ನವದೆಹಲಿ: ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧದ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ತನಿಖಾ ವರದಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

ಅತ್ಯಾಚಾರ ಆರೋಪ ಮಾಡಿದ್ದ ಸಂತ್ರಸ್ತ ಯುವತಿಯು ಎಸ್‌ಐಟಿ ರಚನೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಜೆ.ಕೆ. ಮಾಹೇಶ್ವರಿ ಅವರಿದ್ದ ಪೀಠವು, ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚಿಸಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಅಮಾನತಿನಲ್ಲಿ ಇರಿಸಿತು.

ಪ್ರಕರಣದಲ್ಲಿ ಎಸ್‌ಐಟಿಯಿಂದ ಕ್ಲೀನ್ ಚಿಟ್ ಪಡೆದಿದ್ದ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಇದರಿಂದಾಗಿ ಮತ್ತೆ ಸಂಕಷ್ಟ ಎದುರಾದಂತಾಗಿದೆ.

ಎಸ್‌ಐಟಿ ರಚನೆಯ ಸಿಂಧುತ್ವ ಪ್ರಶ್ನಿಸಲಾದ ಅರಜಿಯ ವಿಚಾರಣೆಗೆ ನಿಗದಿಯಾಗಿರುವ ಮಾರ್ಚ್ 9ರಂದೇ ಪ್ರಕರಣದ ವಿಲೇವಾರಿ ಮಾಡುವಂತೆ ಪೀಠವು ಹೈಕೋರ್ಟ್‌ಗೆ ತಿಳಿಸಿದೆ.

ತನಿಖೆ ನಡೆಸಿರುವ ಎಸ್‌ಐಟಿಯು ಅಂತಿಮ ವರದಿಯನ್ನು ಈಗಾಗಲೇ ಒಂದನೇ ಜೆಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೂ ಈ ಪ್ರಕರಣವನ್ನು ವಹಿಸಲಾಗಿದೆ. ಈ ಸಂಬಂಧ ದೂರುದಾರ ಯುವತಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದು ಜಾರಕಿಹೊಳಿ ಪರ ವಕೀಲ ರಂಜಿತ್ ಕುಮಾರ್ ಪೀಠದೆದುರು ತಿಳಿಸಿದರು.

ಈ ವೇಳೆ ಮಧ್ಯ ಪ್ರವೇಶಿಸಿದ ಅರ್ಜಿದಾರ ಯುವತಿ ಪರ ವಾದ ಮಂಡಿಸಿದ ವಿಕಾಸ್ ಸಿಂಗ್, ‘ಇದು ಸಚಿವ ಸ್ಥಾನದಲ್ಲಿದ್ದವರ ವಿರುದ್ಧದ ಅತ್ಯಾಚಾರ ಆರೋಪ. ಆರೋಪಿಯು ಈ ಸಂಬಂಧ ಮುಖ್ಯಮಂತ್ರಿಗೆ ದೂರು ನೀಡಿದ್ದು, ಮುಖ್ಯಮಂತ್ರಿಯವರೇ ತನಿಖೆಗಾಗಿ ಎಸ್‌ಐಟಿ ರಚಿಸಿದ್ದಾರೆ. ಸಂತ್ರಸ್ತ ಯುವತಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೀಡಿದ್ದ ದೂರಿನ ತನಿಖೆಯನ್ನೂ ಅದೇ ಎಸ್‌ಐಟಿಗೆ ವಹಿಸಲಾಗಿದೆ’ ಎಂದರು.

ಯಾರು ತನಿಖೆ ನಡೆಸಬೇಕು ಎಂಬುದನ್ನು ಆರೋಪಿಯೇ ನಿರ್ಧರಿಸಿದಂತಾಗಿದೆ. ಅಲ್ಲದೆ, ಎಸ್ಐಟಿ ರಚನೆಯ ಸಿಂಧುತ್ವವನ್ನು ಪ್ರಶ್ನಿಸಲಾದ ಅರ್ಜಿಯ ವಿಚಾರಣೆಯು ಹೈಕೋರ್ಟ್‌ನಲ್ಲಿ ಬಾಕಿ ಇದೆ. ಆದರೂ ತನಿಖೆ ಪೂರ್ಣಗೊಳಿಸಿರುವ ಎಸ್ಐಟಿಯು ಸಾಕ್ಷಾಧಾರಗಳ ಕೊರತೆ ಇದೆ ಎಂಬ ಕಾರಣ ಮುಂದಿರಿಸಿ, ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದೆ ಎಂದು ಅವರು ವಿವರಿಸಿದರು.

ಎಸ್‌ಐಟಿಯು ತನಿಖಾ ವರದಿಯನ್ನು ಈಗಾಗಲೇ ಸೂಚಿಸಿದ ನ್ಯಾಯಾಲಯಕ್ಕೆ ಸಲ್ಲಿಸಿದೆ. ಸಂತ್ರಸ್ತೆ ಮತ್ತು ಆರೋಪಿಗೆ ಸಂಬಂಧಿಸಿದ ಆಯಾಮಗಳ ಕುರಿತು ನ್ಯಾಯಾಲಯವು ಪರಿಶೀಲನೆ ನಡೆಸಲಿದೆ ಎಂದು ಎಸ್‌ಐಟಿ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ಹೇಳಿದರು.

‘ಹೈಕೋರ್ಟ್ ಸಮಾಜದ ಹಿತದೃಷ್ಟಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಈ ಪ್ರಕರಣದ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಲಿ. ಅಲ್ಲಿಯವರೆಗೆ ಎಸ್‌ಐಟಿ ಸಲ್ಲಿಸಿರುವ ವರದಿಯ ಕುರಿತು ಯಾವುದೇ ಕ್ರಮ ಕೈಗೊಳ್ಳುವುದು ಬೇಡ’ ಎಂದು ಪೀಠ ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.