ಮಂಗಳವಾರ, ಏಪ್ರಿಲ್ 20, 2021
31 °C

ಈಗಾಗಲೇ ಮೀಸಲಾತಿ ಪಟ್ಟಿಯಲ್ಲಿರುವ ಜಾತಿಗಳ ಸ್ಥಿತಿಗತಿ ಅಧ್ಯಯನ ಆಗಲಿ–ಕಾಂಗ್ರೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾತಿ ಗಣತಿ–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ‘ಹೊಸದಾಗಿ ಮೀಸಲಾತಿ ಪಟ್ಟಿಗೆ ಜಾತಿಗಳನ್ನು ಸೇರಿಸುವ ಮೊದಲು ಈಗಾಗಲೇ ಮೀಸಲಾತಿ ಪಟ್ಟಿಯಲ್ಲಿರುವ ಜಾತಿಗಳ ಸ್ಥಿತಿಗತಿ ಅಧ್ಯಯನ ನಡೆಸಬೇಕು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಬಹಿರಂಗಪಡಿಸಿ ಅದರಂತೆ ಮೀಸಲಾತಿ ಕಲ್ಪಿಸಬೇಕು’ ಎಂದು ಕಾಂಗ್ರೆಸ್ ಆಗ್ರಹಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪಿ.ಆರ್. ರಮೇಶ್, ‘ರಾಜ್ಯ ಹಿಂದುಳಿದ ಪಟ್ಟಿಯ ( 2002 ಮಾರ್ಚ್‌ 30 ಮಾರ್ಚ್​) ಅಧಿಸೂಚನೆಯ ಪ್ರಕಾರ ಇರುವ ಪ್ರವರ್ಗ 1 ಹಾಗೂ ಅದರಲ್ಲಿ ಇರುವ 95 ಜಾತಿಗಳು ಹಾಗೂ ಪ್ರವರ್ಗ 2ಎ ಯಲ್ಲಿರುವ 102 ಜಾತಿಗಳು, ಪ್ರವರ್ಗ 2ಬಿ ಯಲ್ಲಿ ಇರುವ ಒಂದು ಜಾತಿ ಮತ್ತು 3ಎ ದಲ್ಲಿ 3 ಜಾತಿಗಳು ಹಾಗೂ ಪ್ರವರ್ಗ 3ಬಿ ರಲ್ಲಿ ಇರುವ 6 ಜಾತಿಗಳ ನೈಜ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಬೇಕು’ ಎಂದರು.

‘ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯ ಬಗ್ಗೆ ಈಗಾಗಲೇ ಸಂವಿಧಾನದ ಅನುಚ್ಛೇದ 340ರ ಪ್ರಕಾರ ವಿಚಾರಣೆ ನಡೆಸಬೇಕು. ಅಷ್ಟೇ ಅಲ್ಲ, ಅವರ ಸ್ಥಿತಿಗತಿಗಳನ್ನು ಅರಿತು ಅವರು ಎದುರುಸುತ್ತಿರುವ ಸಮಸ್ಯೆಗಳ ಸುಧಾರಣೆಯ ಆದ್ಯತೆ ಮೇರೆಗೆ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ವಾರ್ಷಿಕ ಸುಮಾರು ₹ 400 ಕೋಟಿ ಅನುದಾನ ಒದಗಿಸಿ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿದ್ದರು’ ಎಂದರು.

‘ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವರದಿಯು ಬಿಡುಗಡೆಯಾದರೆ ರಾಜ್ಯದಲ್ಲಿ ನೆಲೆಸಿರುವ ಜಾತಿ , ಜನಾಂಗಗಳ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಹಾಗೂ ಮುಂದುವರೆದ ಜಾತಿಗಳ ಸೇರಿದಂತೆ) ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ನೈಜ ಚಿತ್ರಣ ಸಿಗಲಿದೆ. ರಾಜ್ಯ ಸರ್ಕಾರ ಈ ವರದಿಯನ್ನು ಪರಾಮರ್ಶಿಸಿ ದತ್ತಾಂಶಗಳನ್ನು ಉಲ್ಲೇಖಿಸಿ ಅಗತ್ಯ ಮಾನದಂಡಗಳನ್ನು ರೂಪಿಸಿ ಹಿಂದುಳಿದ ಜಾತಿ, ಜನಾಂಗಗಳ ಸ್ಥಿತಿಗತಿಗಳ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳಲು ಅವಕಾಶವಿದೆ’ ಎಂದರು.

‘ಈಗಾಗಲೇ ಸಂವಿಧಾನದ ಅನುಚ್ಛೇದ 15(6) ಮತ್ತು 16(6) ರ ಪ್ರಕಾರ ದೇಶದ ಎಲ್ಲ ಜನಾಂಗದಲ್ಲಿರುವ ಅರ್ಥಿಕ ದುರ್ಬಲ ವರ್ಗದವರಿಗೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಶೇ 10ರ ಮೀಸಲಾತಿ ಕಲ್ಪಿಸಿರುವುದು ಸ್ವಾಗತಾರ್ಹ. 2018ರಲ್ಲಿ ಕೇಂದ್ರ ಸರ್ಕಾರ ನ್ಯಾಯಾಲಯದ ಆದೇಶದ ಮೇರೆಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಅಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲಾಯಿತು. ಈ ಆಯೋಗವೂ ಹಿಂದುಳಿದ ಸಾಮಾಜಿಕ, ಶೈಕ್ಷಣಿಕ ಸುಧಾರಣೆಗೆ ಮತ್ತು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಅಥವಾ ತೆಗೆಯುವ ಶಿಪಾರಸು ಮಾಡಲು ರಚಿಸಲಾಗಿದೆ’ ಎಂದರು.

‘ಶ್ವಾಶತ ಹಿಂದುಳಿದ ಅಯೋಗದ ವತಿಯಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಾರ್ವಜನಿಕರ ಹಣ ಸುಮಾರು ₹ 162 ಕೋಟಿ ವೆಚ್ಚ ಮಾಡಿ ಸಿದ್ಧಪಡಿಸಿದ ವರದಿಯನ್ನು ರಾಜ್ಯ ಸರ್ಕಾರ ತಕ್ಷಣ ಪರಾಮರ್ಶಿಸಬೇಕು. ಅದರಲ್ಲಿ ಇರುವಂಥ ಅಂಕಿ ಅಂಶಗಳ ಪ್ರಕಾರ ಸಾಮಾಜಿಕ ನ್ಯಾಯ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಹಿಂದುಳಿದ ವರ್ಗಗಳ ಕಾಂಗ್ರೆಸ್‌ ಘಟಕದ ವಿಭಾಗದ ಅಧ್ಯಕ್ಷ ಎಂ.ಡಿ. ಲಕ್ಷ್ಮೀ ನಾರಾಯಣ್ ಮಾತನಾಡಿ, ‘2ಎ ಪ್ರವರ್ಗದಲ್ಲಿರುವ ಬಹುತೇಕರು ಹಿಂದುಳಿದ್ದೇವೆ. ಸರ್ಕಾರದ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ. ಮೀಸಲಾತಿ ವಿಚಾರದಲ್ಲಿ ವಿಚಿತ್ರವಾದ ಘಟನೆಗಳು ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಜಾತಿ ಜಾತಿಗಳ ನಡುವೆ ವ್ಯತ್ಯಾಸಗಳು ಹೆಚ್ಚಾಗುತ್ತಿದೆ. ವೆ. ಜಾತಿಗಳನ್ನು ಹೊಡೆಯುವ ಕೆಲಸ ಮಾಡುತ್ತಿದೆ’ ಎಂದರು.

‘ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಹಿಂದುಳಿದ ವರ್ಗಗಳಿಗೆ ₹ 4,000 ಕೋಟಿ ಮೀಸಲಿಟ್ಟಿದ್ದರು. ಆದರೆ, ಯಡಿಯೂರಪ್ಪ ಸರ್ಕಾರ ₹ 1,200 ಕೋಟಿ ಮಾತ್ರ ಮೀಸಲಿರಿಸಿದೆ. ಕನ್ನಡ ನಾಡಿದು. ಕನ್ನಡ ಮಾತಾಡುವವರು ಹೆಚ್ಚು ಇದ್ದಾರೆ. ಆದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ ₹ 2 ಕೋಟಿ ಇರಿಸಿದ್ದಾರೆ. ಬೇರೆ ಸಮುದಾಯಗಳಿಗೆ ನೂರಾರು ಕೋಟಿ ಮೀಸಲಿಡುತ್ತಿದ್ದಾರೆ. ವೀರಶೈವ ನಿಗಮ ಮಂಡಳಿಗೆ ರಾತ್ರೋರಾತ್ರಿ ₹ 500 ಕೋಟಿ ಇಟ್ಟಿದ್ದಾರೆ. ನಮ್ಮ ಸಮುದಾಯಗಳಿಗೆ ಹಿಂದೆ ಇದ್ದ ಅನುದಾನ ಕಡಿತ ಮಾಡಿರುವುದು ಸಮಂಜಸವಲ್ಲ, ಇದರ ವಿರುದ್ಧ ಧ್ವನಿ ಎತ್ತಬೇಕಿದೆ, ಹೀಗಾಗಿ ಮುಂದೆ ಒಂದು ದುಂಡು ಮೇಜಿನ ಸಭೆ ಮಾಡಿ, ಅದರ ಬಗ್ಗೆ ಚರ್ಚಿಸಿ ವರದಿಯನ್ನು ನೀಡುತ್ತೇವೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು