ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಅಕ್ರಮ: ಪ್ರತಿಷ್ಠೆಯ ಫಲಿತಾಂಶಕ್ಕೆ ಸಾಮೂಹಿಕ ನಕಲು?

ವಿವಿಧ ಆಯಾಮಗಳಲ್ಲಿ ಪೊಲೀಸರ ತನಿಖೆ
Last Updated 26 ಮೇ 2022, 20:29 IST
ಅಕ್ಷರ ಗಾತ್ರ

ರಾಮನಗರ: ಉತ್ತಮ ಫಲಿತಾಂಶದ ಪ್ರತಿಷ್ಠೆಗೆ ಬಿದ್ದು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲಿಗೆ ಅವಕಾಶ ಮಾಡಿಕೊಟ್ಟಿರುವ ಸಂಗತಿ ಪೊಲೀಸ್‌ ತನಿಖೆ ವೇಳೆ ಬಹಿರಂಗಗೊಂಡಿದೆ.

ಪರೀಕ್ಷಾ ಅಕ್ರಮದ ಆರೋಪದ ಮೇಲೆ ಬಂಧಿತರಾಗಿರುವ ಮಾಗಡಿಯ ಒಬ್ಬ ಪ್ರಾಚಾರ್ಯ, ಕ್ಲರ್ಕ್, ಏಳು ಶಿಕ್ಷಕ
ರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಫಲಿತಾಂಶ ಉತ್ತಮಪಡಿಸುವ ಸಲುವಾಗಿಯೇ ಈ ಕಾರ್ಯಕ್ಕೆ ಮುಂದಾಗಿದ್ದಾಗಿ ಅವರು ಬಾಯಿಬಿಟ್ಟಿದ್ದಾರೆ.

ಪರೀಕ್ಷೆಯಲ್ಲಿ ಅಕ್ರಮವೆಸಗಿ ಹಣ ಮಾಡುವ ಉದ್ದೇಶದಿಂದ ಆರೋಪಿಗಳು ಈ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರಿಗೆ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಬೇರೆ ಜಿಲ್ಲೆಗಳಿಗೆ ಪ್ರಶ್ನೆಪತ್ರಿಕೆ ಕಳುಹಿಸಿಕೊಟ್ಟಿರುವ ಸಾಧ್ಯತೆಗಳೂ ಇಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಾಖಲಾತಿ ಹೆಚ್ಚಿಸಿಕೊಳ್ಳಲು ಖಾಸಗಿ ಶಾಲೆಗಳು ಪೈಪೋಟಿಗೆ ಬಿದ್ದಿದ್ದು, ಅದಕ್ಕಾಗಿ ಶೇ 100ರ ಫಲಿತಾಂಶದ ಬೆನ್ನು ಬಿದ್ದಿವೆ. ಸರ್ಕಾರಿ ಶಾಲೆಗಳಲ್ಲಿ ಸಹ ಉತ್ತಮ ಫಲಿತಾಂಶ ಬರಲೇ ಬೇಕು ಎಂದು ಅಧಿಕಾರಿಗಳ ಒತ್ತಡ ಹೆಚ್ಚಿದೆ. ಈ ಎಲ್ಲವೂ ಪರೋಕ್ಷವಾಗಿ ಸಾಮೂಹಿಕ ನಕಲಿಗೆ ಪ್ರಚೋದನೆ ನೀಡಿವೆ ಎನ್ನಲಾಗಿದೆ.

ಸಾಮೂಹಿಕ ನಕಲು: ಅಕ್ರಮ ನಡೆದಿದೆ ಎನ್ನಲಾದ ಮಾಗಡಿಯ ರಂಗನಾಥಸ್ವಾಮಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 54 ಬಾಲಕರು ಹಾಗೂ 90 ಬಾಲಕಿಯರೂ ಸೇರಿದಂತೆ ಒಟ್ಟು 144 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 7 ಕೊಠಡಿಗಳಲ್ಲಿ ಪರೀಕ್ಷೆಗಳು ನಡೆದಿವೆ. ಮಾಗಡಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಮಾಗಡಿಯ ಇತರ ಮೂರು ಪರೀಕ್ಷಾ ಕೇಂದ್ರಗಳಲ್ಲಿನ ಸಿಬ್ಬಂದಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಜಾಲಾಡತೊಡಗಿದ್ದಾರೆ.

ಪರೀಕ್ಷೆ ಆರಂಭಗೊಂಡ ಒಂದು ಗಂಟೆ ಬಳಿಕ ವಿದ್ಯಾರ್ಥಿಗಳಿಗೆ ಉತ್ತರ ಹೇಳಿ ಕೊಡಲಾಗುತ್ತಿತ್ತು. ಈ ಸಂದರ್ಭ ಕೊಠಡಿ ಮೇಲ್ವಿಚಾರಕರೇ ಹೊರಗೆ ನಿಲ್ಲುತ್ತಿದ್ದರು ಎನ್ನಲಾಗಿದೆ. ಹೀಗಾಗಿ ಅಷ್ಟೂ ವಿದ್ಯಾರ್ಥಿಗಳು ಒಂದೇ ರೀತಿ ಉತ್ತರ ಬರೆದಿರುವ ಸಾಧ್ಯತೆ ಇದೆ. ಮಾಗಡಿ ಮಾತ್ರವಲ್ಲ, ಇತರೆ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿಯೂ ಈ ರೀತಿ ಅಕ್ರಮ ನಡೆದಿರುವ ಸುದ್ದಿ ದಟ್ಟವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮೌಲ್ಯಮಾಪನದ ವೇಳೆಯೂ ಇದಕ್ಕೆ ಪೂರಕ ಸಾಕ್ಷ್ಯಗಳು ದೊರೆತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ಈಗಾಗಲೇ ತನಿಖಾ ತಂಡ ರಚಿಸಿದೆ.

*

ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಈ ಅಕ್ರಮದಲ್ಲಿ ಭಾಗಿ ಆಗಿದ್ದಾಗಿ ಆರೋಪಿಗಳು ಹೇಳಿದ್ದಾರೆ. ಹಣಕ್ಕಾಗಿ ಉತ್ತರ ಹೇಳಿಕೊಟ್ಟಿರುವ ಸಾಧ್ಯತೆ ಕಡಿಮೆ.
-ಕೆ. ಸಂತೋಷ್‌ ಬಾಬು, ಎಸ್‌.ಪಿ ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT