ಶುಕ್ರವಾರ, ಮೇ 14, 2021
21 °C
ನೆರವಿನ ಭರವಸೆ

ಗ್ರಂಥಾಲಯ ಮರು ನಿರ್ಮಾಣಕ್ಕೆ ಬೆಂಬಲ; ‘ಗ್ರಂಥಾಲಯ ಇಲಾಖೆಯಿಂದ ವಸ್ತುಸ್ಥಿತಿ ವರದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಉದಯಗಿರಿಯ ಶಾಂತಿನಗರದಲ್ಲಿ ಸುಟ್ಟುಹೋಗಿರುವ ಗ್ರಂಥಾಲಯದ ಮರುಸ್ಥಾಪನೆಗಾಗಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪ್ರಕಾಶಕರು ಪುಸ್ತಕ ಹಾಗೂ ಆರ್ಥಿಕ ನೆರವು ನೀಡಲು ಮುಂದಾಗಿದ್ದಾರೆ ಎಂದು ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಬಿ.ಮಂಜುನಾಥ್ ತಿಳಿಸಿದ್ದಾರೆ.

ಬೆಂಕಿಗೆ ಆಹುತಿಯಾಗಿರುವ, ಸೈಯದ್ ಇಸಾಕ್ ನಡೆಸುತ್ತಿದ್ದ ಗ್ರಂಥಾಲಯವಿದ್ದ ಜಾಗವು ಯಾರ ಒಡೆತನದಲ್ಲಿದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಉದ್ಯಾನದ ಜಾಗವಾಗಿದ್ದರೂ ಗ್ರಂಥಾಲಯ ನಿರ್ಮಿಸಲು ಕಾನೂನಿನಲ್ಲಿ ಅವಕಾಶವಿದೆ. ಉದ್ಯಾನವಲ್ಲದ ಪಾಲಿಕೆ ಜಾಗವಾಗಿದ್ದರೂ ಗ್ರಂಥಾಲಯ ನಿರ್ಮಿಸಬಹುದು. ಕೇಂದ್ರ ಸರ್ಕಾರದ ರಾಜಾರಾಮ್ ಮೋಹನ್ ರಾಯ್ ಗ್ರಂಥಾಲಯ ಪ್ರತಿಷ್ಠಾನದವರು ಸಹ ಈ ಗ್ರಂಥಾಲಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಗತ್ಯಬಿದ್ದರೆ ಅವರೂ ನೆರವು ನೀಡುವರು
ಎಂದು ತಿಳಿಸಿದ್ದಾರೆ.

‘ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರ ಮೂಲಕ ಸರ್ಕಾರದ ಪ್ರಧಾನ  ಕಾರ್ಯದರ್ಶಿಯವರಿಗೂ ವಸ್ತುಸ್ಥಿತಿ ಬಗ್ಗೆ ವರದಿ ಕಳುಹಿಸಲಾಗಿದ್ದು, ಇಲಾಖೆ ಮೂಲಕವೂ ನೆರವು ನೀಡುವ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು’ ಎಂದಿದ್ದಾರೆ.

‘ಉಸಿರಿರುವರೆಗೂ ಪತ್ರಿಕೆ ಕೊಡುಗೆ’: ಈ ಗ್ರಂಥಾಲಯಕ್ಕೆ, ತಮ್ಮ ಉಸಿರು ಇರುವವರೆಗೂ ವಾರ ಪತ್ರಿಕೆ, ಮಾಸ ಪತ್ರಿಕೆ ಹಾಗೂ ರಾಜ್ಯ ಮಟ್ಟದ ಒಂದು ದಿನ ಪತ್ರಿಕೆಯನ್ನು ತರಿಸಿ ಕೊಡುವುದಾಗಿ ಹಾಗೂ ಇದರೊಂದಿಗೆ ಪ್ರತಿ ವರ್ಷವೂ ₹ 1 ಸಾವಿರ ಕೊಡುಗೆ ನೀಡುವುದಾಗಿ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿವೃತ್ತ ಉಪ ನಿರ್ದೇಶಕ ಸ.ರ.ಸುದರ್ಶನ ತಿಳಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೂಚನೆ ಮೇರೆಗೆ, ಸ್ಥಳಕ್ಕೆ ಭೇಟಿ ನೀಡಿದ್ದ ಮತ್ತೊಬ್ಬ ಉಪಾಧ್ಯಕ್ಷ ಎಂ.ರಾಜೇಂದ್ರ ‘ಈ ಮೊದಲು ಗ್ರಂಥಾಲಯವಿದ್ದ ಜಾಗವನ್ನೇ ಅವರಿಗೆ ಮಂಜೂರು ಮಾಡಿಸಲಾಗುವುದು’ ಎಂದಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಇತಿಹಾಸ ತಜ್ಞ ಪ್ರೊ.ನಂಜರಾಜ ಅರಸ್‌, ತಮ್ಮ ಬಳಿಯಿರುವ ಗ್ರಂಥಗಳನ್ನು ಕೊಡುವುದಾಗಿ ತಿಳಿಸಿದರು.

ಪಂಡಿತ್‌ ರಾಜೀವ್ ತಾರಾನಾಥ್‌ ನೆರವು

ಮೈಸೂರು: ಸೈಯದ್‌ ಇಸಾಕ್‌ ಅವರಿಗೆ ಸರೋದ್‌ ವಾದಕ ಪಂ. ರಾಜೀವ್‌ ತಾರಾನಾಥ್‌ ಅವರು
₹ 50 ಸಾವಿರ ನೆರವು ಪ್ರಕಟಿಸಿದ್ದಾರೆ. ‘ಭಾನುವಾರ ಅವರ ಜತೆ ಮಾತನಾಡಿದೆ. ಎರಡು ದಿನಗಳ ಬಳಿಕ ನನ್ನನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ವೈಯಕ್ತಿಕವಾಗಿ ₹ 50 ಸಾವಿರ ಹಾಗೂ ಕೆಲವು ಪುಸ್ತಕಗಳನ್ನು ಅವರಿಗೆ ಕೊಡುತ್ತೇನೆ. ಇಸಾಕ್‌ಗೆ ನೆರವಾಗುವಂತೆ ನನ್ನ ಹಿತೈಷಿಗಳಿಗೂ ತಿಳಿಸಿದ್ದೇನೆ’ ಎಂದು ರಾಜೀವ್‌ ತಾರಾನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಓದು ಬರಹ ತಿಳಿಯದ ವ್ಯಕ್ತಿಯೊಬ್ಬರು 11 ಸಾವಿರ ಪುಸ್ತಕಗಳನ್ನು ಇಟ್ಟುಕೊಂಡು ನಡೆಸುತ್ತಿದ್ದ ಗ್ರಂಥಾಲಯವನ್ನು ನೀಚರು ಸುಟ್ಟುಹಾಕಿದ್ದಾರೆ. ಈ ಘಟನೆಯಿಂದ ಇಡೀ ದೇಶಕ್ಕೆ ನಾಚಿಕೆಯಾಗಬೇಕು’ ಎಂದು ಖಂಡಿಸಿದರು.

ಪಿಯುಸಿಎಲ್‌ ಖಂಡನೆ

ಗ್ರಂಥಾಲಯಕ್ಕೆ ಬೆಂಕಿ ಹಚ್ಚಿ ಪುಸ್ತಕಗಳನ್ನು ಸುಟ್ಟಿರುವುದಕ್ಕೆ ಅಖಿಲ ಭಾರತ ಪ್ರಜಾವೇದಿಕೆ (ಎಐಪಿಎಫ್‌) ಮತ್ತು ಮೈಸೂರಿನ ನಾಗರಿಕ ಸ್ವಾತಂತ್ರ್ಯಕ್ಕಾಗಿ ಜನರ ಒಕ್ಕೂಟ (ಪಿಯುಸಿಎಲ್‌)ದ ಸತ್ಯಶೋಧನಾ ಸಮಿತಿ ತೀವ್ರ ಆತಂಕ ವ್ಯಕ್ತಪಡಿಸಿದೆ. ಬೆಂಕಿ ಹಚ್ಚಿದ್ದು ಅನಾಗರಿಕ ಕೃತ್ಯ ಎಂದು ಕಟುವಾಗಿ ಟೀಕಿಸಿದ್ದು, ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದೆ. ಮೈಸೂರು ಮಹಾನಗರ ಪಾಲಿಕೆ ಆಡಳಿತವು, ಅದೇ ಜಾಗದಲ್ಲಿ ಬಹುಮಹಡಿಯ ಕಟ್ಟಡ ಕಟ್ಟಿಕೊಟ್ಟು, ಗ್ರಂಥಾಲಯ ಬೃಹತ್ ಪ್ರಮಾಣದಲ್ಲಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದೆ.

ಡಾ.ಲಕ್ಷ್ಮೀನಾರಾಯಣ, ಡಾ.ರತಿರಾವ್‌, ಡಾ.ಪಂಡಿತಾರಾಧ್ಯ, ಜಿ.ಪಿ.ಬಸವರಾಜು, ಎನ್‌.ಪುರುಷೋತ್ತಮ, ತನ್ವೀರ್ ಪಾಷಾ, ಕಲೀಂ, ನಾ.ದಿವಾಕರ ಸ್ಥಳಕ್ಕೆ ಭೇಟಿ ನೀಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು