ಗುರುವಾರ , ಡಿಸೆಂಬರ್ 3, 2020
22 °C
ಹಿಂದುತ್ವ ಅಸ್ತ್ರ ಪಕ್ಕಕ್ಕಿಟ್ಟ ಬಿಜೆಪಿ l ಅಲುಗಾಡುತ್ತಿದೆ ಜೆಡಿಎಸ್‌ ನೆಲ l ‘ಅಹಿಂದ’ ಶಕ್ತಿಯೇ ಕಾಂಗ್ರೆಸ್‌ ಟಾನಿಕ್‌

ಭವಿಷ್ಯದ ಅವಕಾಶಗಳಿಗೆ ಶಿರಾ ದಿಕ್ಸೂಚಿ?

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

ತುಮಕೂರು: ಜಾತಿ ಮತ್ತು ಹಣದ ರಾಜಕಾರಣದ ಅಖಾಡವಾಗಿರುವ ಶಿರಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಮೂರು ಪಕ್ಷಗಳಿಗೂ ಮಹತ್ವದ್ದೇ ಆಗಿದೆ. ರಾಜ್ಯದ ಮುಂದಿನ ರಾಜಕೀಯ ಅವಕಾಶ ಮತ್ತು ಸ್ಥಿತ್ಯಂತರಗಳ ಸಂದೇಶ ಸಾರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಕುಂಚಿಟಿಗರ ಕೋಟೆಯಾಗಿರುವ ಶಿರಾದಲ್ಲಿ ಹಿಂದುಳಿದ ವರ್ಗಗಳು, ‌ಪರಿಶಿಷ್ಟ ಸಮುದಾಯ ಮತ್ತು ಮುಸ್ಲಿಮರು ಸೋಲು, ಗೆಲುವು ನಿರ್ಧರಿಸುವ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.

‘ಅಹಿಂದ’ ಮತದಾರರು ಪಕ್ಷದ ಜತೆ ಗಟ್ಟಿಯಾಗಿಯೇ ಇದ್ದಾರೆ. ಅವರೇ ನಮ್ಮ ಪ್ರಮುಖ ನೆಲೆಗಟ್ಟು ಎನ್ನುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ದೃಷ್ಟಿಯಿಂದ ಕಾಂಗ್ರೆಸ್‌ಗೆ ಗೆಲ್ಲಲೇಬೇಕಾದ ಅನಿವಾರ್ಯವಿದೆ.

ಕಾಂಗ್ರೆಸ್‌ ಶಿರಾ ಕೋಟೆ ಬೇಧಿಸಿದರೆ ಅದು ಪಕ್ಷಕ್ಕೆ ಟಾನಿಕ್ ಆಗಲಿದೆ. ಸಿದ್ದರಾಮಯ್ಯ, ಕೆ.ಎನ್‌.ರಾಜಣ್ಣ, ಡಾ.ಜಿ.ಪರಮೇಶ್ವರ ಹೀಗೆ ಕಾಂಗ್ರೆಸ್‌ನ ‘ಅಹಿಂದ’ ಪಡೆಯ ಸಾಮರ್ಥ್ಯವನ್ನು ಚುನಾವಣೆ ಪಣಕ್ಕೊಡ್ಡಿದೆ. 

‘ಹಿಂದುತ್ವ’ ಅಸ್ತ್ರ ಪಕ್ಕಕ್ಕಿಟ್ಟ ಬಿಜೆಪಿ: ನೆಲೆ ಇಲ್ಲದ ಕ್ಷೇತ್ರದಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಂಡಿದೆ. ಆರಂಭದಲ್ಲಿಯೇ ಬಿಜೆಪಿ ಹಿಂದುತ್ವದ ಅಸ್ತ್ರ ಪ್ರಯೋಗಿಸಿ ಮತ ಕ್ರೋಡೀಕರಿಸಲು ಮುಂದಾಗಿತ್ತು. ‘ಹಿಂದುತ್ವ’ ಹಿಂದುಳಿದ ಸಮುದಾಯಗಳ ಈ ಕ್ಷೇತ್ರದಲ್ಲಿ ‘ಬಲ’ ನೀಡುವುದಿಲ್ಲ ಎನ್ನುವುದು ಅರಿವಾದ ನಂತರ ಜಾತಿವಾರು ಸಭೆಗಳ ಮೊರೆ ಹೋಯಿತು. ಕಾಡುಗೊಲ್ಲ ಅಭಿವೃದ್ಧಿ ನಿಗಮ ರಚನೆಗೂ ಮುನ್ನುಡಿಯಾಯಿತು.

ಒಂದು ವೇಳೆ ಶಿರಾದಲ್ಲಿ ಕಮಲ ಅರಳಿದರೆ ಬಿಜೆಪಿಗೆ ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಬೆಂಬಲ ಮತ್ತಷ್ಟು ಗಟ್ಟಿಯಾಗುತ್ತದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರನ್ನು ಸೆಳೆಯುವುದು ಬಿಜೆಪಿಗೆ ಸುಲಭವಾಗಲಿದೆ.

ಅಲುಗಾಡುತ್ತಿದೆ ಜೆಡಿಎಸ್‌ ನೆಲೆ

ಶಿರಾದಲ್ಲಿ ಜೆಡಿಎಸ್‌ ಭದ್ರ ನೆಲೆ ಹೊಂದಿತ್ತು. ಆದರೆ ಉಪಚುನಾವಣೆ ಮೇಲ್ನೋಟಕ್ಕೆ ಆ ಪಕ್ಷದ ನೆಲೆಯನ್ನು ಸಡಿಲಿಸಿದೆ. ಜೆಡಿಎಸ್‌ನ ನೇತೃತ್ವವಹಿಸಿಕೊಳ್ಳಬೇಕಾಗಿದ್ದ ಗುಬ್ಬಿ ಶಾಸಕ ಎಸ್‌.ಆರ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು, ಮಾಜಿ ಶಾಸಕ ಸುರೇಶ್ ಬಾಬು ಸಕ್ರಿಯವಾಗಲಿಲ್ಲ. ಈ ನಾಯಕರು ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎನ್ನುತ್ತವೆ ಆ ಪಕ್ಷದ ಮೂಲಗಳು. ಶಿರಾ ಫಲಿತಾಂಶ ಜೆಡಿಎಸ್‌ನಿಂದ ಹೊರಹೋಗುವವರ ಸಂಖ್ಯೆಯನ್ನು ಹೆಚ್ಚಿಸಲೂಬಹುದು.

ಮುಸ್ಲಿಮರ ಮತಗಳು ಯಾರಿಗೆ?

ಶಿರಾದಲ್ಲಿ ಮುಸ್ಲಿಮರ ಮತಗಳು ಗಣನೀಯವಾಗಿವೆ. ಇಲ್ಲಿನ ಮುಸ್ಲಿಮರು ಜೆಡಿಎಸ್‌ಗಿಂತ ಕಾಂಗ್ರೆಸ್ ಕೈ ಹಿಡಿದಿದ್ದೇ ಹೆಚ್ಚು. ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ಮತಗಳು ಚದುರದಂತೆ ಗಮನವಿಟ್ಟಿದ್ದಾರೆ. ಮೂರು ಪಕ್ಷಗಳು ಸಹ ಎಲ್ಲ ಜಾತಿ, ಸಮುದಾಯಗಳ ಬಹಿರಂಗ ಸಭೆಗಳನ್ನು ನಡೆಸಿವೆ. ಆದರೆ ಕಾಂಗ್ರೆಸ್ ಮುಸ್ಲಿಮರ ಆಂತರಿಕ ಸಭೆಗಳನ್ನು ನಡೆಸಲು ಒತ್ತು ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು