ಬುಧವಾರ, ಮೇ 12, 2021
19 °C

ಪ್ರಧಾನಿ ಕೆಲಸಕ್ಕೆ ಜನಮನ್ನಣೆ: ನಳಿನ್‌ಕುಮಾರ್‌ ಕಟೀಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಸಾಮಾನ್ಯ ಸಾಧನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸಗಳನ್ನು ದೇಶದ ಜನರು ಮೆಚ್ಚಿಕೊಂಡಿರುವುದೇ ಈ ಸಾಧನೆಗೆ ಕಾರಣ ಎಂದು ಬಿಜೆಪಿ ರಾಜ್ಯ ಘಕಟದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದ್ದಾರೆ.

ಚುನಾವಣಾ ಫಲಿತಾಂಶ ಕುರಿತು ಪ್ರತಿಕ್ರಿಯಿಸಿರುವ ಅವರು, ‘ಅಸ್ಸಾಂನಲ್ಲಿ ಸಿಎಎ ವಿರುದ್ಧ ಷಡ್ಯಂತ್ರವನ್ನು ಮೀರಿ ಬಿಜೆಪಿ ಮತ್ತೆ ಗೆಲುವು ಸಾಧಿಸಿದೆ. ಪುದುಚೆರಿಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮೊದಲ ಬಾರಿಗೆ ಅಧಿಕಾರಕ್ಕೇರಿದೆ. ಪಶ್ಚಿಮ ಬಂಗಾಳದಲ್ಲಿ ಶಾಸಕರ ಸಂಖ್ಯೆ 3 ರಿಂದ 80ರ ಸಮೀಪಕ್ಕೆ ಬಂದಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಪಕ್ಷದ ಮತ ಗಳಿಕೆ ಹೆಚ್ಚಿದೆ. ನರೇಂದ್ರ ಮೋದಿ ಮತ್ತು ಬಿಜೆಪಿ ಜತೆ ದೇಶವಿದೆ ಎಂಬುದು ಮತ್ತೆ ಸಾಬೀತಾಗಿದೆ’ ಎಂದು ತಿಳಿಸಿದ್ದಾರೆ.

ಕೆಲವು ವರ್ಷಗಳ ಹಿಂದೆ ಈ ರಾಜ್ಯಗಳಲ್ಲಿ ಬಿಜೆಪಿಯ ಅಸ್ತಿತ್ವವೇ ಇಲ್ಲ. ಮುಂದಿನ ದಿನಗಳಲ್ಲಿ ಈ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರಕ್ಕೇರುವ ವಿಶ್ವಾಸ ಮೂಡಿದೆ. ಚುನಾವಣೆ ನಡೆದಿರುವ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್‌ ಹೀನಾಯ ಸೋಲು ಕಂಡಿದೆ. ಅತಿ ಹಳೆಯ ಪಕ್ಷ ಇತಿಹಾಸದ ಪುಟ ಸೇರುವಂತೆ ದೇಶದ ಜನರು ತೀರ್ಪು ನೀಡಿದ್ದಾರೆ ಎಂದು ನಳಿನ್‌ ಪ್ರತಿಕ್ರಿಯಿಸಿದ್ದಾರೆ.

ಫಲಿತಾಂಶದಿಂದ ನಿರಾಸೆಯಾಗಿಲ್ಲ: ಅಶ್ವತ್ಥನಾರಾಯಣ

ಬೆಂಗಳೂರು: ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶದಿಂದ ಬಿಜೆಪಿಗೆ ನಿರಾಸೆಯಾಗಿಲ್ಲ. ಮುಂಬರುವ ದಿನಗಳಲ್ಲಿ ಬಿಜೆಪಿ ಅಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಬಿಜೆಪಿಯ ಕೇರಳ ಚುನಾವಣಾ ಸಹ ಪ್ರಭಾರಿಯಾಗಿದ್ದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.

ಚುನಾವಣಾ ಫಲಿತಾಂಶದ ಕುರಿತು ಹೇಳಿಕೆ ನೀಡಿರುವ ಅವರು, ‘ಕೆಲವು ಕಾರಣಗಳಿಂದಾಗಿ ಪಿಣರಾಯಿ ವಿಜಯನ್‌ ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ. ಅಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಕೊನೆಗಾಲದಲ್ಲಿದೆ. ಮುಂದಿನ ಚುನಾವಣೆ ವೇಳೆಗೆ ಬಿಜೆಪಿಯನ್ನು ಬಲಪಡಿಸಿ ಅಧಿಕಾರಕ್ಕೆ ತರಲಾಗುವುದು’ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಒಂದು ಸ್ಥಾನ ಹೆಚ್ಚುವರಿಯಾಗಿ ಬಿಜೆಪಿಗೆ ದೊರಕಿದೆ. ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯ ಸೋಲಿಗೂ ರಾಜ್ಯ ಸರ್ಕಾರ ಕೋವಿಡ್‌ ನಿರ್ವಹಣೆಯಲ್ಲಿ ಕೈಗೊಂಡಿರುವ ಕ್ರಮಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಸಂಘಟಿತ ಪ್ರಯತ್ನಕ್ಕೆ ಗೆಲುವು: ಬೊಮ್ಮಾಯಿ

ಬೆಂಗಳೂರು: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲರೂ ಸಂಘಟಿತರಾಗಿ ನಡೆಸಿದ ಪ್ರಯತ್ನದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

‘ನಾನು, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ವಸತಿ ಸಚಿವ ವಿ. ಸೋಮಣ್ಣ ಮತ್ತು ಬೀದರ್‌ ಸಂಸದ ಭಗವಂತ ಖೂಬಾ ಜವಾಬ್ದಾರಿ ಹಂಚಿಕೊಂಡು ಕೆಲಸ ಮಾಡಿದೆವು. ಬಸವಕಲ್ಯಾಣ ಕ್ಷೇತ್ರದ ಜನರು ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ’ ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು