ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣದತ್ತ ವಿದ್ಯಾರ್ಥಿಗಳ ಸಂಖ್ಯೆ ಶೇ 50 ಹೆಚ್ಚಿಸುವ ಗುರಿ : ಡಿಸಿಎಂ

Last Updated 12 ಜುಲೈ 2021, 10:13 IST
ಅಕ್ಷರ ಗಾತ್ರ

ಧಾರವಾಡ: ‘ನೂತನ ಶಿಕ್ಷಣ ನೀತಿಯಿಂದಾಗಿ ಉನ್ನತ ಶಿಕ್ಷಣದತ್ತ ವಿದ್ಯಾರ್ಥಿಗಳ ಪ್ರವೇಶವನ್ನು ಶೇ 50ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ನೂನತ ಶಿಕ್ಷಣ ನೀತಿ ಕುರಿತಂತೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಸಮಾಲೋಚನಾ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಪದವಿಯಿಂದ ಉನ್ನತ ಶಿಕ್ಷಣಕ್ಕೆ ಪ್ರವೇಶಿಸುವವರ ಸಂಖ್ಯೆ ಶೇ 38 ಇತ್ತು. 2030ರ ಹೊತ್ತಿಗೆ ಈ ಪ್ರಮಾಣವನ್ನು ಹೆಚ್ಚಿಸಲಾಗುವುದು. ಜತೆಗೆ ಹೊಸ ಶಿಕ್ಷಣ ನೀತಿಯಿಂದಾಗಿ ಉದ್ಯೋಗ ಅಥವಾ ಉದ್ಯಮಕ್ಕೆ ಅಗತ್ಯವಿರುವ ಕೌಶಲವನ್ನು ಪಡೆಯುವ ಸಾಮರ್ಥ್ಯವಿರುವ ಅಭ್ಯರ್ಥಿಗಳನ್ನು ಸಜ್ಜುಗೊಳಿಸಲಾಗುವುದು. ಹೀಗಾಗಿ ಈ ಶೈಕ್ಷಣಿಕ ವರ್ಷದಿಂದಲೇ ಸರ್ಕಾರಿ ಕಾಲೇಜುಗಳಲ್ಲಿ ನೂತನ ಶಿಕ್ಷಣ ನೀತಿ ಜಾರಿಗೆ ಬರಲಿದೆ’ ಎಂದರು.

‘ನೂತನ ಶಿಕ್ಷಣ ನೀತಿಯಲ್ಲಿ ಮಾತೃಭಾಷೆಗೆ ಒತ್ತು ನೀಡುವುದೇ ನಮ್ಮ ಉದ್ದೇಶವಾಗಿದೆ. ಇದನ್ನು ಪ್ರಾಥಮಿಕ ಅಥವಾ ಪ್ರೌಢಶಾಲೆಗೆ ಮಾತ್ರವಲ್ಲ, ವೃತ್ತಿಪರ ಕೋರ್ಸ್‌ಗಳನ್ನೂ ಮಾತೃಭಾಷೆಯಲ್ಲಿ ಕಲಿಯುವಂತ ಯೋಜನೆ ರೂಪಿಸಲಾಗುತ್ತಿದೆ’ ಎಂದು ಡಾ. ಅಶ್ವತ್ಥನಾರಾಯಣ ಹೇಳಿದರು.

ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಸರ್ಕಾರದಲ್ಲಿ ಸದ್ಯ ಯಾವ ಸ್ಥಾನವೂ ಖಾಲಿ ಇಲ್ಲ. ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಮುಖ್ಯಮಂತ್ರಿ ಬದಲಾವಣೆ ಕುರಿತು ಚರ್ಚೆ ಎಲ್ಲಿಯೂ ನಡೆದಿಲ್ಲ. ನಮ್ಮಲ್ಲಿ ಸಂಪೂರ್ಣ ಒಗ್ಗಟ್ಟು ಇದೆ’ ಎಂದರು.

ಕೆಆರ್‌ಎಸ್‌ ಜಲಾಶಯದಲ್ಲಿ ಬಿರುಕು ವಿಷಯವಾಗಿ ಪ್ರತಿಕ್ರಿಯಿಸಿದ ಅವರು, ‘ಸಂಸದೆ ಸುಮಲತಾ ಹಾಗೂ ಜೆಡಿಎಸ್ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರ ಮಾತಿನ ಯುದ್ಧ ಮುಗಿದುಹೋಗಿದೆ. ಕೆಆರ್‌ಎಸ್‌ನಲ್ಲಿ ಯಾವುದೇ ಬಿರುಕು ಇಲ್ಲ ಎಂದು ವರದಿ ಹೇಳಿದೆ. ಯಾವುದೇ ಸಂದರ್ಭ ಬಂದರೂ ಸರ್ಕಾರ ಅದನ್ನು ಬಗೆಹರಿಸುತ್ತದೆ’ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿ ವರ್ಗಾವಣೆಯಲ್ಲಿನ ಭ್ರಷ್ಟಾಚಾರ ಆರೋಪ ಕುರಿತು ಪ್ರತಿಕ್ರಿಯಿಸಿದ ಡಾ. ಅಶ್ವತ್ಥನಾರಾಯಣ ಅವರು, ‘ಭ್ರಷ್ಟಾಚಾರ ಏನೇ ಇದ್ದರೂ ಅದು ಕಾಂಗ್ರೆಸ್‌ ಪಕ್ಷದಲ್ಲಿ ಮಾತ್ರ. ಕಾಂಗ್ರೆಸ್‌ನ ಈ ಸಂಸ್ಕೃತಿಯಿಂದಲೇ ದೇಶ ಅಧೋಗತಿಗೆ ಹೋಗಿತ್ತು. ಅಂಥವರು ನಮ್ಮ ಮೇಲೆ ಬೆರಳು ಮಾಡಿ ತೋರಿಸುವುದು ಸೂಕ್ತವಲ್ಲ. ನಮ್ಮ ಪಕ್ಷದಲ್ಲಿ ಪರ್ಸೆಂಟೇಜ್‌ ಅಥವಾ ಆರ್‌ಟಿಜಿಎಸ್‌ ಇಲ್ಲ’ ಎಂದು ತಿರುಗೇಟು ನೀಡಿದರು.

ರಮೇಶ ಜಾರಕಿಹೊಳಿ ಕುರಿತು ಮಾತನಾಡಿದ ಅವರು, ‘ರಮೇಶ ಜಾರಕಿಹೊಳಿ ಅವರು ನಮ್ಮ ಸರ್ಕಾರದಲ್ಲಿ ಸಚಿವರಾಗಿದ್ದವರು ಹಾಗೂ ನಮ್ಮ ನಾಯಕರು. ಅವರ ವಿರುದ್ಧ ಯಾವುದೇ ಷಡ್ಯಂತ್ರ ನಡೆದಿಲ್ಲ. ಅವರ ಮೇಲೆ ಬಂದಿರುವ ಆಪಾದನೆಗಳಿಂದ ಹೊರಬರುವ ವಿಶ್ವಾಸವಿದೆ. ಸದ್ಯ ತನಿಖೆ ಪ್ರಗತಿಯಲ್ಲಿದ್ದು, ಆಪಾದನೆಯಿಂದಮುಕ್ತರಾದ ಬಳಿಕ ಅವರಿಗೆ ಪಕ್ಷ ಅವಕಾಶ ಕೊಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT