ಶುಕ್ರವಾರ, ಡಿಸೆಂಬರ್ 3, 2021
20 °C
ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಎಸ್‌ಟಿ ಮೀಸಲಾತಿ ಹೆಚ್ಚಳ: ಕಾನೂನು ಚೌಕಟ್ಟಿನಲ್ಲಿ ಕ್ರಮ– ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಬೇಕೆಂಬ ವಾಲ್ಮೀಕಿ ಸಮುದಾಯದ ಬೇಡಿಕೆಯನ್ನು ಕಾನೂನು ಚೌಕಟ್ಟಿನಲ್ಲಿ ಈಡೇರಿಸಿ ನ್ಯಾಯ ಒದಗಿಸಲು ಸರ್ವ ಪ್ರಯತ್ನ ಮಾಡುತ್ತೇನೆ. ಆದರೆ, ಇದು‌ ಅಷ್ಟು ಸುಲಭ ಅಲ್ಲ. ಸವಾಲಿನ ಕೆಲಸ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ಬುಧವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಸಮುದಾಯದ ಜನಸಂಖ್ಯೆ ಹೆಚ್ಚಿದೆ. ಅದಕ್ಕೆ ಪೂರಕವಾಗಿ ಆಶೋತ್ತರಗಳೂ ಹೆಚ್ಚಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ಪ್ರಯತ್ನ ನಡೆಸಿದ್ದೇನೆ. ಆದರೆ, ಇದನ್ನು ಶೇ 50ರ ಮಿತಿಯ ಒಳಗೆ ಮಾಡಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ವಾಲ್ಮೀಕಿ ಸಮುದಾಯದ ಶ್ರೀಗಳ ಆಶೀರ್ವಾದ ಮುಖ್ಯ’ ಎಂದರು.

‘ಕಾನೂನು ಚೌಕಟ್ಟಿನಲ್ಲಿ ಯಾವ ರೀತಿ ಮೀಸಲಾತಿ ಹೆಚ್ಚಿಸಬಹುದೆಂಬ ಬಗ್ಗೆ ಕಾನೂನು ತಜ್ಞರ ಸಮಿತಿ ರಚಿಸಲಾಗಿದೆ. ಸಾಮಾಜಿಕ ತಜ್ಞರ ಸಲಹೆ, ಸೂಚನೆಯನ್ನೂ ಪಡೆಯುತ್ತೇನೆ. ನಾಡಿನ ಹಿತ ಮತ್ತು ಜನಾಂಗದ ಹಿತ ಗಮನದಲ್ಲಿಟ್ಟು ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಅದಕ್ಕೆ ನಾನು ತಯಾರಿದ್ದೇನೆ. ಎಲ್ಲ ಸಮುದಾಯಗಳಿಗೂ ನ್ಯಾಯ ಕೊಡುತ್ತೇನೆ’ ಎಂದೂ ಹೇಳಿದರು.

‘ಮೀಸಲಾತಿ ಕುರಿತು ಪುನರ್‌ ಚರ್ಚೆ, ಪುನರ್‌ ತೀರ್ಮಾನ ಇಡೀ ದೇಶದಲ್ಲಿ ಆಗಬೇಕಿದೆ. ಎಲ್ಲ ಸಮುದಾಯಗಳ ಆಶೋತ್ತರಗಳು ಹೆಚ್ಚಾಗಿದೆ. ಇದನ್ನು ಅರ್ಥ ಮಾಡಿಕೊಂಡು ಪ್ರಧಾನಿ ನರೇಂದ್ರ ಮೋದಿ ಆರ್ಥಿಕವಾಗಿ ದುರ್ಬಲ ಇದ್ದವರಿಗೂ ಶೇ 10ರಷ್ಟು ಮೀಸಲಾತಿ ತೀರ್ಮಾನ ತೆಗೆದುಕೊಂಡಿದ್ದಾರೆ‘ ಎಂದರು.

‘ನಾನು ಮುಖ್ಯಮಂತ್ರಿ ಆಗುತ್ತಿದ್ದಂತೆ ಎಸ್‌ಟಿ ಜನಾಂಗಕ್ಕೆ ಪ್ರತ್ಯೇಕ ಸಚಿವಾಲಯ ರಚನೆ ಮಾಡಿದ್ದೇನೆ. ಇಲಾಖೆಗೆ ₹ 7,600 ಕೋಟಿ ಅನುದಾನ ನೀಡಲಾಗಿದೆ. ಸಮುದಾಯದ ಅಭಿವೃದ್ಧಿಗೆ ಇದು ಸಹಾಯಕವಾಗಲಿದೆ. ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಭೂ ಒಡೆತನ ಕಾರ್ಯಕ್ರಮ ಮಾಡಿದ್ದೇವೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜಮೀನು ಕೊಡಬೇಕು  ಎನ್ನುವುದು ನನ್ನ ಸರ್ಕಾರದ ಸಂಕಲ್ಪ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ. ಶಿಕ್ಷಣ, ಉದ್ಯೋಗ ಮತ್ತು ಸಬಲೀಕರಣ ಈ ಮೂರು ಸೂತ್ರಗಳಿಂದ ಸಮಾಜ ಕಲ್ಯಾಣ ಇಲಾಖೆಯನ್ನು ನಡೆಸಲು ತೀರ್ಮಾನಿಸಿದ್ದೇನೆ’ ಎಂದರು.

‘ಎಸ್‌ಸಿ, ಎಸ್‌ಟಿ‌ ಹೆಣ್ಣು ಮಕ್ಕಳಿಗೆ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ನಬಾರ್ಡ್‌ ಜೊತೆ ಮಾತನಾಡಿದ್ದೇನೆ. ಈ ಸಮುದಾಯದ ಹೆಣ್ಣು ಮಕ್ಕಳು ಆರ್ಥಿಕವಾಗಿ ಸ್ವಾವಲಂಬನೆ ಆಗಬೇಕು’ ಎಂದೂ ಹೇಳಿದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ಶ್ರೀರಾಮುಲು‌ ಮಾತನಾಡಿ, ‘ವಾಲ್ಮೀಕಿ ಜಯಂತಿ ಆಚರಣೆಯನ್ನು ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಸರ್ಕಾರದ ವತಿಯಿಂದ ಆಚರಣೆಗೆ ತಂದಿದ್ದರು. ಇದೀಗ ಪರಿಶಿಷ್ಟ ವರ್ಗಕ್ಕೆ ಇಲಾಖೆಗೆ ಸಚಿವಾಲಯ ರಚಿಸಲಾಗಿದೆ’ ಎಂದರು. 

‘ವಾಲ್ಮೀಕಿ ಮೀಸಲಾತಿ ಹೋರಾಟ ನಡೆದಿದೆ. ಮೀಸಲಾತಿ ಬಗ್ಗೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ‌ ಹಿಂದಿದ್ದಾರೆ. ಮುಖ್ಯಮಂತ್ರಿ ಮೀಸಲಾತಿ ಹೆಚ್ಚಿಸುತ್ತಾರೆಂಬ ವಿಶ್ವಾಸವೂ ಇದೆ‘ ಎಂದರು.

‘ಪರಿಶಿಷ್ಟ ವರ್ಗದ ಕಲ್ಯಾಣಕ್ಕೆ₹ 7 ಸಾವಿರ ಕೋಟಿಗೂ ಹೆಚ್ಚು ಅನುದಾನನ್ನು ಮುಖ್ಯಮಂತ್ರಿ ನೀಡಿದ್ದಾರೆ. ಮುಂದೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ಸರ್ಕಾರ ನೀಡಲಿದೆ. ಬುಡಕಟ್ಟು ಜನರ ಅಭಿವೃದ್ಧಿಗೂ ಸರ್ಕಾರ ಬದ್ಧವಾಗಿದೆ’ ಎಂದರು.

ಪ್ರಶಸ್ತಿ ಪ್ರದಾನ: 2020 ರ ಸಾಲಿಗೆ ಐದು ಸಾಧಕರು ಮತ್ತು 2021 ನೇ ಸಾಲಿಗೆ ಆರು ಸಾಧಕರು ಸೇರಿ ಒಟ್ಟು 11 ಜನರಿಗೆ ‘ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ’ಯನ್ನು ಮುಖ್ಯಮಂತ್ರಿ ಪ್ರದಾನ ಮಾಡಿದರು. ಡಾ.ಕೆ.ಆರ್.ಪಾಟೀಲ, (ಸಾಮಾಜಿಕ ಸೇವೆ), ಬಿ.ಎಲ್‌.ವೇಣು (ಸಾಹಿತ್ಯ), ಗೌರಿ ಕೊರಗ (ಸಮಾಜ ಸೇವೆ), ಮಾರಪ್ಪ ನಾಯಕ (ಸಂಘಟನೆ), ತಿಪ್ಪೇಸ್ವಾಮಿ.ಎಚ್ (ಸಮಾಜ ಸೇವೆ), ಕೆ. ಸಿ ನಾಗರಾಜು (ಸಮಾಜ ಸೇವೆ), ಲಕ್ಷ್ಮಿ ಗಣಪತಿ ಸಿದ್ದಿ (ಸಮಾಜ ಸೇವೆ), ಪ್ರೊ.ಎಸ್‌.ಆರ್‌.ನಿರಂಜನ (ಶಿಕ್ಷಣ ಕ್ಷೇತ್ರ), ಭಟ್ರಹಳ್ಳಿ ಗೂಳಪ್ಪ (ಸಮಾಜ ಸೇವೆ), ಅಶ್ವತ್ಥರಾಮಯ್ಯ (ಸಮಾಜ ಸೇವೆ), ಜಂಬಯ್ಯ ನಾಯಕ (ಸಮಾಜ ಸೇವೆ) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರಿಗೆ ₹ 5 ಲಕ್ಷ ನಗದು, 20 ಗ್ರಾಂ ಚಿನ್ನದ ಪದಕದ ಜೊತೆಗೆ ಫಲಕವನ್ನು ನೀಡಲಾಯಿತು.

ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್‌.ವಿ. ರಾಮಚಂದ್ರ, ವಿಧಾನ ಪರಿಷತ್‌ ಸದಸ್ಯ ಶಾಂತರಾಮ ಸಿದ್ಧಿ, ಜನರಲ್‌ ರೆಸಾರ್ಟ್ ಅಧ್ಯಕ್ಷ ಅಪ್ಪಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು