ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಐಪಿಗಳಿಗೆ ಎಸ್‌ಪಿಜಿ ಮಾದರಿ ಭದ್ರತೆ: ಹಿಂದುಳಿದ ವರ್ಗಗಳ ಸಮಿತಿ ವರದಿಯ ಶಿಫಾರಸು

Last Updated 12 ಜನವರಿ 2023, 19:38 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ವಿಐಪಿಗಳಿಗೆ ಎಸ್‌ಪಿಜಿ ಮಾದರಿಯಲ್ಲಿ ಭದ್ರತೆ ಒದಗಿಸಬೇಕು ಎಂದು ಕರ್ನಾಟಕ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ರಾಜ್ಯದಲ್ಲಿ ಒಟ್ಟು 870 ಗಣ್ಯರಿಗೆ ಗನ್‌ಮ್ಯಾನ್‌ ವ್ಯವಸ್ಥೆ ಮಾಡಲಾಗಿದೆ ಎಂದು ಒಳಾಡಳಿತ ಇಲಾಖೆಯು ಸಮಿತಿಗೆ ಮಾಹಿತಿ ನೀಡಿದೆ.ಗನ್‌ಮ್ಯಾನ್‌ಗಳಿಗೆ ತರಬೇತಿ ನೀಡಬೇಕು. ಕೆಲವರು ಖಾಸಗಿಯಾಗಿ ಗನ್‌ಮ್ಯಾನ್‌ಗಳನ್ನು ತೆಗೆದುಕೊಳ್ಳುತ್ತಿದ್ದು, ಸರ್ಕಾರದಿಂದಲೇ ಗನ್‌ಮ್ಯಾನ್‌ ಒದಗಿಸುವುದು ಒಳ್ಳೆಯದು. ಅಗತ್ಯವಿರುವವರಿಗೆ ಮಾತ್ರ ಗನ್‌ಮ್ಯಾನ್‌ ವ್ಯವಸ್ಥೆ ಮಾಡಬೇಕು. ನಿಗದಿತ ಅವಧಿಗೆ ಸೀಮಿತಗೊಳಿಸಿ, ನಂತರ ಸೌಲಭ್ಯ ವಾಪಸ್‌ ಪಡೆಯಬೇಕು. ಕೆಲವು ಕಡೆಗಳಲ್ಲಿ ಗನ್‌ಮ್ಯಾನ್‌ಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಈ ಬಗ್ಗೆಯೂ ಗಮನಹರಿಸಬೇಕು ಎಂದು ಸಮಿತಿ ಸೂಚಿಸಿದೆ.

38 ಠಾಣೆಗಳಿಂದ ಸೈಬರ್‌ ಕ್ರೈಂ ನಿಗಾ: ರಾಜ್ಯದಲ್ಲಿ ಒಟ್ಟು 38 ಪೊಲೀಸ್‌ ಠಾಣೆಗಳು ಸೈಬರ್‌ ಅಪರಾಧದ ವಿಷಯಗಳ ಕುರಿತು ಕಾರ್ಯನಿರ್ವಹಿಸುತ್ತಿವೆ. ಘಟನೆ ನಡೆದ ತಕ್ಷಣವೇ ದೂರು ಸಲ್ಲಿಸಿದರೆ, ಗೋಲ್ಡನ್‌ ಅವರ್‌ನಲ್ಲಿ ನೇರವಾಗಿ ಬ್ಯಾಂಕ್‌ ಅನ್ನು ಸಂಪರ್ಕಿಸಿ ಪಾವತಿಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಇಲಾಖೆ ಅಧಿಕಾರಿಗಳು ಸಮಿತಿಗೆ ವಿವರಣೆ ನೀಡಿದ್ದಾರೆ ಎಂದು ವರದಿ ಹೇಳಿದೆ.

ಸೈಬರ್‌ ಅಪರಾಧವನ್ನು ನಿಭಾಯಿಸುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ಅಥವಾ ದೇಶಗಳಿಂದ ಮಾಹಿತಿ ಪಡೆದು, ರಾಜ್ಯದಲ್ಲಿ ಈಗಿರುವ ವ್ಯವಸ್ಥೆಯನ್ನು ಉನ್ನತೀಕರಿಸಬೇಕಾಗಿದೆ. ಇದಕ್ಕೆ ಭಾರತೀಯ ವಿಜ್ಞಾನ ಸಂಸ್ಥೆ ಮತ್ತಿತರ ಸಂಸ್ಥೆಗಳಿಂದ ನೆರವು ಪಡೆಯಲೂ ಸಮಿತಿ ಅಧಿಕಾರಿಗಳಿಗೆ ಸೂಚಿಸಿದೆ.

ಗ್ರಾಮೀಣ ಪ್ರದೇಶದಲ್ಲಿ ಸಂಚಾರ ವ್ಯವಸ್ಥೆಯ ಬಗ್ಗೆ ತಿಳಿವಳಿಕೆ ಮೂಡಿಸಲು ಪ್ರತಿ ತಾಲ್ಲೂಕು ಮಟ್ಟದಲ್ಲಿ ಒಂದು ಜೀಬ್ರಾ ಕ್ರಾಸಿಂಗ್‌ ವ್ಯವಸ್ಥೆ ಮಾಡಿ, ಸಿಗ್ನಲ್‌ ದೀಪಗಳನ್ನು ಹಾಕಿಸಬೇಕು ಎಂದೂ ಸಲಹೆ ನೀಡಿದೆ.

ಸೈನಿಕ ಕಲ್ಯಾಣ ಮತ್ತು ಪುನರ್‌ವಸತಿ ಇಲಾಖೆಯ ಮಾಜಿ ಸೈನಿಕರು, ಯುದ್ಧದಂತಹ ಕಾರ್ಯಾಚರಣೆಯಲ್ಲಿ ಮಡಿದ ಯೋಧರ ಕುಟುಂಬದವರಿಗೆ, ಅಂಗವಿಕಲರಾದ ಸೈನಿಕರಿಗೆ, ಸೇವಾನಿರತ ಸೈನಿಕರಿಗೆ ಮತ್ತು ಅವರ ಅವಲಂಬಿತರ ಕಲ್ಯಾಣ ಹಾಗೂ ಪುನರ್‌ವಸತಿ ಕಲ್ಪಿಸಲು ಕಂದಾಯ ಇಲಾಖೆಯ ಭೂಮಿಯನ್ನು ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT