ಗುರುವಾರ , ಮೇ 13, 2021
18 °C
ಪ್ರಚಾರಕ್ಕಷ್ಟೇ ಸೀಮಿತ: ಕರೆ ಸ್ವೀಕರಿಸುವರೇ ಇಲ್ಲದ ದುಸ್ಥಿತಿ

ಉಸಿರಾಟ ನಿಲ್ಲಿಸಿದ ಆಮ್ಲಜನಕ ‘ವಾರ್‌‌‘ ರೂಂ!

ರಾಜೇಶ ರೈ ಚಟ್ಲ Updated:

ಅಕ್ಷರ ಗಾತ್ರ : | |

PV photo

ಬೆಂಗಳೂರು: ರಾಜ್ಯದಾದ್ಯಂತ ಕೋವಿಡ್‌ ರೋಗಿಗಳು ಉಸಿರಾಟ ಸಮಸ್ಯೆ ತೀವ್ರಗೊಂಡು ನರಳಾಡುತ್ತಿದ್ದರೆ, ಜೀವರಕ್ಷಕ ವೈದ್ಯಕೀಯ ಆಮ್ಲಜನಕದ ತುರ್ತು ಅಗತ್ಯವಿರುವ ಆಸ್ಪತ್ರೆಗಳಿಗೆ ಅನುಕೂಲ ಮಾಡಿಕೊಡಲು (ಫೆಸಿಲಿಟೇಟ್‌) ರಾಜ್ಯ ಸರ್ಕಾರ ಆರಂಭಿಸಿರುವ ‘ವಾರ್‌ ರೂಂ’ ಉಸಿರಾಡುತ್ತಿಲ್ಲ!

ಆಮ್ಲಜನಕ ಕೊರತೆ ತೀವ್ರಗೊಳ್ಳುತ್ತಿರುವ ಮುನ್ಸೂಚನೆ ಸಿಗುತ್ತಿದ್ದಂತೆ, ಔಷಧ ನಿಯಂತ್ರಕರ ಕಚೇರಿಯಲ್ಲಿ ಸ್ಥಿರ ದೂರವಾಣಿ ಸಂಖ್ಯೆ (080–22262846), ಮೊಬೈಲ್ (9448478874) ಸಂಖ್ಯೆ ಸಮೇತ ‘ವಾರ್‌ ರೂಂ‘ ಅನ್ನು ಸರ್ಕಾರ ಏ. 8 ರಂದು ಆರಂಭಿಸಿತ್ತು. ರಾಜ್ಯದಾದ್ಯಂತ ಆಸ್ಪತ್ರೆಗಳು, ವೈದ್ಯರು, ಸಾರ್ವಜನಿಕರು ಸೇರಿದಂತೆ ಎಲ್ಲ ಭಾಗಿದಾರರು ಈ ಸೌಲಭ್ಯ ಬಳಸಿಕೊಳ್ಳಬಹುದು ಎಂದು ಔಷಧ ನಿಯಂತ್ರಕರು ಸುತ್ತೋಲೆಯಲ್ಲಿ ತಿಳಿಸಿದ್ದರು. ಆದರೆ, ಇದು ನಾಮ್‌ಕೆ ವಾಸ್ತೆ ಎಂಬಂತಾಗಿದೆ. ಈ ಸಂಖ್ಯೆಗಳಿಗೆ ಕರೆ ಮಾಡಿದರೆ ಸ್ವೀಕರಿಸುವವರೇ ಇಲ್ಲ!

ಔಷಧ ನಿಯಂತ್ರಕ (ಭಾಗೋಜಿ ಟಿ ಖಾನಾಪುರೆ), ಹೆಚ್ಚುವರಿ ಔಷಧ ನಿಯಂತ್ರಕ (ಅಮರೇಶ ತುಂಬರಗಿ), ಉಪ ಮತ್ತು ಸಹಾಯಕ ಔಷಧ ನಿಯಂತ್ರಕರ ಪೈಕಿ ಐವರು, ಮೂರು ಪಾಳಿಯಲ್ಲಿ ಮೇಲುಸ್ತುವಾರಿಗೆಂದು ತಲಾ ಮೂವರು, ಸದಸ್ಯರೆಂದು ತಲಾ 10 ಸಿಬ್ಬಂದಿ ಹೀಗೆ ಈ ವಾರ್ ರೂಮ್‌ಗೆ ನೇಮಕ ಮಾಡಿಕೊಳ್ಳಲಾಗಿದೆ. ಬಂದ ಕರೆಯನ್ನು ಸ್ವೀಕರಿಸಿ, ಆಯಾ ವೃತ್ತದ ಔಷಧ ಸಹಾಯಕ ನಿಯಂತ್ರಕರಿಗೆ ಮಾಹಿತಿ ನೀಡುವ ಕೆಲಸವನ್ನು ಸಿಬ್ಬಂದಿ ಮಾಡಬೇಕು. ಆದರೆ, ಈ ಸಿಬ್ಬಂದಿಯ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದರೆ ಅನೇಕರದ್ದು ಸ್ವಿಚ್ಡ್‌ ಆಫ್‌. ಕೆಲವರದ್ದು ರಿಂಗಣಿಸಿದರೂ ಸ್ವೀಕರಿಸುವುದೇ ಇಲ್ಲ. ಇದು ಈ ವಾರ್‌ ರೂಂ ಕಾರ್ಯವೈಖರಿ!

‘ಅಯ್ಯೋ ಈ ವಾರ್‌ ರೂಂ ಬಗ್ಗೆ ಯಾಕೆ ಕೇಳುತ್ತೀರಿ. ಅದರಿಂದ ಯಾವುದೇ ಪ್ರಯೋಜನ ಇಲ್ಲ. ಆರಂಭವಾದ ಮೊದಲ ಎರಡು ದಿನ ಕರೆ ಸ್ವೀಕರಿಸಿ, ‘ಆ ಮೇಲೆ ಕರೆ ಮಾಡುತ್ತೇವೆ’ ಎಂದಿದ್ದು ಬಿಟ್ಟರೆ ಇನ್ನೇನೂ ಮಾಡಿಲ್ಲ. ಮತ್ತೆ ಕರೆ ಮಾಡಿದರೆ, ‘ಯಾಕ್ರೀ... ಪದೇ ಪದೇ ಕರೆ ಮಾಡುತ್ತೀರಾ, ಗೊತ್ತಾಗಲ್ವಾ ನಿಮಗೆ’ ಎಂದು ನಮ್ಮನ್ನೇ ದಬಾಯಿಸುತ್ತಾರೆ’ ಎಂದು ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂ ಅಸೋಸಿಯೇಷನ್‌ (ಫನಾ) ಅಧ್ಯಕ್ಷ ಡಾ. ಪ್ರಸನ್ನ ಎಚ್.ಎಂ. ಆಕ್ರೋಶ ವ್ಯಕ್ತಪಡಿಸಿದರು.

‘ಆಮ್ಲಜನಕ ಸಿಗದೆ ತುಂಬಾ ಕಷ್ಟವಾಗಿದೆ. ಎಲ್ಲ ಆಸ್ಪತ್ರೆಗಳ ಮಾಲೀಕರೂ ಗೋಗರೆಯುತ್ತಿದ್ದಾರೆ. ಜನರು ಅಳುತ್ತಿದ್ದಾರೆ. ಪೂರೈಕೆದಾರರರ ಕಾಲಿಗೆ ನಮಸ್ಕರಿಸಿ ಆಮ್ಲಜನಕ ಪಡೆಯಬೇಕಾದ ಸ್ಥಿತಿ ಬಂದಿದೆ. ಇದೀಗ ಕೆಪಿಎಂಇ ಪೋರ್ಟಲ್‌ನಲ್ಲಿ ಆಮ್ಲಜನಕ ಮತ್ತು ರೆಮ್‌ಡಿಸಿವಿರ್‌ ಚುಚ್ಚುಮದ್ದು ಅಗತ್ಯದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಸಂಗ್ರಹದಲ್ಲಿ ಎಷ್ಟಿದೆ, ಬೇಡಿಕೆ ಎಷ್ಟು ಎಂದು ಮಾಹಿತಿ ನೀಡಿದ್ದೇವೆ. ಎಲ್ಲ ಆಸ್ಪತ್ರೆಯವರು ಆಮ್ಲಜನಕ ಬೇಡಿಕೆ ಬಗ್ಗೆ ಇಂಡೆಂಟ್ ಹಾಕಿದ್ದಾರೆ. ಪೂರೈಸುವ ಭರವಸೆ ಸಿಕ್ಕಿದೆ. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ. ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ ಒಂದೊಮ್ಮೆ ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸುತ್ತಿದ್ದರೆ 24 ಗಂಟೆಗಳಲ್ಲಿ ಆಸ್ಪತ್ರೆಯ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳುತ್ತಿದ್ದರು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು