ಶನಿವಾರ, ಮೇ 21, 2022
28 °C
ಬೆಂಗಳೂರು ತಂತ್ರಜ್ಞಾನ ಶೃಂಗ

ಸಾಮಾಜಿಕ ಸಂಕೋಲೆಗಳ ನಡುವೆಯೇ ಯಶಸ್ವಿ ಉದ್ಯಮ ಕಟ್ಟಿದ ಸಾಧಕಿಯರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಿಳೆಯರು ಯಶಸ್ವಿ ಉದ್ಯಮಿಗಳಾಗಲು, ಕೇವಲ ಆರಂಭಿಕ ಉತ್ಸಾಹ ಮಾತ್ರವಲ್ಲದೆ ಇಚ್ಛಾಶಕ್ತಿ, ಆತ್ಮ ವಿಶ್ವಾಸ, ಪೂರಕ ಪರಿಸರ ಹಾಗೂ ಕೌಟುಂಬಿಕ ಬೆಂಬಲಗಳ ಜತೆಗೆ ಕೆಲವು ಸಾಮಾಜಿಕ ಮತ್ತು ಸಾಂಸ್ಕೃತಿಕ ಮಿತಿಗಳಿಗೆ ಹೆದರದೆ ಅವುಗಳನ್ನು ಧನಾತ್ಮಕವಾಗಿ ಪರಿವರ್ತಿಸಿಕೊಳ್ಳುವ ಮೂಲಕ ಮುಂದುವರಿಯಬೇಕು.

- ಇದು ಉದ್ದಿಮೆಗಳನ್ನು ಯಶಸ್ವಿಯಾಗಿ ಸ್ಥಾಪಿಸಿ ಮುನ್ನೆಡೆಸುತ್ತಿರುವ ಮಹಿಳೆಯರು, ಸ್ವಂತ ಉದ್ದಿಮೆ ಕಟ್ಟಬೇಕೆಂಬ ಆಕಾಂಕ್ಷಿಗಳಿಗೆ ನೀಡಿದ ಸಲಹೆ.
 
ಬೆಂಗಳೂರು ತಂತ್ರಜ್ಞಾನ ಶೃಂಗ-2021ರ ಕೊನೆಯ ದಿನವಾದ ಶುಕ್ರವಾರ ನಡೆದ ‘ಯಶಸ್ವಿ ಮಹಿಳಾ ಸಂಸ್ಥಾಪಕ ಉದ್ದಿಮೆದಾರರೊಂದಿಗೆ ಕಂಪನಿಗಳನ್ನು ಕಟ್ಟಿದ ಅನುಭವ’ ಕುರಿತ ಗೋಷ್ಠಿಯಲ್ಲಿ ಮಹಿಳಾ ಉದ್ದಿಮೆದಾರರು ತಾವು ಎದುರಿಸಬೇಕಾದ ಸವಾಲುಗಳನ್ನು ಹಂಚಿಕೊಂಡರು.  

ಗೋಷ್ಠಿಯನ್ನು ನಡೆಸಿಕೊಟ್ಟ ಸಿಕ್ವೊಯಾ ಕ್ಯಾಪಿಟಲ್ ಇಂಡಿಯಾ ಮುಖ್ಯ ಸಾರ್ವಜನಿಕ ನೀತಿ ಅಧಿಕಾರಿ ಶ್ವೇತಾ ರಾಜ್ಪಾಲ್ ಕೊಹ್ಲಿ, ‘ಇತ್ತೀಚಿನ ದಿನಗಳಲ್ಲಿ ಕಂಪನಿಗಳನ್ನು ಸ್ಥಾಪಿಸುತ್ತಿರುವ ಮಹಿಳೆಯರು ಹಾಗೂ ಅವರ ಕಂಪನಿಗಳಲ್ಲಿ ಹೂಡಿಕೆ ಮಾಡುವವರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಾಗಿದ್ದರೂ ಶೇಕಡವಾರು ಮಹಿಳಾ ಉದ್ದಿಮೆದಾರರ ಸಂಖ್ಯೆ ಆಶಾದಾಯಕವಾಗಿಲ್ಲ’ ಎಂದರು.

ಭಾರತದ ಸಾಮಾಜಿಕ ಸಂದರ್ಭದಲ್ಲಿ ಕುಟುಂಬದ ಎಲ್ಲ ಸದಸ್ಯರೂ ಒಂದಲ್ಲ ಒಂದು ಹಂತದಲ್ಲಿ ಹೆಣ್ಣುಮಕ್ಕಳ ವಿಷಯದಲ್ಲಿ ಮೂಗು ತೂರಿಸುವುದು ಸಹಜ. ಇಂತಹ ಸನ್ನಿವೇಶಗಳನ್ನು ಜಾಣತನದಿಂದ ನಿವಾರಿಸಿಕೊಳ್ಳಬೇಕಾದ ಸವಾಲಿದ್ದರೂ, ಲಭ್ಯವಿರುವ ತಜ್ಞತೆ ಮತ್ತು ತಾಂತ್ರಿಕ ಅವಕಾಶಗಳನ್ನು ಬಳಸಿಕೊಂಡು ಉದ್ದಿಮೆ ಸ್ಥಾಪಿಸಲು ಸೂಕ್ತ ವಾತಾವರಣವಿದೆ ಎಂದರು.   

ಗೋಷ್ಠಿಯಲ್ಲಿ ಭಾಗವಹಿಸಿದ್ದ ಎಲ್ಲರದೂ ಒಂದೊಂದು ರೀತಿಯ ಸಾಹಸಗಾಥೆ. ಎಳೆಯ ಮಕ್ಕಳಿಗೆ ಸಮಯ ಕೊಡಬೇಕಾದ, ಅಪಘಾತಕ್ಕೀಡಾದ ಗಂಡನನ್ನು ನೋಡಿಕೊಳ್ಳಬೇಕಾದ, ಗರ್ಭಿಣಿಯಾಗಿದ್ದಾಗಲೇ ಹಣಕಾಸಿನ ನೆರವಿಗಾಗಿ ವಿಪರೀತ ಓಡಾಡಬೇಕಾಗಿ ಬಂದಿದ್ದರ ಜತೆಗೆ ಇತರ ಕೌಟುಂಬಿಕ ಅಗತ್ಯಗಳನ್ನು ನಿರ್ವಹಣೆ ಮಾಡುತ್ತಲೇ ತಮ್ಮ ಕಂಪನಿಗಳನ್ನು ಕಟ್ಟಿ ನಿಲ್ಲಿಸಿದ್ದಾರೆ. ಕೊರೊನಾದಂತಹ ಪಿಡುಗು ಒಡ್ಡಿದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ.

ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಕಾನ್ಪುರದಲ್ಲಿ ಫೋರ್ಫರ್ಸ್ ಕಂಪನಿ ಕಟ್ಟಲು ಹೊರಟ ವನ್ಯಾ ಚಂದೇಲ್ ಅವರಿಗೆ ಕೆಲಸಗಾರರೇ ಸಿಗಲಿಲ್ಲ. ಮುಂದೆ ಮದುವೆಯಾಗಿ ಕಂಪನಿ ಮುಚ್ಚಿಕೊಂಡು ಹೋದರೆ ತಾವು ಬೀದಿಪಾಲಾಗುತ್ತೇವೆ ಎಂಬ ಕೆಲಸಗಾರರ ಗ್ರಹಿಕೆಯೇ ಅವರಿಗೆ ಹಿನ್ನೆಡೆಯಾಯಿತು. ಇದರಿಂದ ಆರಂಭದಲ್ಲಿ ಒಳ್ಳೆಯ ಕೆಲಸಗಾರರು ಸಿಗಲಿಲ್ಲ. ಆದರೂ ಸಾಕುಪ್ರಾಣಿಗಳ ಪರಿಕರಗಳನ್ನು ತಯಾರಿಸುವ ಉದ್ಯಮವನ್ನು 2018ರಿಂದ ಯಶಸ್ವಿಯಾಗಿ ನಡೆಸುತ್ತಿದ್ದಾರೆ.

ಫ್ಯಾಬ್ ಆಲಿ ಆ್ಯಂಡ್ ಇಂಡಿಯಾದ ಸಹ-ಸಂಸ್ಥಾಪಕರು ಹಾಗೂ ಸಿಇಒ ಶಿವಾನಿ ಪೊತ್ದಾರ್ ಅವರು ಮೂರು ತಿಂಗಳ ಮಗನನ್ನು ಕಂಕುಳಲ್ಲಿಟ್ಟುಕೊಂಡು ಓಡಾಡಿದ್ದಾರೆ. ತನುಶ್ರೀ ನಗೋರಿ ಅವರು ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ತರಗತಿಗಳನ್ನು ನಡೆಸುವ ‘ಡೌಟ್ ನೆಟ್’ಗೆ ಸಹ ಸಂಸ್ಥಾಪಕರಾಗಿದ್ದು, ಅದನ್ನು ಕಟ್ಟಿ ನಿಲ್ಲಿಸಿದ್ದಾರೆ. ಅವರ ಪ್ರಕಾರ, ಎಲ್ಲವೂ ಸರಿ ಇರುವ ಕಾಲ ಯಾವಾಗಲೂ ಸಿಗುವುದಿಲ್ಲ. ತಾವು ಮಾಡುತ್ತಿರುವುದು ಸರಿ ಎನಿಸಿದಾಗ ಹೆದರಿಕೆ ಇಲ್ಲದೆ ಮುನ್ನುಗ್ಗಬೇಕು ಎಂಬ ಸಲಹೆ ನೀಡಿದರು. ತಮ್ಮ ಎಂಟು ತಿಂಗಳ ಮಗಳಿಗೆ ಸಮಯ ಕೊಡಲಾಗದ ವಿಷಯವಾಗಿ ಮೊದಮೊದಲು ಅಪರಾಧ ಪ್ರಜ್ಞೆ ಕಾಡಿದರೂ ಅದನ್ನು ಸರಿದೂಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಗಿ ತಿಳಿಸಿದರು. ಹೆಣ್ಣಾಗಿ, ತಾಯಿಯಾಗಿ ಇತರರಿಗಿಂತ ತಾನು ಕಡಿಮೆ ಸಾಮರ್ಥ್ಯ ಹೊಂದಿದ್ದೇನೆ ಎಂಬ ಭಾವನೆಯನ್ನು ಯಾವಾಗಲೂ ಬೆಳಸಿಕೊಳ್ಳಲಿಲ್ಲ ಎಂದರು.

ಇದನ್ನೂ ಓದಿ... ಕ್ಯಾನ್ಸರ್‌ ಥೆರಪಿ ಪರಿಕರ ಉತ್ಪಾದನೆಯಲ್ಲಿ ಭಾರತಕ್ಕೆ ದೊಡ್ಡ ಅವಕಾಶ: ತಜ್ಞರ ಅಭಿಮತ

ನುಶೌರಾ ಸಂಸ್ಥಾಪಕಿ ಮತ್ತು ನಿರ್ದೇಶಕಿ ತನುಶ್ರೀ ಜೈನ್ 20-22 ವರ್ಷಕ್ಕೆಲ್ಲ ಮದುವೆ ಮಾಡಿಕೊಡುವ ಸಂಪ್ರದಾಯವಿರುವ ಕುಟುಂಬದಿಂದ ಹಾಗೂ ಹೆಣ್ಣುಮಕ್ಕಳು ಸ್ವತಂತ್ರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವುದಿಲ್ಲ ಎಂಬ ಅಭಿಪ್ರಾಯವಿರುವ ಸಮಾಜದಿಂದ ಬಂದ ತಾನು, ಈ ಸವಾಲುಗಳನ್ನು ಕುಟುಂಬದ ನೆರವಿನಿಂದ ನಿಭಾಯಿಸಿದ್ದಾಗಿ ತಿಳಿಸಿದರಲ್ಲದೇ, ಮಹಿಳೆಯರ ನೆರವಿಗೆ ಮಹಿಳೆಯರಷ್ಟೇ ಬಂದರೂ ಪವಾಡವೇ ನಡೆದು ಬಿಡುತ್ತದೆ ಎಂದರು.

ಬೇಸಿಸ್ ನ ಸಂಸ್ಥಾಪಕಿ ಹೆನಾ ಮೆಹ್ತಾ ಅವರು, ಮಹಿಳೆಯರೇ ಕಟ್ಟಿ ಬೆಳೆಸಿರುವ ಯಶಸ್ವೀ ಉದ್ದಿಮೆಗಳ ಉದಾಹರಣೆಗಳು ಭಾರತದ ಸಂದರ್ಭದಲ್ಲಿ ಹೇರಳವಾಗಿದ್ದು ಅವುಗಳಿಂದ ಹೆಣ್ಣುಮಕ್ಕಳು ಸ್ಪೂರ್ತಿ ಪಡೆಯಬೇಕೆಂದು ಸಲಹೆ ಮಾಡಿದರು.

ಇದನ್ನೂ ಓದಿ... ಇ.ವಿ. ವಲಯದ ಹಾರ್ಡ್‌ವೇರ್ ಕೊರತೆ ನೀಗಲು ಒತ್ತು ಅಗತ್ಯ: ಮುಸ್ತಫಾ ವಾಜಿದ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು