ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಡಿ ಪ್ರಕರಣ | ತನಿಖೆಗೆ ತೊಂದರೆ: ವಕೀಲ ಜಗದೀಶ್ ವಿರುದ್ಧ ’ಎಸ್‌ಐಟಿ’ ದೂರು

ಇಲ್ಲಸಲ್ಲದ ಹೇಳಿಕೆ ನೀಡಿ ತನಿಖೆಗೆ ತೊಂದರೆ ನೀಡುತ್ತಿರುವ ಆರೋಪ
Last Updated 2 ಏಪ್ರಿಲ್ 2021, 18:56 IST
ಅಕ್ಷರ ಗಾತ್ರ

ಬೆಂಗಳೂರು: ‘ವಕೀಲ ಕೆ.ಎನ್‌. ಜಗದೀಶ್ ಕುಮಾರ್ ವಿನಾಕಾರಣ ಇಲ್ಲಸಲ್ಲದ ಹೇಳಿಕೆ ನೀಡಿ ತನಿಖೆಗೆ ತೊಂದರೆ ಉಂಟು ಮಾಡುತ್ತಿದ್ದಾರೆ’ ಎಂದು ಆರೋಪಿಸಿ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು, ತಂಡದ ಮುಖ್ಯಸ್ಥರಿಗೆ ದೂರು ನೀಡಿರುವುದಾಗಿ ಮೂಲಗಳು ಹೇಳಿವೆ.

ಸಿ.ಡಿ.ಪ್ರಕರಣ ಬೆಳಕಿಗೆ ಬಂದಾಗಿನಿಂದ ನಿತ್ಯವೂ ನಾನಾ ತಿರುವು ಪಡೆಯುತ್ತಿದೆ. ನ್ಯಾಯಾಲಯದ ಎದುರು ಹಾಜರಾಗಿ ಸಿಆರ್‌ಪಿಸಿ 164ರಡಿ ಸಂತ್ರಸ್ತೆ ಹೇಳಿಕೆ ನೀಡಿದ ಬಳಿಕವಂತೂ ಪ್ರಕರಣಕ್ಕೆ ತಾರ್ಕಿಕ ತಿರುವು ಸಿಕ್ಕಿದ್ದು, ಅದೇ ಹೇಳಿಕೆ ಆಧರಿಸಿ ಎಸ್‌ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಎಸ್‌ಐಟಿ ಅಧಿಕಾರಿಗಳ ಬಗ್ಗೆಯೇ ಹಲವು ಆರೋಪ ಮಾಡುತ್ತಿರುವ ಜಗದೀಶ್, ಮಾಧ್ಯಮಗಳ ಎದುರು ಮಾತನಾಡುತ್ತಿದ್ದಾರೆ. ಇದ
ರಿಂದ ಮುಜುಗರಕ್ಕೀಡಾಗುತ್ತಿರುವ ಅಧಿಕಾರಿಗಳು, ಜಗದೀಶ್‌ ಅವರಿಂದ ಆಗುತ್ತಿರುವ ತೊಂದರೆ ಬಗ್ಗೆ ತಂಡದ ಮುಖ್ಯಸ್ಥ ಸೌಮೇಂದು ಮುಖರ್ಜಿ ಬಳಿ ಹೇಳಿಕೊಂಡಿದ್ದಾರೆ.

‘ಸಂತ್ರಸ್ತೆ ಪರವಾಗಿ ಮಂಜುನಾಥ್ ವಕಾಲತ್ತು ವಹಿಸಿಕೊಂಡಿದ್ದಾರೆ. ನೋಟಿಸ್‌ ನೀಡುವ ಹಾಗೂ ಸಂತ್ರಸ್ತೆ ಕಾನೂನು ಪ್ರಕ್ರಿಯೆಗಳನ್ನು ಮಂಜುನಾಥ್ ಮೂಲಕ ಮಾಡಲಾಗುತ್ತಿದೆ. ಆದರೆ, ಜಗದೀಶ್ ಕುಮಾರ್ ತಾನೇ ಸಂತ್ರಸ್ತೆ ಪರ ವಕೀಲ ಎನ್ನುತ್ತಿದ್ದಾರೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆಂದು ಗೊತ್ತಾಗಿದೆ.

‘ತನಿಖಾ ಸ್ಥಳ, ವಿಚಾರಣಾ ಕೊಠಡಿ ಬಳಿ ಜಗದೀಶ್‌ ನಿಲ್ಲುತ್ತಿದ್ದಾರೆ. ಮಾಧ್ಯಮಗಳ ಎದುರು ಎಸ್‌ಐಟಿ ವಿರುದ್ಧವೇ ಮಾತನಾಡುತ್ತಿದ್ದಾರೆ. ಇದು ತನಿಖೆಗೆ ಅಡಚಣೆಯನ್ನುಂಟು ಮಾಡುತ್ತಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಗಮನಹರಿಸಬೇಕು’ ಎಂದೂ ಅಧಿಕಾರಿಗಳು ಕೋರಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿದ ಜಗದೀಶ್‌ಕುಮಾರ್, ‘ಸಂತ್ರಸ್ತೆ ಮನವಿ ಮಾಡಿದ್ದರಿಂದ ಅವರ ಪರ ಕಾನೂನು ಪ್ರಕಾರ ಹೋರಾಡುವ ಜತೆಗೆ, ಮಾಧ್ಯಮಗಳ ಎದುರು ಮಾತನಾಡುತ್ತಿದ್ದೇನೆ’ ಎಂದರು.

‘ನನ್ನಿಂದ ತನಿಖೆಗೆ ತೊಂದರೆಯಾಗುತ್ತಿದ್ದರೆ, ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಲಿ’ ಎಂದರೂ ಹೇಳಿದರು.

ಮಗಳ ಜತೆ ಬಂದಿದ್ದ ಸೂರ್ಯ; ಪೋಷಕರ ಆಕ್ಷೇಪ

ಹೇಳಿಕೆ ನೀಡಲು ಸಂತ್ರಸ್ತೆ ನ್ಯಾಯಾಲಯಕ್ಕೆ ಹಾಜರಾಗುವ ವೇಳೆ ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಹಾಜರಿದ್ದ ಬಗ್ಗೆ ಯುವತಿಯ ಪೋಷಕರು ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಚರ್ಚೆಗೆ ಕಾರಣವಾಗಿದೆ.

‘ಮಗಳು ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ನ್ಯಾಯಾಲಯದಲ್ಲಿ ಸಿಆರ್‌ಪಿಸಿ 164ರಡಿ ಹೇಳಿಕೆ ದಾಖಲಿಸಲು ಆಕೆ ಬಂದಿರುವುದು ತಿಳಿಯಿತು. ಅವಳ ಜೊತೆಯಲ್ಲಿ ಕಾಂಗ್ರೆಸ್‌ನ ಸೂರ್ಯ ಮುಕುಂದರಾಜ್ ಇದ್ದರು. ಅದು ಮಗಳು ನೀಡಿರುವ ಹೇಳಿಕೆಯಲ್ಲ, ಸೂರ್ಯ ನೀಡಿರುವ ಹೇಳಿಕೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಇತರರು, ಮಗಳ ಮೇಲೆ ಒತ್ತಡ ಹಾಕುತ್ತಿರುವುದಕ್ಕೆ ಇದು ಸಾಕ್ಷಿ’ ಎಂದು ಪೋಷಕರು ಆರೋಪಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಸೂರ್ಯ , ‘ಪೋಷಕರಿಗೆ ಯಾರು ಏನು ಹೇಳಿದ್ದಾರೆಂಬುದು ಗೊತ್ತಿಲ್ಲ. ಯುವತಿ ಪರ ವಕೀಲರು ಕರೆದಿದ್ದಕ್ಕೆ ಸಹಾಯ ಮಾಡಿದೆ. ಸಂತ್ರಸ್ತೆ, ಪ್ರಾಪ್ತ ವಯಸ್ಕರಾಗಿದ್ದು ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಅವರಿಗಿದೆ’ ಎಂದರು.

ವಕೀಲ ಕೆ.ಎನ್‌. ಜಗದೀಶ್‌ಕುಮಾರ್, ‘ಸಂತ್ರಸ್ತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಸೂರ್ಯ ವಕೀಲರಾಗಿ ಬಂದಿದ್ದರು. ಯಾವುದೇ ಪಕ್ಷದ ಪರ ಅಲ್ಲ. ಬಳ್ಳಾರಿಯ ಜನಾರ್ಧನ್ ರೆಡ್ಡಿ ಪರವಾಗಿಯೂ ಈ ಹಿಂದೆ ಅವರು ವಾದಿಸಿದ್ದರು. ಅಂದ ಮಾತ್ರಕ್ಕೆ ಅವರು ಬಿಜೆಪಿಯವರು ಎಂದು ಹೇಳಲಾಗದು. ನಮ್ಮದೆಲ್ಲ ವಕೀಲ ವೃತ್ತಿ’ ಎಂದೂ ಜಗದೀಶ್ ಹೇಳಿದ್ದಾರೆ.

ವಿಶೇಷ ಪ್ರಾಸಿಕ್ಯೂಟರ್ ನೇಮಕ

ಸಿ.ಡಿ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪರ ವಾದ ಮಂಡಿಸಲು ಹಾಗೂ ಕಾನೂನು ಸಲಹೆ ನೀಡಲು ವಿಶೇಷ ಪ್ರಾಸಿಕ್ಯೂಟರ್‌ಗಳನ್ನು ನೇಮಕ ಮಾಡಲಾಗಿದೆ.

ವಕೀಲ ಎಸ್‌. ಕಿರಣ್ ಜವಳಿ ಹಾಗೂ ಪಿ. ಪ್ರಸನ್ನ ಕುಮಾರ್ ಅವರನ್ನು ವಿಶೇಷ ಪ್ರಾಸಿಕ್ಯೂಟರ್ ಆಗಿ ನೇಮಿಸಿ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಹೈಕೋರ್ಟ್ ವಕೀಲ ಕಿರಣ ಜವಳಿ, ಕ್ರಿಮಿನಲ್ ಪ್ರಕರಣಗಳಲ್ಲಿ ಪರಿಣತಿ ಹೊಂದಿದ್ದಾರೆ. ಸಿಬಿಐ, ಎನ್‌ಐಎ ಪರ ವಕೀಲರಾದ ಪ್ರಸನ್ನಕುಮಾರ್, ಈ ಹಿಂದೆ ನಕಲಿ ಛಾಪಾ ಕಾಗದ ಹಗರಣ, ಗಣಿ ಹಗರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ವಾದ ಮಂಡಿಸಿದ್ದರು.

‘ವಿಐಪಿ ಬಂಧಿಸಿ ಶಕ್ತಿ ಪ್ರದರ್ಶಿಸಿ’

‘ಅತ್ಯಾಚಾರ ಪ್ರಕರಣದ ಸಂತ್ರಸ್ತೆಯೇ ನ್ಯಾಯಾಲಯಕ್ಕೆ ಬಂದು ಹೇಳಿಕೆ ನೀಡಿದ್ದರೂ ಎಸ್‌ಐಟಿ ಅಧಿಕಾರಿಗಳು ಮಾತ್ರ ಆರೋಪಿಯನ್ನು ಬಂಧಿಸುತ್ತಿಲ್ಲ. ಅನಾರೋಗ್ಯ ನೆಪಹೇಳಿ ವಿಚಾರಣೆಗೆ ಬರಲು ಆಗುವುದಿಲ್ಲವೆಂದು ಆರೋಪಿ ಹೇಳಿದ್ದಕ್ಕೆ ತಲೆಯಾಡಿಸುತ್ತಿದ್ದಾರೆ’ ಎಂದು ವಕೀಲ ಕೆ.ಎನ್‌. ಜಗದೀಶ್‌ ಕುಮಾರ್ ಆರೋಪಿಸಿದರು.

‘ಅಪರಾಧ ಪ್ರಕರಣಗಳಲ್ಲಿ ಜನಸಾಮಾನ್ಯರ ಮೇಲೆ ಶಕ್ತಿ ಪ್ರದರ್ಶನ ಮಾಡುವ ಪೊಲೀಸರು. ಅತ್ಯಾಚಾರದ ಆರೋಪಿಯಾಗಿರುವ ವಿಐಪಿಯನ್ನು ಬಂಧಿಸಿ ಶಕ್ತಿ ಪ್ರದರ್ಶನ ಮಾಡಬೇಕು. ಆ ಮೂಲಕ ಜನರ ನಂಬಿಕೆ ಗಳಿಸಬೇಕು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT