ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲವ್‌ ಜಿಹಾದ್‌ ತಡೆಗೆ ಪ್ರಬಲ ಕಾನೂನು: ಬಿಜೆಪಿ ಕೋರ್‌ ಕಮಿಟಿಯಲ್ಲಿ ಅಸ್ತು

ಹಿಂದುತ್ವದ ಅಜೆಂಡಾಕ್ಕೆ ಬಿಜೆಪಿ ಕೋರ್‌ ಕಮಿಟಿ ಅಸ್ತು l ಗೋ ಹತ್ಯೆ ನಿಷೇಧ ಕಾನೂನು ಬಲಪಡಿಸಲು ಸಲಹೆ
Last Updated 5 ನವೆಂಬರ್ 2020, 16:51 IST
ಅಕ್ಷರ ಗಾತ್ರ

ಮಂಗಳೂರು: ಲವ್‌ ಜಿಹಾದ್ ಹೆಸರಿನಲ್ಲಿ ಮತಾಂತರ ತಡೆ ಹಾಗೂ ಗೋಹತ್ಯೆ ನಿಷೇಧಕ್ಕೆ ಪ್ರಬಲ ಕಾನೂನು ರೂಪಿಸಲು ಬಿಜೆಪಿ ಕೋರ್‌ ಕಮಿಟಿ ಒಪ್ಪಿಗೆ ನೀಡಿದ್ದು, ಹಿಂದುತ್ವದ ಅಜೆಂಡಾ ಜಾರಿಗೊಳಿಸುವ ಸಂದೇಶವನ್ನು ಕರಾವಳಿಯಿಂದಲೇ ರವಾನಿಸಿದೆ.

ನಗರದಲ್ಲಿ ಗುರುವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಹಾಗೂ ಕೋರ್‌ ಕಮಿಟಿ ಸಭೆ ಎರಡಲ್ಲೂ ಈ ಬಗ್ಗೆ ಚರ್ಚೆಯಾಗಿದೆ. ಲವ್‌ ಜಿಹಾದ್ ಹೆಸರಿನಲ್ಲಿ ನಡೆಯುತ್ತಿರುವ ಮತಾಂತರವನ್ನು ತಡೆಯಲು ಕಾನೂನು ತಜ್ಞರು, ವಿವಿಧ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚಿಸಿ, ಸಮಗ್ರವಾದ ಕಾನೂನು ರೂಪಿಸುವಂತೆ ಕಮಿಟಿಯ ಸದಸ್ಯರು ಸಲಹೆ ನೀಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ತಿಳಿಸಿದರು.

2008 ರಲ್ಲಿ ಯಡಿಯೂರಪ್ಪ ನೇತೃತ್ವದ ಸರ್ಕಾರ ರೂಪಿಸಿದ್ದ ಗೋಹತ್ಯೆ ನಿಷೇಧ ಕಾನೂನಿಗೆ ಮತ್ತಷ್ಟು ಬಿಗಿ ಕ್ರಮಗಳನ್ನು ಅಳವಡಿಸಲು ಕೋರ್‌ ಕಮಿಟಿ ಸಭೆ ಸರ್ಕಾರಕ್ಕೆ ಸಲಹೆ ನೀಡಿದೆ ಎಂದರು.

ಗ್ರಾ.ಪಂ. ಚುನಾವಣೆಗೆ ಸನ್ನದ್ಧ: ಬರಲಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ತಯಾರಿ ಆರಂಭಿಸಿದ್ದು, ಗ್ರಾಮೀಣ ಮಂಡಲಗಳಲ್ಲಿ ವಾರ್‌ ರೂಮ್‌, ಕಾಲ್ ಸೆಂಟರ್‌ ಸ್ಥಾಪನೆಗೆ ನಿರ್ಧರಿಸಲಾಗಿದೆ. ಬೂತ್‌ ಮಟ್ಟದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಮಹಿಳೆ ಹಾಗೂ ಸಾಮಾನ್ಯ ವರ್ಗದ ತಲಾ ಒಬ್ಬರು ಸದಸ್ಯರನ್ನು ಒಳಗೊಂಡ ‘ಪಂಚರತ್ನ’ ಸಮಿತಿಯನ್ನು ರಚಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕುಟುಂಬ ಮಿಲನ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಯಡಿಯೂರಪ್ಪ ನೇತೃತ್ವದಲ್ಲಿ ವಿಶ್ವಾಸ

ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿರುವ ಕೋರ್‌ ಕಮಿಟಿ, ಉಳಿದ ಅವಧಿಗೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲು ಒಕ್ಕೊರಲಿನ ಸಮ್ಮತಿ ನೀಡಿದೆ ಎಂದು ತಿಳಿದು ಬಂದಿದೆ.

‘ನಾಯಕತ್ವ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಮಾತ್ರ ಮಾತನಾಡುತ್ತಿದ್ದಾರೆ. ಅದು ನಮಗೆ ವಿಷಯವೇ ಅಲ್ಲ’ ಎನ್ನುವ ಮೂಲಕ ಯಡಿಯೂರಪ್ಪ ನೇತೃತ್ವದಲ್ಲಿ ಕೋರ್ ಕಮಿಟಿ ಒಕ್ಕೊರಲ ವಿಶ್ವಾಸ ವ್ಯಕ್ತಪಡಿಸಿದೆ ಎಂದು ಅರವಿಂದ ಲಿಂಬಾವಳಿ ಪರೋಕ್ಷವಾಗಿ
ತಿಳಿಸಿದರು. ಆರ್.ಆರ್‌. ನಗರ, ಶಿರಾ ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಬಳಿಕವೇ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಸಭೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

‘ಪಂಚಾಯಿತಿ ಚುನಾವಣೆಯಲ್ಲಿಶೇ 80ರಷ್ಟು ಗೆಲುವು’

ಕಾರ್ಯಕಾರಿಣಿ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ‘ಮುಂಬರುವ ಪಂಚಾಯಿತಿ ಚುನಾವಣೆಗಳಲ್ಲಿ ಶೇ 80ರಷ್ಟು ಗೆಲುವು ಸಾಧಿಸಲಿದೆ. ಈಗ ಬಿಜೆಪಿಯ ಸುವರ್ಣ ಯುಗವಾಗಿದ್ದು, ವಿರೋಧ ಪಕ್ಷಗಳಿಗೆ ಒಂದಲ್ಲ, ಅರ್ಧ ಸ್ಥಾನವನ್ನೂ ಬಿಟ್ಟುಕೊಡುವುದಿಲ್ಲ’ ಎಂದರು.

‘ಕರಾವಳಿಯ ಸಂಘಟನಾತ್ಮಕ ಮಾದರಿಯನ್ನು ರಾಜ್ಯದೆಲ್ಲೆಡೆ ಅನುಸರಿಸಲಾಗುವುದು. ಪಕ್ಷ ಬಲವರ್ಧನೆಗಾಗಿ ಪ್ರತಿ ತಿಂಗಳು ಬೇರೆ ಬೇರೆ ಜಿಲ್ಲೆಗಳಲ್ಲಿ ಕಾರ್ಯಕಾರಿಣಿ ಆಯೋಜಿಸಲಾಗುವುದು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಸೀಟು ಗೆಲ್ಲಲು, ಪ್ರತಿ ಮತಗಟ್ಟೆಯನ್ನೂ ಸಂಘಟನಾತ್ಮಕವಾಗಿ ಬಲಪಡಿಸಲಾಗುವುದು’ ಎಂದರು.

ಕೇಂದ್ರ ಸರ್ಕಾರದ ಸಾಧನೆಗಳಿಗೆ ಒತ್ತು ನೀಡಿ ಮಾತನಾಡಿದ ಕೇಂದ್ರ ಸಚಿವ ಸದಾನಂದ ಗೌಡ, ‘ಮುಂದಿನ ವರ್ಷ ಜಿಡಿಪಿ ಶೇ 8.5 ರಷ್ಟು ಸಾಧಿಸಲಿದ್ದೇವೆ’ ಎಂದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಮಾರೋಪ ಭಾಷಣ ಮಾಡಿದರು.

ಯಡಿಯೂರಪ್ಪ ನೇತೃತ್ವದಲ್ಲಿ ವಿಶ್ವಾಸ

ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ವಿಶ್ವಾಸ ವ್ಯಕ್ತಪಡಿಸಿರುವ ಕೋರ್‌ ಕಮಿಟಿ, ಉಳಿದ ಅವಧಿಗೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲು ಒಕ್ಕೊರಲಿನ ಸಮ್ಮತಿ ನೀಡಿದೆ ಎಂದು ತಿಳಿದು ಬಂದಿದೆ.

‘ನಾಯಕತ್ವ ಬದಲಾವಣೆ ಬಗ್ಗೆ ಸಿದ್ದರಾಮಯ್ಯ ಮಾತ್ರ ಮಾತನಾಡುತ್ತಿದ್ದಾರೆ. ಅದು ನಮಗೆ ವಿಷಯವೇ ಅಲ್ಲ’ ಎನ್ನುವ ಮೂಲಕ ಯಡಿಯೂರಪ್ಪ ನೇತೃತ್ವದಲ್ಲಿ ಕೋರ್ ಕಮಿಟಿ ಒಕ್ಕೊರಲ ವಿಶ್ವಾಸ ವ್ಯಕ್ತಪಡಿಸಿದೆ ಎಂದು ಅರವಿಂದ ಲಿಂಬಾವಳಿ ಪರೋಕ್ಷವಾಗಿ ತಿಳಿಸಿದರು.

ಅಶೋಕ ಗಸ್ತಿ ನಿಧನದಿಂದ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಹಿಂದುಳಿದ ವರ್ಗ, ಪ್ರಾದೇಶಿಕ ಸಮಾನತೆ, ಪಕ್ಷ ನಿಷ್ಠೆ ಎಲ್ಲವನ್ನೂ ಪರಿಗಣಿಸಿ, ನಾಲ್ವರ ಹೆಸರನ್ನು ಕೇಂದ್ರ ಸಮಿತಿಗೆ ಶಿಫಾರಸು ಮಾಡಲು ಕೋರ್‌ ಕಮಿಟಿ ನಿರ್ಧರಿಸಿದೆ. ಅಶೋಕ ಗಸ್ತಿ ಅವರ ಪತ್ನಿಗೆ ಟಿಕೆಟ್ ನೀಡಲು ಸಮಿತಿಯ ಬಹುತೇಕ ಸದಸ್ಯರು ಒಲವು ಹೊಂದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಆರ್.ಆರ್‌. ನಗರ, ಶಿರಾ ಉಪ ಚುನಾವಣೆ, ವಿಧಾನ ಪರಿಷತ್ ಚುನಾವಣೆ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಸಭೆ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

***


ಯಾರು ಮಾಡುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಲವ್‌ ಜಿಹಾದ್ ಹೆಸರಿನಲ್ಲಿ ಮತಾಂತರ ತಡೆಯಲು ಕರ್ನಾಟಕದಲ್ಲಿ ಬಿಗಿ ಕಾನೂನು ಜಾರಿಗೊಳಿಸಲಾಗುವುದು.

- ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT