ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಖಾತೆಗೆ ಶ್ರೀರಾಮುಲು ನಕಾರ, ವರಿಷ್ಠರಿಗೆ ದೂರು ಹೇಳಲು ಸಿದ್ಧತೆ

ಇಕ್ಕಟ್ಟಿಗೆ ಸಿಲುಕಿದ ಮುಖ್ಯಮಂತ್ರಿ
Last Updated 12 ಅಕ್ಟೋಬರ್ 2020, 21:28 IST
ಅಕ್ಷರ ಗಾತ್ರ

ಬೆಂಗಳೂರು: ಖಾತೆ ಬದಲಾವಣೆಯಿಂದ ತೀವ್ರ ಅಸಮಾಧಾನಗೊಂಡಿರುವ ಹಿರಿಯ ಸಚಿವ ಬಿ.ಶ್ರೀರಾಮುಲು ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ತೀರ್ಮಾನಿಸಿದ್ದಾರೆ.

ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆಯನ್ನು ಹಿಂದಕ್ಕೆ ಪಡೆದು, ಅವರಿಗೆ ಸಮಾಜ ಕಲ್ಯಾಣ ಖಾತೆಯನ್ನು ಹಂಚಿಕೆ ಮಾಡಿ ಸೋಮವಾರ ಅಧಿಸೂಚನೆ ಹೊರಡಿಸಲಾಗಿತ್ತು. ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಅವರಿಗೂ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಬಳಿ ಇದ್ದ ಸಮಾಜ ಕಲ್ಯಾಣ ಖಾತೆಯನ್ನು ಶ್ರೀರಾಮುಲು ಅವರಿಗೆ ನೀಡಲಾಗಿದೆ.

ಖಾತೆ ಬದಲಾವಣೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಬಳ್ಳಾರಿಯಿಂದ ಬೆಂಗಳೂರಿಗೆ ದೌಡಾಯಿಸಿದ ಶ್ರೀರಾಮುಲು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಅಸಮಾಧಾನ ತೋಡಿಕೊಂಡರು. ‘ಹೊಸ ಖಾತೆಯನ್ನು ವಹಿಸಿಕೊಳ್ಳಲು ಸಾಧ್ಯವಿಲ್ಲ. ಕೋವಿಡ್‌ ಸಂದರ್ಭದಲ್ಲಿ ಏಕಾಏಕಿ ತಮ್ಮ ಖಾತೆ ಬದಲಾವಣೆ ಮಾಡಿರುವುದರಿಂದ ತಾವು ಸಮರ್ಥರಲ್ಲ ಎಂಬ ಸಂದೇಶ ಹೋಗುತ್ತದೆ’ ಎಂಬುದಾಗಿ ಹೇಳಿದರೆಂದು ಮೂಲಗಳು ತಿಳಿಸಿವೆ.

‘ಖಾತೆ ಬದಲಾವಣೆ ಬಗ್ಗೆ ತಪ್ಪು ಕಲ್ಪನೆ ಬೇಡ. ಅಸಮರ್ಥ ಎಂಬ ಕಾರಣಕ್ಕೆ ಬದಲಾವಣೆ ಮಾಡಿಲ್ಲ. ಚೆನ್ನಾಗಿಯೇ ಕೆಲಸ ಮಾಡಿದ್ದೀರಿ. ಉಪಚುನಾವಣೆ ಬಳಿಕ ಹಲವರ ಖಾತೆಗಳು ಬದಲಾವಣೆ ಆಗಬೇಕಿವೆ. ಮುಂಚಿತವಾಗಿಯೇ ಬದಲು ಮಾಡಿದ್ದೇನೆ. ನೀವು ಬಯಸಿದ ಸಮಾಜ ಕಲ್ಯಾಣ ಖಾತೆ ನೀಡಿದ್ದು, ಉತ್ತಮ ಕೆಲಸ ಮಾಡಲು ಅವಕಾಶವಿದೆ. ಆರೋಗ್ಯ ಮತ್ತು ವೈದ್ಯ ಶಿಕ್ಷಣ ಒಬ್ಬರ ಬಳಿ ಇದ್ದರೆ ಸೂಕ್ತ ಎಂಬ ಕಾರಣಕ್ಕೆ ಹಂಚಿಕೆ ಮಾಡಿದ್ದೇನೆ’ ಎಂದು ಯಡಿಯೂರಪ್ಪ ಸಮಜಾಯಿಷಿ ನೀಡಿದರು ಎಂದು ಹೇಳಲಾಗಿದೆ.

ಒಂದು ಹಂತದಲ್ಲಿ ಭಾವೋದ್ವೇಗಕ್ಕೆ ಒಳಗಾದ ಶ್ರೀರಾಮುಲು, ‘ರಾಜೀನಾಮೆ ನೀಡಲು ತಯಾರಿದ್ದೇನೆ’ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡರು ಎನ್ನಲಾಗಿದೆ.

ಅಸಮಾಧಾನಕ್ಕೆ ಕಾರಣ: 2018 ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಅಧಿಕಾರಕ್ಕೆ ಬಂದರೆ ಉಪಮುಖ್ಯಮಂತ್ರಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಖಾತೆ ಹಂಚಿಕೆ ವೇಳೆ ಸಮಾಜ ಕಲ್ಯಾಣ ಇಲಾಖೆಗೆ ಬೇಡಿಕೆ ಇಟ್ಟಾಗ, ಮುಖ್ಯಮಂತ್ರಿಯವರು ಸ್ಪಂದಿಸಿರಲಿಲ್ಲ. ಎರಡೂ ಬೇಡಿಕೆಗಳು ಈಡೇರಲಿಲ್ಲ. ಈಗ ಇದ್ದಕ್ಕಿದ್ದಂತೆ ಖಾತೆ ಬದಲಾವಣೆ ಮಾಡಿದ್ದರಿಂದ ತಾವು ಅಸಮರ್ಥ ಎಂಬ ಸಂದೇಶ ಸಾರ್ವಜನಿಕವಾಗಿ ರವಾನೆ ಆಗುತ್ತದೆ. ವರ್ಚಸ್ಸಿಗೆ ಧಕ್ಕೆ ಆಗುತ್ತದೆ ಎಂಬ ಅಳಕು ಅವರನ್ನು ಕಾಡಿದೆ. ಅಲ್ಲದೆ, ಉಪಮುಖ್ಯಮಂತ್ರಿ ಸ್ಥಾನದ ಬೇಡಿಕೆಯನ್ನು ನೆನಪಿಸಲು ಈ ಸಂದರ್ಭ ಬಳಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಬೇಸರದ ಪ್ರಶ್ನೆಯೇ ಇಲ್ಲ: ಕಾರಜೋಳ

‘ಸಮಾಜ ಕಲ್ಯಾಣ ನನ್ನ ಬಳಿ ಹೆಚ್ಚುವರಿಯಾಗಿತ್ತು. ಅದನ್ನು ಶ್ರೀರಾಮುಲು ಅವರಿಗೆ ನೀಡಲಾಗಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಒಬ್ಬರಿಗೇ ನೀಡಿರುವುದು ಸರಿಯಾಗಿಯೇ ಇದೆ. ಯಾರಿಗೂ ಬೇಸರ ಆಗುವ ಪ್ರಶ್ನೆಯೇ ಇಲ್ಲ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

‘ಆಡಳಿತ ದೃಷ್ಟಿಯಿಂದ ಸರಿಯಾದ ಕ್ರಮ‘

‘ಮುಖ್ಯಮಂತ್ರಿಯವರು ನನ್ನ ಮೇಲೆ ಭರವಸೆ ಇಟ್ಟು, ಕೊರೊನಾ ನಿಯಂತ್ರಿಸಿ ಜನರ ಆರೋಗ್ಯ ಕಾಪಾಡುವ ಜವಾಬ್ದಾರಿ ನೀಡಿದ್ದಾರೆ. ಅದಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿಭಾಯಿಸುತ್ತೇನೆ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.‘ತಾಂತ್ರಿಕವಾಗಿ ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ಒಂದೇ ಆಗಿರಬೇಕು. ದೇಶದಲ್ಲಿ ಕೇಂದ್ರ ಮಟ್ಟದಲ್ಲಿ ಮತ್ತು ಇತರ ರಾಜ್ಯಗಳಲ್ಲಿ ಒಂದೇ ವ್ಯವಸ್ಥೆ ಇದೆ. ಆಡಳಿತದ ದೃಷ್ಟಿಯಿಂದ ಮತ್ತು ತಾಂತ್ರಿಕವಾಗಿ ಬೇರೆ ಇರುವುದು ಸರಿಯಲ್ಲ’ ಎಂದರು.

***

ಕೋವಿಡ್‌ ನಿರ್ವಹಣೆಯಲ್ಲಿ ವೈಫಲ್ಯ ಆಗಿರುವುದರಿಂದಲೇ ಆರೋಗ್ಯ ಖಾತೆ ಬದಲಾವಣೆ ಮಾಡಿದ್ದಾರೆ. ಆರೋಗ್ಯ ಸಚಿವರ ಅಸಾಮರ್ಥ್ಯ ಬಯಲಾಗಿದೆ.

- ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT