊನೆಗೆ, ತಮ್ಮ ಅಧಿಕಾರ ಅವಧಿ ಮುಗಿಯತ್ತಿದ್ದಂತೆ (2019 ಸೆ. 22) ವರದಿಯನ್ನು ಆಯೋಗದ ಸದಸ್ಯ ಕಾರ್ಯದರ್ಶಿಯ ಕೈಗೊಪ್ಪಿಸಿ ಆಯೋಗ ಸದಸ್ಯರು ಕೈ ತೊಳೆದುಕೊಂಡರು.

ವರದಿ ಬಿಡುಗಡೆ ಮಾಡಲು ಭಯ ಏಕೆ: ಶಂಕರಪ್ಪ

ವಿವಿಧ ಸರ್ಕಾರಗಳು ಆಯೋಗಗಳನ್ನು ರಚಿಸುತ್ತವೆ; ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸಿದ ಬಳಿಕ ಅದನ್ನು ವಿಧಾನಮಂಡಲದಲ್ಲಿ ಮಂಡಿಸಿ ಸಾರ್ವಜನಿಕರ ಅವಗಾಹನೆಗೆ ತರಲು ಹೆದರಿಕೆ ಏಕೆ? ಸರ್ಕಾರಗಳ ಇಂತಹ ವರ್ತನೆಯಿಂದ ಬೊಕ್ಕಸಕ್ಕೆ ನಷ್ಟ ಮಾತ್ರವಲ್ಲ; ನಿವೃತ್ತ ನ್ಯಾಯಮೂರ್ತಿಗಳಿಗೆ ಮಾಡುವ ಅವಮಾನ. ಸಿದ್ದರಾಮಯ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿ ಇರಬಹುದು ಅಥವಾ ಅದಕ್ಕಿಂತ ಹಿಂದಿನ ಹಲವು ಆಯೋಗಗಳ ವರದಿಗಳನ್ನು ಬಿಡುಗಡೆ ಮಾಡಲೇ ಇಲ್ಲ. ಇದು ತಪ್ಪು. ಆಯೋಗಗಳು ಮೊದಲಿಗೆ ವರದಿಯನ್ನು ಮಂಡಿಸಲಿ. ಆ ಬಗ್ಗೆ ಸಮಗ್ರ ಚರ್ಚೆ ಆಗಲಿ. ಶಿಫಾರಸ್ಸುಗಳನ್ನು ಒಪ್ಪುವುದು– ಬಿಡುವುದು ನಂತರದ ಮಾತು. ಜಾತಿ ಗಣತಿ ವರದಿಯನ್ನು ಮಂಡಿಸುವಂತೆ ನಮ್ಮ ಸರ್ಕಾರಕ್ಕೂ ಮನವಿ ಮಾಡುತ್ತೇನೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಶಂಕರಪ್ಪ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು